ADVERTISEMENT

ಹೊರಗುತ್ತಿಗೆ ರದ್ದಪಡಿಸುವಂತೆ ರಸ್ತೆ ತಡೆ

ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಬಂಧನ, ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2018, 12:11 IST
Last Updated 21 ಜುಲೈ 2018, 12:11 IST
ರಾಯಚೂರು ಹೊರವಲಯ ಬೈಪಾಸ್‌ ರಸ್ತೆಯಲ್ಲಿ  ಟಿಯುಸಿಐ ಸಂಯೋಜಿತ ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಶನಿವಾರ ರಸ್ತೆ ತಡೆ ನಡೆಸಿದರು 
ರಾಯಚೂರು ಹೊರವಲಯ ಬೈಪಾಸ್‌ ರಸ್ತೆಯಲ್ಲಿ  ಟಿಯುಸಿಐ ಸಂಯೋಜಿತ ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಶನಿವಾರ ರಸ್ತೆ ತಡೆ ನಡೆಸಿದರು    

ರಾಯಚೂರು: ತುಂಗಭದ್ರಾ ಯರಮರಸ್ ವೃತ್ತದ 738 ಕಾರ್ಮಿಕರನ್ನು ಬೀದಿಪಾಲು ಮಾಡಲಿರುವ ಹೊರಗುತ್ತಿಗೆ ರದ್ದುಪಡಿಸಲು ಒತ್ತಾಯಿಸಿ ನಗರ ಹೊರವಲಯ ಬೈಪಾಸ್ ರಸ್ತೆಯಲ್ಲಿ ಲಿಂಗಸುಗೂರು ರಾಜ್ಯ ಹೆದ್ದಾರಿಯಲ್ಲಿ ಶನಿವಾರ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದ ಟಿಯುಸಿಐ ಸಂಯೋಜಿತ ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರನ್ನು ಪೊಲೀಸರು ಬಂಧಿಸಿ, ಆನಂತರ ಬಿಡುಗಡೆ ಮಾಡಿದರು.

ನಗರದ ಟಿಪ್ಪು ಸುಲ್ತಾನ ಉದ್ಯಾನದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಶನಿವಾರ 12ನೇ ದಿನ ಪೂರೈಸಿದರೂ, ಸರ್ಕಾರದಿಂದ ಸ್ಪಂದನೆ ದೊರೆತಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಸಂಚಾರ ತಡೆಯಿಂದ ಅಂದಾಜು ಕಿ.ಮೀ. ನಷ್ಟು ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ವಾಹನ ಸವಾರರು ಹಾಗೂ ಪ್ರಯಾಣಿಕರು ತೊಂದರೆ ಅನುಭವಿಸಿದರು. ನೀರಾವರಿ ಅಧಿಕಾರಿಗೆ ಮನವಿ ಸಲ್ಲಿಸಿದ ನಂತರ ಹೋರಾಟವನ್ನು ಮುಂದುವರೆಸಿದ ಪರಿಣಾಮ ಪೊಲೀಸರು ಹೋರಾಟಗಾರರನ್ನು ಪೊಲೀಸ್‌ ವ್ಯಾನ್‌ ಹಾಗೂ ಬಸ್‌ನಲ್ಲಿ ಬಂಧಿಸಿ ಸಾಗಿಸಿದರು.

ADVERTISEMENT

ಕಳೆದ 25 ವರ್ಷಗಳಿಂದ ತುಂಗಭದ್ರಾ ಎಡದಂಡೆ ಕಾಲುವೆಯ ನೀರು ನಿರ್ವಹಣೆ ಮಾಡುತ್ತಾ ಬಂದಿರುವ ಯರಮರಸ್‌, ಸಿಂಧನೂರು ಹಾಗೂ ಸಿರವಾರ ವಿಭಾಗ ಒಳಗೊಂಡ ಯರಮರಸ್ ವೃತ್ತದ ಕಾರ್ಮಿಕರನ್ನು ನೀರಾವರಿ ನಿಗಮದ ಅಧಿಕಾರಿಗಳು ಬೀದಿಪಾಲು ಮಾಡಲು ಮುಂದಾಗಿದ್ದಾರೆ ಎಂದು ದೂರಿದರು.

2014–15 ರಿಂದ ವರ್ಷದ ಆರಂಭದಲ್ಲಿ ಹೊರ ಸಂಪನ್ಮೂಲ ಏಜೆನ್ಸಿಗಳ ಮೂಲಕ ಕಾರ್ಮಿಕರನ್ನು ಸರಬರಾಜು ಮಾಡಿಕೊಳ್ಳಲು ಅಧಿಕಾರಿಗಳು ತಯಾರಿ ನಡೆಸುತ್ತಿದ್ದಂತೆಯೇ ವಿರೋಧಿಸುತ್ತಾ ಬಂದಿದ್ದರಿಂದ ಅಧಿಕಾರಿಗಳು ಸಭೆ ನಡೆಸಿ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿಸಿಕೊಂಡು ಹೊರಗುತ್ತಿಗೆ ನಿರ್ಧಾರ ಕೈಬಿಟ್ಟಿದ್ದಾರೆ. ಆದರೆ, ಕರ್ನಾಟಕ ನೀರಾವರಿ ನಿಗಮ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಲೆಕ್ಕಾಧಿಕಾರಿ ಆದೇಶದಂತೆ ಹೊರಗುತ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದ್ದು, ಬಿಡ್‌ ಓಪನ್ ಮಾಡಲಾಗಿದೆ ಎಂದು ಆರೋಪಿಸಿದರು.

ಕಳೆದ ನಾಲ್ಕು ತಿಂಗಳಿನಿಂದ ವೇತನ ಪಾವತಿ ಮಾಡಿಲ್ಲ. ಕಾರ್ಮಿಕರು ಕುಟುಂಬ ನಿರ್ವಹಣೆ ಮಾಡಲು ಕಷ್ಟವಾಗಿದೆ. ಕೂಡಲೇ ವೇತನ ಪಾವತಿ ಮಾಡಬೇಕು. ಸೇವಾ ಹಿರಿತನ ಹಾಗೂ ಉದ್ಯೋಗ ಭದ್ರತೆ ಕಾಪಾಡಬೇಕು. ವರ್ಷಪೂರ್ತಿ ಕೆಲಸ ನೀಡಬೇಕು ಎಂದು ಆಗ್ರಹಿಸಿದರು.

ಅಧ್ಯಕ್ಷ ಆರ್.ಮಾನಸಯ್ಯ ಮಾತನಾಡಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಾರ್ಮಿಕರ ಸಮಸ್ಯೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಸರ್ಕಾರ ಹೊರಗುತ್ತಿಗೆಯನ್ನು ರದ್ದುಪಡಿಸುವವರೆಗೆ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾರ್ಮಿಕ ಅಮರೇಶ ಜವಳಗೇರಾ ಅವರು ಅಸ್ವಸ್ಥಗೊಂಡಿದ್ದರಿಂದ ಅಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು.

ಜಿ.ಅಡವಿರಾವ್, ಜಿ.ಅಮರೇಶ, ವಾದಿರಾಜ, ಬಸವರಾಜ, ಶಂಕರಪ್ಪಗೌಡ, ಹುಚ್ಚರೆಡ್ಡಿ, ಮಹ್ಮದ್ ಗೌಸ್, ವೆಂಕಟೇಶ, ರಮೇಶ ಕೊಟ್ನೆಕಲ್, ಸಿದ್ದಪ್ಪಗೌಡ, ರಾಮಣ್ಣ, ಗ್ಯಾನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.