ADVERTISEMENT

ಲಿಂಗಸುಗೂರು | ರಸ್ತೆ ಗಿಜಿಗಿಜಿ, ಸವಾರರಿಗೆ ತಪ್ಪದ ಕಿರಿಕಿರಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 6:04 IST
Last Updated 15 ಸೆಪ್ಟೆಂಬರ್ 2025, 6:04 IST

ಲಿಂಗಸುಗೂರು: ಪಟ್ಟಣದ ಕೆಲವು ರಸ್ತೆಗಳು ಮಳೆಗೆ ಹಾಳಾಗಿದ್ದರೆ, ಇನ್ನೂ ಕೆಲವು ಕುಡಿಯುವ ನೀರಿನ ಕಾಮಗಾರಿಯಿಂದಾಗಿ ಹಾಳಾಗಿವೆ. ವಾಹನ ಸವಾರರು ಹಾಗೂ ಸಾರ್ವಜನಿಕರು ಇನ್ನಿಲ್ಲದ ಕಿರಿಕಿರಿ ಅನುಭವಿಸುತ್ತ ತಾಲ್ಲೂಕು ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಪುರಸಭೆ ವ್ಯಾಪ್ತಿಯ ಬಹುಪಾಲು ರಸ್ತೆಗಳು ಹದಗೆಟ್ಟು ಗುಂಡಿಗಳಾಗಿ ಸಂಚಾರಕ್ಕೆ ಸಂಚಕಾರ ಎದುರಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆ ಒಂದೆಡೆಯಾದರೆ, ಮತ್ತೊಂದಡೆ ಪಟ್ಟಣದಲ್ಲಿ ನಡೆಯುತ್ತಿರುವ ಅಮೃತ ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್ ಕಾಮಗಾರಿಗಾಗಿ ರಸ್ತೆ ಅಗೆಯುತ್ತಿದ್ದರಿಂದ ರಸ್ತೆ ಹಾಳಾಗತೊಡಗಿವೆ.

ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ತಿರುಗಾಡಿದ್ದರಿಂದ ವಿಸಿಬಿ ಕಾಲೇಜು ಮುಂಭಾಗದ ರಸ್ತೆ ಹಾಳಾಗಿತ್ತು. ರಸ್ತೆಗೆ ಹೊಂದಿಕೊಂಡೇ ಕುಡಿಯುವ ನೀರಿನ ಪೈಪ್ ಲೈನ್ ಹಾಕಿದ್ದರಿಂದ ರಸ್ತೆ ಮತ್ತಷ್ಟು ಹಾಳಾಗಿ ಹೊಂಡ, ಗುಂಡಿಗಳಾಗಿ ಸಂಚಾರಕ್ಕೆ ಅಡ್ಡಿಯಾಗಿವೆ.

ADVERTISEMENT

ಇದೇ ರಸ್ತೆಗುಂಟ ನಾಲ್ಕು ಪಿಯು ಕಾಲೇಜುಗಳು ಹಾಗೂ ಆಸ್ಪತ್ರೆಗಳು ಇರುವುದರಿಂದ ರೋಗಿಗಳು ಹಾಗೂ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ರಸ್ತೆಯಲ್ಲಿನ ಗುಂಡಿಗಳನ್ನು ದಾಟಿಕೊಂಡೇ ಹೋಗಿ ಬರಬೇಕಾಗಿದೆ, ಆಂಬುಲೆನ್ಸ್ ಹಾಗೂ ಇತರೆ ವಾಹನಗಳು ಗುಂಡಿಯಲ್ಲಿ ಸಿಲುಕಿ ಪರದಾಡುವಂತಾಗಿದೆ.

ಅಗ್ನಿ ಶಾಮಕದಳ ಎದುರಿನ ರಸ್ತೆ, ಬೈಪಾಸ್ ರಸ್ತೆಯಿಂದ ಎಸಿ ಕಚೇರಿ ವರೆಗೆ ತೆರಳುವ ರಸ್ತೆ, ಎಲ್ ಐಸಿಯಿಂದ ಎಸಿ ವಸತಿಗೃಹದ ಮುಂದಿನ ರಸ್ತೆ, ಪಟ್ಟಣದ ಬಸ್ ನಿಲ್ದಾಣ ವೃತ್ತದಿಂದ ಲಕ್ಷ್ಮೀದೇವಿ ದೇವಸ್ಥಾನವರೆಗೆ, ನಾರಾಯಣಪುರ ರಸ್ತೆ, ಅಂಚೆ ಕಚೇರಿಯಿಂದ ಗೌಳಿಪುರ ರಸ್ತೆ, ಬೈಪಾಸ್ ರಸ್ತೆಯಿಂದ ಅಯ್ಯಪ್ಪಸ್ವಾಮಿ ದೇವಸ್ಥಾನವರೆಗೆ ಹಾಗೂ ಕೆಲವು ಒಳ ರಸ್ತೆ ಸೇರಿದಂತೆ ಪುರಸಭೆ ವ್ಯಾಪ್ತಿಯ ಕರಡಕಲ್, ಹುಲಿಗುಡ್ಡ ಹಾಗೂ ಕಸಬಾಲಿಂಗಸುಗೂರು ಗ್ರಾಮಗಳಲ್ಲಿನ ರಸ್ತೆಗಳು ಹದಗೆಟ್ಟು ಸಾರ್ವಜನಿಕರು ಹಾಗೂ ವಾಹನ ಸವಾರರು ನಿತ್ಯವೂ ಕಿರಿಕಿರಿ ಅನುಭವಿಸುವಂತಾಗಿದೆ. ಕೂಡಲೇ ರಸ್ತೆ ದುರಸ್ಥಿಗೆ ಮುಂದಾಗುವಂತೆ ವಾಹನ ಸವಾರರ ಒತ್ತಾಯ.

ಕಾಮಗಾರಿಯಿಂದ ರಸ್ತೆ ಹಾಳಾಗಿದ್ದು, ಗುತ್ತಿಗೆದಾರರು ರಸ್ತೆ ದುರಸ್ತಿ ಮಾಡಿಕೊಡುವುದಾಗಿ ಹೇಳಿದ್ದಾರೆ. ಹದಗೆಟ್ಟಿರುವ ರಸ್ತೆಗಳನ್ನು ಪರಿಶೀಲನೆ ನಡೆಸಿ ದುರಸ್ತಿಗೆ ಕ್ರಮವಹಿಸುವೆ

ಪ್ರವೀಣ ಬೋಗಾರ

ಪುರಸಭೆ ಪ್ರಭಾರ ಮುಖ್ಯಾಧಿಕಾರಿ

ಪಟ್ಟಣದ ಬಹುತೇಕ ರಸ್ತೆಗಳು ಹಾಳಾಗಿವೆ, ಇದರಿಂದ ಸಾರ್ವಜನಿರಕು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ರಸ್ತೆ ದುರಸ್ಥಿಗೆ ಮುಂದಾಗಬೇಕು ಜಿಲಾನಿ ಪಾಶಾ

ಅಧ್ಯಕ್ಷ ಕರವೇ ಸ್ವಾಭಿಮಾನಿ ಸೇನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.