
ರಾಯಚೂರು: ಮಾಹಿತಿ ಹಕ್ಕು ಕಾಯ್ದೆಯಡಿ 2015ರಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಿಗದಿಯಾಗಿರುವ ನೋಟಿಸ್ ಹನ್ನೊಂದು ವರ್ಷಗಳ ಬಳಿಕ ದೊರಕಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಅಳ್ಳಪ್ಪ ಬೇಸರ ವ್ಯಕ್ತಪಡಿಸಿದರು.
ದೇವದುರ್ಗ ಪುರಸಭೆ ವ್ಯಾಪ್ತಿಯ ಸರ್ಕಾರಿ ಜಮೀನುಗಳ ಸರ್ವೇ ನಂಬರ್, ವಿಸ್ತೀರ್ಣ ಹಾಗೂ 1964 ರಿಂದ 2015ರ ವರೆಗಿನ ಮೂಲ ನಕ್ಷೆಗಳ ಮಾಹಿತಿಯನ್ನು ಪಡೆಯಲು 2015ರ ಜನವರಿಯಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದೆ. ಆದರೆ, ಅರ್ಜಿಗೆ ಯಾವುದೇ ಉತ್ತರ ದೊರಕದ ಹಿನ್ನೆಲೆಯಲ್ಲಿ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದೆ’ ಎಂದು ನಗರದಲ್ಲಿ ಬುಧವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.
ಹನ್ನೊಂದು ವರ್ಷಗಳ ಬಳಿಕ ಕಳಬುರಗಿ ಪೀಠದ ಮಾಹಿತಿ ಆಯೋಗ ಗುರುವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕಳುಹಿಸಿದೆ. ಇಷ್ಟು ವರ್ಷಗಳಲ್ಲಿ ಆಯೋಗ ಮತ್ತು ಸರ್ಕಾರ ಏನು ಮಾಡುತ್ತಿತ್ತು? ಒಂದು ಸರಳ ವಿಚಾರಣೆಗೆ ಇಷ್ಟು ಸಮಯ ಬೇಕೆ ಎಂದು ಪ್ರಶ್ನಿಸಿದರು.
2018ರವರೆಗೆ ಕರ್ನಾಟಕ ಮಾಹಿತಿ ಆಯೋಗ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರೂ, ಅದರ ನಂತರದಿಂದ ಅಧಿಕಾರಿಗಳಿಗೆ ರಕ್ಷಾಕವಚದಂತೆ ವರ್ತಿಸುತ್ತಿದೆ ಎಂದು ಅಳ್ಳಪ್ಪ ಆರೋಪಿಸಿದರು. ಭ್ರಷ್ಟ ಅಧಿಕಾರಿಗಳಿಗೆ ಆಯೋಗದ ಭಯವೇ ಇಲ್ಲ. ಅರ್ಜಿದಾರರಿಗೆ ನ್ಯಾಯ ಸಿಗದ ಪರಿಸ್ಥಿತಿ ಉಂಟಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.