
ರಾಯಚೂರು: ಅಮೋಘ ಪ್ರದರ್ಶನ ತೋರಿದ ರಾಯಚೂರಿನ ರೋಹನ್ ಕರಟುರಿ, 13 ವರ್ಷದೊಳಗಿನವರ ಯೋನೆಕ್ಸ್ ಸನ್ ರೈಸ್ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಟೂರ್ನಿಯ ಬಾಲಕರ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದರು.
ಇಲ್ಲಿನ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣ ಒಳಾಂಗಣ ಕ್ರೀಡಾಂಗಣದಲ್ಲಿ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್(ಕೆಬಿಎ) ಹಾಗೂ ವಿಕ್ಟರಿ ಬ್ಯಾಡ್ಮಿಂಟನ್ ಅಕಾಡೆಮಿ ಆಶ್ರಯದಲ್ಲಿ ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ರೋಹನ್ ಅವರು, ಬೆಂಗಳೂರಿನ ಇಶಾನ್ ಪಾಠಕ್ ವಿರುದ್ಧ 22–20, 21–16 ನೇರ ಸೆಟ್‌ಗಳಿಂದ ಗೆಲುವು ಸಾಧಿಸುವ ಮೂಲಕ ಪ್ರಶಸ್ತಿಯನ್ನು ಬಾಚಿಕೊಂಡರು. ರೋಹನ್ ಅವರು, ವಿಕ್ಟರಿ ಬ್ಯಾಡ್ಮಿಂಟನ್ ಅಕಾಡೆಮಿಯನ್ನು ಪ್ರತಿನಿಧಿಸಿದ್ದರು.
ಡಬಲ್ಸ್ ವಿಭಾಗದಲ್ಲಿ ರೋಹನ್ ಕಾರಟುರಿ–ಇಶಾನ್ ಪಾಠಕ್ ಜೋಡಿಯು, ಬೆಂಗಳೂರಿನ ದಕ್ಷ ಡಿ.–ಸಂಶ್ರೇಯಾ ಸುನೀಲ್ ಜೋಡಿಯನ್ನು 21-15, 18-21, 21-17 ಸೆಟ್‌ಗಳ ಅಂತರದಿಂದ ಪರಾಭವಗೊಳಿಸಿ, ಟ್ರೋಫಿಯನ್ನು ಎತ್ತಿಹಿಡಿಯಿತು.
11 ವರ್ಷದೊಳಗಿನ ಬಾಲಕರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಅಗಸ್ತ್ಯ ಅವರು, ಪ್ರಣವ್ ರೆಡ್ಡಿ ಪೋಚ ವಿರುದ್ಧ 21-16, 21-14 ನೇರ ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದರು. ಡಬಲ್ಸ್‌ನಲ್ಲಿ ಅಗಸ್ತ್ಯ–ತರುಣ ಚಂದ್ರಮೋಹನ ಜೋಡಿಯು, ನೀವ್ ಶುಶ್ರೂತ್–ಪ್ರಣವ್ ಎನ್. ಜೋಡಿಯ ವಿರುದ್ಧ 21-17, 22-24, 21-19 ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿತು.
13 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಪುಣ್ಯ ಎಂ.ಎನ್. ಅವರು, ವಿ. ಕಾವೇರಮ್ಮ ವಿರುದ್ಧ 21-11, 21-17 ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿ, ಪ್ರಶಸ್ತಿ ಮುಡಿಗೇರಿಸಿಕೊಂಡರು.
ಡಬಲ್ಸ್ ವಿಭಾಗದಲ್ಲಿ ಜೋಹನ್ ಅಹಿಲಾ–ಪುಣ್ಯ ಎಂ.ಎನ್. ಜೋಡಿಯು, ಹನ್ವಿತಾ ಕೆ.ಎ.–ಲೀಸಾ ವಿ. 21-15, 19-21, 21-12 ಅಂಕಗಳಿಂದ ಅವರನ್ನು ಪರಾಭವಗೊಳಿಸಿದರು.
11 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ಶ್ರೇಯಾ ರಾವ್ ಅವರು, ಗೌರಿ ಸಂತೋಷ ವಿರುದ್ಧ 21-12, 21-9 ನೇರ ಸೆಟ್‌ಗಳಿಂದ ಗೆಲುವು ಪಡೆದರು.
ಡಬಲ್ಸ್‌ನಲ್ಲಿ ನಿಹಾರಿಕಾ ರಾಜ್–ಶ್ರೇಯಾ ರಾವ್ ಜೋಡಿಯು, ಹೇಶಾಸಾಯಿ ರಾಜೇಶ್–ಖುಷಿ ಆರ್. ಜೋಡಿ ವಿರುದ್ಧ 16-21, 21-18, 21-15 ಸೆಟ್‌ಗಳ ಅಂತರದಿಂದ ಗೆಲವು ಸಾಧಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.