
ಜಾಲಹಳ್ಳಿಗೆ ಸಮೀಪದ ಗಲಗ ಗ್ರಾಮದ ಲಂಬಾಣಿ ತಾಂಡಾ ಸಂಪರ್ಕಿಸುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವುದು
ಜಾಲಹಳ್ಳಿ: ಸಮೀಪದ ಗಲಗ ಗ್ರಾಮ ವ್ಯಾಪ್ತಿಯ ಗಲಗ ಲಂಬಾಣಿ ತಾಂಡಕ್ಕೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಜನ ಸಂಚಾರಿಸಲು ಸಾಧ್ಯವಿಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ.
ತಾಂಡಾ ಸುಮಾರು 500ಕ್ಕೂ ಹೆಚ್ಚು ಜನಸಂಖ್ಯೆಯಿದ್ದು ನೂರಕ್ಕೂ ಹೆಚ್ಚು ಮನೆಗಳು ಇವೆ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ. ನಿತ್ಯ ಶಾಲಾ ಮಕ್ಕಳು ಸೇರಿದಂತೆ ಜನ ಸಂಚರಿಸಲು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ.
ಮಳೆ ನಿರಂತರವಾಗಿ ಸುರಿದ ಕಾರಣ ರಸ್ತೆಯಲ್ಲಿರುವ ಮಣ್ಣು ಕೊಚ್ಚಿ ಹೋಗಿದೆ. ದೊಡ್ಡ ಪ್ರಮಾಣದ ಗುಂಡಿಗಳಾಗಿವೆ. ಬೆಟ್ಟದ ಮೇಲೆ ತಾಂಡಾ ಇರುವುದರಿಂದ ದಿನ ನಿತ್ಯ ಅಗತ್ಯ ವಸ್ತುಗಳ ಸಾಗಣೆಗೆ ತೊಂದರೆ ಆಗಿದೆ.
ಕಳೆದ 15 ವರ್ಷಗಳ ಹಿಂದೆ ಜಿ.ಪಂ ಅನುದಾನದಲ್ಲಿ ರಸ್ತೆಗೆ ಡಾಂಬರೀಕರಣ ಮಾಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ರಸ್ತೆಗೆ ಯಾವುದೇ ರೀತಿಯ ದುರಸ್ತಿ ಮಾಡಿಲ್ಲ. ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಕ್ಷಣವೇ ತಾಂಡಾಕ್ಕೆ ಭೇಟಿ ನೀಡಿ ರಸ್ತೆಯ ಅವ್ಯವಸ್ಥೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಾಂಡಾ ನಿವಾಸಿಗಳಾದ ದೇನಪ್ಪ ನಾಯ್ಕ್, ಬಾಷಾ ನಾಯ್ಕ್, ದಾವಲ್ ಸಾಬ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.