ADVERTISEMENT

ರಿಮ್ಸ್‌ನಲ್ಲಿ ‘ಇ–ಆಸ್ಪತ್ರೆ’ ಅನುಷ್ಠಾನ ಆರಂಭ

ಗಣಕಯಂತ್ರದ ಜಾಲದಲ್ಲಿ ಪ್ರತಿ ವಿಭಾಗಗಳ ಮಾಹಿತಿ ಕ್ರೊಢೀಕರಣ

ನಾಗರಾಜ ಚಿನಗುಂಡಿ
Published 24 ಜುಲೈ 2018, 19:30 IST
Last Updated 24 ಜುಲೈ 2018, 19:30 IST
ರಾಯಚೂರು ವೈದ್ಯಕೀಯ ಸಂಸ್ಥೆಯ ಬೋಧಕ ಆಸ್ಪತ್ರೆಯ ನೋಟ 
ರಾಯಚೂರು ವೈದ್ಯಕೀಯ ಸಂಸ್ಥೆಯ ಬೋಧಕ ಆಸ್ಪತ್ರೆಯ ನೋಟ    

ರಾಯಚೂರು: ಕಾಗದ ರಹಿತ ಆಡಳಿತ ವ್ಯವಸ್ಥೆ ಅಳವಡಿಸಿಕೊಳ್ಳುತ್ತಿರುವ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್‌) ಬೋಧಕ ಆಸ್ಪತ್ರೆಯು ಮೊದಲ ಹಂತವಾಗಿ ನೋಂದಣಿ ವ್ಯವಸ್ಥೆಯನ್ನು ಗಣಕೀಕರಣಗೊಳಿಸಿದೆ.

ನೋಂದಣಿ ವಿಭಾಗದಲ್ಲಿ ಹೊಸ ಗಣಕಯಂತ್ರಗಳು ಮತ್ತು ಸಿಬ್ಬಂದಿಗೆ ಅಗತ್ಯ ಸಾಫ್ಟ್‌ವೇರ್‌ ತರಬೇತಿ ನೀಡಲಾಗಿದೆ. ಆಸ್ಪತ್ರೆಗೆ ಬರುವ ಪ್ರತಿ ರೋಗಿಗಳ ವಿವರ ಮತ್ತು ಚಿಕಿತ್ಸೆಯ ಪಡೆದುಕೊಳ್ಳುವ ಮಾಹಿತಿ ಎಲ್ಲವೂ ಗಣಕದಲ್ಲಿ ಸಂಗ್ರಹ ಮಾಡಿಕೊಳ್ಳುವ ವ್ಯವಸ್ಥೆ ಜಾರಿಯಾಗಿದೆ. ಈ ಮೊದಲಿನಂತೆ ನೋಂದಣಿಯ ಬಳಿಕ ಪೇಪರ್‌ ಕೊಡುವ ಬದಲಾಗಿ ಆಧಾರ್‌ ಸಂಖ್ಯೆ ಆಧರಿಸಿ ಚಿಕಿತ್ಸೆ ಒದಗಿಸಲಾಗುತ್ತದೆ. ಆಧಾರ್‌ ಸಂಖ್ಯೆ ಗುರುತಿನ ಮೇಲೆ ಚಿಕಿತ್ಸೆ ವಿಧಾನ ಹಾಗೂ ವೈದ್ಯರ ಸಲಹೆಗಳು ಗಣಕಯಂತ್ರದಲ್ಲಿ ಸಂಗ್ರಹವಾಗುತ್ತಾ ಹೋಗುತ್ತದೆ.

ಎರಡನೇ ಹಂತದಲ್ಲಿ ಬಿಲ್ಲಿಂಗ್‌, ಔಷಧ ದಾಸ್ತಾನು ಮತ್ತು ವಿತರಣೆ, ಜನನ ಮತ್ತು ಮರಣ ನೋಂದಣಿ, ಸಿಬ್ಬಂದಿ ಹಾಗೂ ಆಸ್ಪತ್ರೆಯೊಳಗಿನ ಪ್ರಯೋಗಾಲಯಗಳು (ಲ್ಯಾಬ್‌), ರಕ್ತ ಸಂಗ್ರಹ ವಿಭಾಗಗಳನ್ನು ಗಣಕೀಕರಣಗೊಳಿಸುವ ಪ್ರಕ್ರಿಯೆ ನಡೆಯಲಿದೆ.

ADVERTISEMENT

ಮೂರನೇ ಹಂತದಲ್ಲಿ ಆಸ್ಪತ್ರೆಯ ಆಡಳಿತ ಮಾಹಿತಿ, ರೋಗಿಗಳ ಮಾಹಿತಿ, ಹಣಕಾಸು ಲೆಕ್ಕ ನಿರ್ವಹಣೆ ಹೀಗೆ ಆಸ್ಪತ್ರೆಯ ಆಡಳಿತಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳು, ವಿವಿಧ ವಿಭಾಗಗಳು, ಮಾಹಿತಿಗಳು ನಿಖರವಾಗಿ ಮತ್ತು ತಕ್ಷಣ ಲಭ್ಯವಾಗುವ ರೀತಿಯಲ್ಲಿ ಮಾಡಲಾಗುತ್ತಿದೆ.

ಆರೋಗ್ಯ ಸೇವಾ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿ ಆಗಿಸುವುದು ಸರ್ಕಾರದ ಉದ್ದೇಶ. ರಾಷ್ಟ್ರೀಯ ಆರೋಗ್ಯ ಅಭಿಯಾನ, ಡಿಜಿಟಲ್‌ ಇಂಡಿಯಾ ಕಾರ್ಯಕ್ರಮದಡಿ ರಾಜ್ಯ ಸರ್ಕಾರವು ಈಚೆಗೆ ಆರಂಭಿಸಿರುವ ‘ಆರೋಗ್ಯ ಕರ್ನಾಟಕ’ದ ಭಾಗವಾಗಿ ‘ಇ–ಆಸ್ಪತ್ರೆ’ ಜಾರಿಗೊಳಿಸಲು ರಿಮ್ಸ್‌ ಆಯ್ಕೆ ಮಾಡಿಕೊಳ್ಳಲಾಗಿದೆ. ಗಣಕೀಕರಣ ವ್ಯವಸ್ಥೆ ಅಳವಡಿಸಿಕೊಳ್ಳುವುದಕ್ಕೆ ವಿಶೇಷ ಅನುದಾನ ಒದಗಿಸಲಾಗಿದೆ. ಇ–ಆಸ್ಪತ್ರೆಗೆ ಅಗತ್ಯವಾಗುವ ಪೀಠೋಪಕರಣ ಮತ್ತು ಗಣಕಯಂತ್ರಗಳನ್ನು ಈಗಾಗಲೇ ಖರೀದಿಸುವ ಕೆಲಸ ಪೂರ್ಣಗೊಂಡಿದೆ.

ರಾಜ್ಯದ ಬೇರೆ ಜಿಲ್ಲೆಗಳ ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಈಗಾಗಲೇ ಇ–ಆಸ್ಪತ್ರೆ ಜಾರಿಯಾಗಿದೆ. ಈ ವರ್ಷ ಯೋಜನೆಗೆ ಆಯ್ಕೆ ಮಾಡಿಕೊಂಡಿರುವ ಉತ್ತರ ಕರ್ನಾಟಕ ಭಾಗದ ಆಸ್ಪತ್ರೆಗಳಲ್ಲಿ ರಿಮ್ಸ್‌ ಕೂಡಾ ಸೇರ್ಪಡೆಗೊಂಡಿದೆ.

ಕಾರ್ಯನಿರ್ವಹಣೆ ಸುಲಭ:
ರೋಗಿಗೆ ಸಂಬಂಧಿಸಿದ ಮಾಹಿತಿಯು ಬೆರಳ ತುದಿಯಲ್ಲಿ ಸಿಗುವುದರಿಂದ ವೈದ್ಯರು ಕೂಡಲೇ ಚಿಕಿತ್ಸೆ ಆರಂಭಿಸುವುದಕ್ಕೆ ನೆರವಾಗಲಿದೆ. ಪ್ರತಿ ಹಂತದಲ್ಲೂ ರಸೀದಿ ಹಾಗೂ ಇತರೆ ವಿವರ ಪತ್ರಗಳನ್ನು ಹಿಡಿದುಕೊಂಡು ಹೋಗುವುದು ರೋಗಿಗಳಿಗೂ ಕಷ್ಟಸಾಧ್ಯವಾಗಿತ್ತು. ಇನ್ನು ಮುಂದೆ ಈ ತಾಪತ್ರಯ ದೂರವಾಗಲಿದೆ.
ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ವೈದ್ಯಕೀಯ ಸೇವೆಯ ವಿಳಂಬ ಮತ್ತು ರೋಗಿಗಳ ಸಂಬಂಧಿಗಳು ಅತ್ತಿತ್ತ ಓಡಾಡುವುದು ಈ ಮೂಲಕ ತಪ್ಪಲಿದೆ. ಗಣಕಯಂತ್ರದ ಮೂಲಕವೇ ವೈದ್ಯರ ಸಲಹೆ, ಸೂಚನೆಗಳನ್ನು ಪರಿಶೀಲಿಸಿ ಚಿಕಿತ್ಸೆ ಮುಂದುವರಿಸುವುದಕ್ಕೆ ಇ–ಆಸ್ಪತ್ರೆ ನೆರವಾಗಲಿದೆ. ಹೊಸ ವ್ಯವಸ್ಥೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸರ್ಕಾರ ಸೂಚಿಸಿರುವುದರಿಂದ ರಿಮ್ಸ್‌ನಲ್ಲಿ ಗಣಕೀಕರಣಗೊಳಿಸುವ ಪ್ರಕ್ರಿಯೆ ತ್ವರಿತವಾಗಿ ನಡೆಯುತ್ತಿದೆ.

‘ಇ–ಆಸ್‍ಪತ್ರೆ ಜಾರಿಯಿಂದ ಆಡಳಿತ ವೆಚ್ಚವು ಕ್ರಮೇಣ ಕಡಿಮೆಯಾಗುವ ಸಾಧ್ಯತೆ ಇದೆ. ಪ್ರತಿ ತಿಂಗಳು ಪೇಪರ್‌ ಹಾಗೂ ಕಂಪ್ಯೂಟರ್‌ಗೆ ಸಂಬಂಧಿಸಿದ ಸ್ಟೇಷನರಿ ಖರೀದಿಗೆ ₨40 ಸಾವಿರ ವೆಚ್ಚವಾಗುತ್ತಿದೆ. ಇನ್ನು ಮುಂದೆ ಈ ವೆಚ್ಚ ತಗ್ಗಲಿದೆ. ಮುಂದಿನ ಎರಡು ತಿಂಗಳೊಳಗೆ ಎಲ್ಲ ಹಂತದಲ್ಲೂ ಗಣಕೀಕರಣ ವ್ಯವಸ್ಥೆ ಬರಲಿದೆ’ ಎಂದು ರಿಮ್ಸ್‌ ಆಡಳಿತ ನಿರ್ದೇಶಕಿ ಡಾ.ಕವಿತಾ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಅದಕ್ಕೆ ತಕ್ಕಂತೆ ಮೂಲ ಸೌಕರ್ಯಗಳ ಅಭಿವೃದ್ಧಿ ನಡೆಯುತ್ತಿದೆ. ಇ–ಆಸ್ಪತ್ರೆ ಜಾರಿಯಿಂದ ಜನಸಾಮಾನ್ಯರಿಗೆ ತುಂಬಾ ಅನುಕೂಲವಾಗುತ್ತದೆ. ಕೆಲವರು ಪೇಪರ್‌ ಕಳೆದುಕೊಳ್ಳುವುದು ಮತ್ತು ಲ್ಯಾಬ್‌ ರಿಪೋರ್ಟ್‌ ಕಳೆದುಕೊಳ್ಳುವ ಪ್ರಸಂಗಗಳು ನಡೆಯುತ್ತಿದ್ದವು. ಹೊಸ ವ್ಯವಸ್ಥೆಯಲ್ಲಿ ಲ್ಯಾಬ್‌ ರಿಪೋರ್ಟ್‌ ಮುದ್ರಣ ಮಾಡುವ ಅಗತ್ಯವೂ ಇರುವುದಿಲ್ಲ’ ಎಂದು ರಿಮ್ಸ್‌ ಆಸ್ಪತ್ರೆಯ ಅಧೀಕ್ಷಕ ಡಾ.ರಮೇಶ ಹೇಳಿದರು.

ರಿಮ್ಸ್‌ನಲ್ಲಿ ಇ–ಆಸ್ಪತ್ರೆ ಜಾರಿಗೊಳಿಸುವುದಕ್ಕೆ ಸರ್ಕಾರವು ನಿರ್ದೇಶನ ಹಾಗೂ ಅನುದಾನ ಒದಗಿಸಿದೆ. ಎನ್‌ಐಟಿ ವಿಭಾಗದ ಮೇಲ್ವಿಚಾರಣೆಯಲ್ಲಿ ಹೊಸ ವ್ಯವಸ್ಥೆ ಜಾರಿಯಾಗುತ್ತಿದೆ
ಡಾ.ಕವಿತಾ, ಪಾಟೀಲರಿಮ್ಸ್‌ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.