
ರಾಯಚೂರು: ‘ಕನ್ನಡ ಸಾಹಿತ್ಯ ಪರಿಷತ್ತಿನ ನಿಯಮ ಉಲ್ಲಂಘಿಸಿರುವ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರಂಗಣ್ಣ ಪಾಟೀಲ ಅವರನ್ನು ಪದಚ್ಯುತಗೊಳಿಸಿ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು’ ಎಂದು ಕಸಾಪ ಸಿಂಧನೂರು ತಾಲ್ಲೂಕು ಘಟಕದ ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ ಅಂತರಗಂಗಿ ಒತ್ತಾಯಿಸಿದ್ದಾರೆ.
‘ಜಿಲ್ಲೆಯ ತಾಲ್ಲೂಕು ಘಟಕಗಳ ಕ್ರಿಯಾಶೀಲ ಅಧ್ಯಕ್ಷರನ್ನು ಹುದ್ದೆಯಿಂದ ಕೆಳಗಿಳಿಸಿದ್ದಾರೆ. ಕಸಾಪ ಕೇಂದ್ರ ಸಮಿತಿಯ ನಿಯಮಾವಳಿಗಳನ್ನು ಗಾಳಿಗೆ ತೂರಿ ದ್ರೋಹ ಬಗೆದಿದ್ದಾರೆ. ನಿರಂಕುಶ ಆಡಳಿತ ನಡೆಸುತ್ತಿರುವ ಇಂಥವರನ್ನು ಒಂದು ಕ್ಷಣವೂ ಹುದ್ದೆಯಲ್ಲಿ ಇಡಬಾರದು’ ಎಂದು ಕಸಾಪ ಕೇಂದ್ರ ಸಮಿತಿಗೆ ಮನವಿ ಮಾಡಿದ್ದಾರೆ.
‘ರಂಗಣ್ಣ ಪಾಟೀಲ ಅವರು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷರಾದ ನಂತರ ಜಿಲ್ಲೆಯಲ್ಲಿ ಸಾಹಿತ್ಯ ಪರಿಷತ್ತಿನ ಎಲ್ಲಾ ಕಾರ್ಯಕ್ರಮಗಳು ಮೂಲೆ ಗುಂಪಾಗಿವೆ. ಜಿಲ್ಲೆಯಲ್ಲಿ ಸಿಂಧನೂರು ಹಾಗೂ ರಾಯಚೂರು ತಾಲ್ಲೂಕು ಸಕ್ರಿಯವಾಗಿ ಕಾರ್ಯನಿರ್ವಹಿಸಿವೆ. ಇದು ಜಿಲ್ಲೆಯ ಸಾಹಿತಿಗಳು ಮತ್ತು ಕವಿಗಳಿಗೆ ಬರಹಗಾರರಿಗೆ ಗೊತ್ತಿರುವ ವಿಷಯವಾಗಿದೆ’ ಎಂದು ಹೇಳಿದ್ದಾರೆ.
‘ಸಿಂಧನೂರಿನಲ್ಲಿ 56 ದತ್ತಿಗಳು ಆಗಿವೆ ಎಂದು ಹೇಳಿಕೊಳ್ಳುವ ರಂಗಣ್ಣ ಅವರು 3 ವರ್ಷಗಳಲ್ಲಿ ಒಂದೂ ಕಾರ್ಯಕ್ರಮಕ್ಕೆ ಬಂದಿಲ್ಲ. ನಾನು ಮಾಡಿದ ಕಾರ್ಯಕ್ರಮ ಎಂದರೆ ಪರಿಷತ್ತಿನ ನಡೆ ಹಳ್ಳಿ ಕಡೆ, ಪ್ರತಿ ತಿಂಗಳು ದಾರ್ಶನಿಕರ ಕವಿಗೋಷ್ಠಿ, ಹೈಸ್ಕೂಲಿಗೊಂದು ಹಳೆಗನ್ನಡ ಓದು, ಕಾಲೇಜಿಗೊಂದು ಕಾವ್ಯ ಓದು., ಪ್ರಾಥಮಿಕ ಶಾಲೆಯಲ್ಲಿ ವಚನಗಳ ಶ್ರವಣ, ಪ್ರತಿ ವರ್ಷ ಬಹುಭಾಷಾ ಕವಿಗೋಷ್ಠಿ, ಶರಣರ ದಾರ್ಶನಿಕರ ಕವಿ ಸಾಹಿತಿಗಳ ಜಯಂತಿಗಳ ಆಚರಣೆ, ಹೊಸ ದತ್ತಿಗಳು, ಸಿಂಧನೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೆ ರಾಜ್ಯ ಮಟ್ಟದ ಪ್ರಶಸ್ತಿ ಹೀಗೆ ಅನೇಕ ಕಾರ್ಯಕ್ರಮ ಮಾಡಿರುವೆ’ ಎಂದು ತಿಳಿಸಿದ್ದಾರೆ.
‘ಕೆಲಸ ಮಾಡಿದವರು ಹಾಗೂ ಕೆಲಸ ಮಾಡದವರನ್ನು ಒಂದೇ ತಕ್ಕಡಿಯಲ್ಲಿ ತೂಗುವುದು ಯಾವ ನ್ಯಾಯ? ಏನೂ ಕೆಲಸ ಮಾಡದೇ ಬೇರೆಯವರು ಮಾಡಿದ ಕೆಲಸವನ್ನು ನಾನೇ ಮಾಡಿದ್ದೇನೆ ಎಂದು ಬಹಿರಂಗವಾಗಿ ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದ. ರಂಗಣ್ಣ ಅವರ ಹಸಿ ಸುಳ್ಳು ಎಲ್ಲರಿಗೂ ತಿಳಿದಿದೆ. ಜಿಲ್ಲಾಮಟ್ಟದಲ್ಲಿ ನಿಷ್ಕ್ರಿಯಗೊಂಡಿರುವ ಕಸಾಪವನ್ನು ಸಕ್ರಿಯಗೊಳಿಸುವ ದಿಸೆಯಲ್ಲಿ ತಕ್ಷಣ ಆಡಳಿತಾಧಿಕಾರಿಯನ್ನು ನೇಮಿಸಬೇಕು’ ಎಂದು ಒತ್ತಾಯಿಸಿದ್ದಾರೆ.
‘ಫೆಬ್ರುವರಿ 12ರಂದು ನಡೆದ ಜಿಲ್ಲಾ ಕಾರ್ಯಕಾರಿ ಸಮಿತಿಯ ನಿರ್ಣಯಕ್ಕೆ ಮನ್ನಣೆ ಇಲ್ಲ. ಜಿಲ್ಲಾಧ್ಯಕ್ಷರ ಆದೇಶವನ್ನೇ ರದ್ದುಪಡಿಸಿ ಕಸಾಪ ಕೇಂದ್ರ ಸಮಿತಿ ನನ್ನನ್ನೇ ಮುಂದುವರಿಸಿದೆ. ಸೆಪ್ಟೆಂಬರ್ 22ರಂದು ರಂಗಣ್ಣ ಪಾಟೀಲ ಅವರಿಗೆ ಲಿಖಿತಪತ್ರ ಕಳಿಸಿ ಇದನ್ನು ಸ್ಪಷ್ಟಪಡಿಸಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.