ADVERTISEMENT

ಮಾಹಿತಿ ಹಕ್ಕು ಅರ್ಜಿಗಳಿಗೆ ಉತ್ತರ ನೀಡಿ: ರಾಜ್ಯ ಮಾಹಿತಿ ಆಯುಕ್ತರ ತಾಕೀತು

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 7:27 IST
Last Updated 17 ಆಗಸ್ಟ್ 2025, 7:27 IST
ರಾಯಚೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ತರಬೇತಿ ಕಾರ್ಯಾಗಾರದಲ್ಲಿ ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ, ರಾಜಶೇಖರ ಎಸ್. ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಪಾಲ್ಗೊಂಡಿದ್ದರು
ರಾಯಚೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ತರಬೇತಿ ಕಾರ್ಯಾಗಾರದಲ್ಲಿ ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ, ರಾಜಶೇಖರ ಎಸ್. ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಪಾಲ್ಗೊಂಡಿದ್ದರು    

ರಾಯಚೂರು: ‘ಮಾಹಿತಿ ಕೋರಿ ಬರುವ ಅರ್ಜಿಗಳನ್ನು ಕಡೆಗಣಿಸಿ ಉಡಾಫೆಯಾಗಿ ನಡೆದುಕೊಳ್ಳುವುದು ಸರಿಯಲ್ಲ. ಅರ್ಜಿಗಳಿಗೆ ಶೀಘ್ರ ಉತ್ತರ ನೀಡಿ ವಿಲೇವಾರಿ ಮಾಡಬೇಕು’ ಎಂದು ಪೀಠ ಸಂಖ್ಯೆ–4ರ ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟಿ ಹಾಗೂ ಪೀಠ ಸಂಖ್ಯೆ–5ರ ರಾಜಶೇಖರ ಅವರು ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ರುದ್ರಣ್ಣ ಹರ್ತಿಕೋಟಿ ಅವರು, ‘ಆಯೋಗವು ಮಾಹಿತಿ ಹಕ್ಕು ಕಾಯಿದೆ ಅನ್ವಯ 30 ದಿನಗಳಲ್ಲಿ ಮಾಹಿತಿ ನೀಡಿದಿದ್ದರೆ ಉಚಿತವಾಗಿ ನೀಡಬೇಕಾಗುತ್ತದೆ. ಇದು ಸರ್ಕಾರಕ್ಕೆ ಹೊರೆಯಾಗುತ್ತದೆ. ಆದ್ದರಿಂದ ಲಭ್ಯವಿರುವ ಮಾಹಿತಿ ಕೊಡಬೇಕು’ ಎಂದು ತಿಳಿಸಿದರು.

‘ಅರ್ಜಿಗಳಿಗೆ ನಿಗದಿತ ಕಾಲಾವಧಿಯಲ್ಲಿ ಮಾಹಿತಿ ನೀಡಿದರೆ ಬ್ಲಾಕ್ ಮೇಲರ್‌ಗಳು ಹುಟ್ಟಿಕೊಳ್ಳುವುದಿಲ್ಲ. ಯಾವುದೇ ಅರ್ಜಿಯ ಬಗ್ಗೆ ಉದಾಸೀನ ಬೇಡ. ಅನೇಕ ಪಿಐಒಗಳು ನಿಯಮಗಳನ್ನು ಸರಿಯಾಗಿ ಓದುವುದಿಲ್ಲ. ಹೀಗೆ ಆಗಬಾರದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ನಿಗದಿತ ಅವಧಿಯೊಳಗೆ ಮಾಹಿತಿ ಒದಗಿಸದ ಅಧಿಕಾರಿಗಳಿಗೆ ದಂಡ ವಿಧಿಸಲು ಕಾಯಿದೆಯಲ್ಲಿಯೇ ಅವಕಾಶವಿದೆ. ಒಂದು ದಿನಕ್ಕೆ ₹250 ದಂತೆ 100 ದಿನಗಳವರೆಗೆ ದಂಡ ವಿಧಿಸಲು ಅವಕಾಶವಿದೆ. ಮಾಹಿತಿ ಒದಗಿಸಲು ವಿಳಂಬ ಮಾಡಿರುವುದು ಗೊತ್ತಾದಲ್ಲಿ ಕನಿಷ್ಠ ₹ 25 ಸಾವಿರ ವರೆಗೆ ದಂಡ ವಿಧಿಸಲು ಅವಕಾಶವಿದೆ’ ಎಂದು ಹೇಳಿದರು.

‘ದಂಡ ಹಾಕಿದಲ್ಲಿ ಅದು ಆಯಾ ನೌಕರರ ಸೇವಾ ಪುಸ್ತಕದಲ್ಲಿ ದಾಖಲಾಗುತ್ತದೆ. ಅವರ ಸಂಬಳದಲ್ಲಿ ಹಣ ಕಡಿತವಾಗುತ್ತದೆ. ಸೇವಾ ಪುಸ್ತಕದಲ್ಲಿ ಇದು ದಾಖಲಾದಲ್ಲಿ ಮುಂದೆ ನಿವೃತ್ತಿ ಕಾಲದಲ್ಲಿ ಪಿಂಚಣಿಗೆ ಸಮಸ್ಯೆಯಾಗಲಿದೆ’ ಎಂದು ಎಚ್ಚರಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಹಾಗೂ ವಿವಿಧ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳು ಹಾಜರಿದ್ದರು.

Cut-off box - ಸೂಕ್ತ ಹಿಂಬರಹ ನೀಡಲು ಸೂಚನೆ ಪೀಠ ಸಂಖ್ಯೆ–5ರ ರಾಜ್ಯ ಮಾಹಿತಿ ಆಯುಕ್ತ ರಾಜಶೇಖರ ಎಸ್. ಮಾತನಾಡಿ ‘ಮಾಹಿತಿ ಹಕ್ಕು ಅರ್ಜಿ ಸ್ವೀಕೃತಿಯಾದ ಕೂಡಲೇ ವಿಲೇವಾರಿ ಮಾಡಲು ನಿಯಮಾನುಸಾರ ಕ್ರಮ ವಹಿಸಬೇಕು. ಮಾಹಿತಿ ಲಭ್ಯವಿಲ್ಲದಿದ್ದಲ್ಲಿ ಅದಕ್ಕೆ ಸೂಕ್ತ ಹಿಂಬರಹ ನೀಡಬೇಕು’ ಎಂದು ತಿಳಿಸಿದರು. ‘ಪ್ರಥಮ ಮೇಲ್ಮನವಿ ಸಲ್ಲಿಸುವ ಅರ್ಜಿಗಳ ವಿಚಾರಣೆಯನ್ನು ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳು ನಿಯಮಬದ್ಧವಾಗಿ ಮಾಡಿದರೆ ಸಮಸ್ಯೆಯೇ ಇರುವುದಿಲ್ಲ. ಅನೇಕ ಕಡೆಗಳಲ್ಲಿ ಪ್ರಥಮ ಮೇಲ್ಮನವಿ ವಿಚಾರಣೆಗಳೇ ಸರಿಯಾಗಿ ಆಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.