
ಸಿಂಧನೂರು: ‘ದೇಶದಲ್ಲಿ ಮರಗಳನ್ನು ಸ್ವಂತ ಮಕ್ಕಳಂತೆ ಪಾಲನೆ, ಪೋಷಣೆ ಮಾಡಿದ ವ್ಯಕ್ತಿ ಸಾಲು ಮರದ ತಿಮ್ಮಕ್ಕ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಎಚ್.ಎಫ್. ಮಸ್ಕಿ ಅಭಿಪ್ರಾಯಪಟ್ಟರು.
ನಗರದ ನಿವೃತ್ತ ನೌಕರರ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್, ನಿವೃತ್ತ ಹಾಗೂ ಪಿಂಚಣಿ ನೌಕರರ ಸಂಘದಿಂದ ಸಾಲುಮರದ ತಿಮ್ಮಕ್ಕನವರಿಗೆ ಶನಿವಾರ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ತಿಮ್ಮಕ್ಕನವರು ಮಕ್ಕಳಿರದ ಕಾರಣ ರಸ್ತೆ ಬದಿಯಲ್ಲಿ 380 ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳೆಂದು ಭಾವಿಸಿ ಪೋಷಿಸುತ್ತಾ ಅವುಗಳ ಜೊತೆಗೆ 8 ಸಾವಿರ ಮರಗಳನ್ನು ನೆಟ್ಟು ತಾವೇ ನೀರೆರೆದು ಪೋಷಿಸಿದ ಹೆಗ್ಗಳಿಕೆ ಅವರದ್ದು’ ಎಂದರು.
‘ಪರಿಸರ ರಕ್ಷಣೆ ಮತ್ತು ಕಾಡು ರಕ್ಷಣೆ ಮಾಡಿದ ತಿಮ್ಮಕ್ಕನವರಿಗೆ ರಾಷ್ಟ್ರೀಯ ಪೌರ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರಾ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿಗಳು ಲಭಿಸಿವೆ’ ಎಂದು ವಿವರಿಸಿದರು.
ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಬೀರಪ್ಪ ಶಂಭೋಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಾಹಿತಿಗಳಾದ ಹುಸೇನಪ್ಪ ಅಮರಾಪುರ, ಹುಸೇನ್‌ಬಾಷಾ ಕವಿತೆಗಳನ್ನು ಓದಿ ತಿಮ್ಮಕ್ಕನವರ ಸಾಧನೆಯನ್ನು ಸ್ಮರಿಸಿದರು.
ನಿವೃತ್ತ ಶಿಕ್ಷಕಿ ಸಿದ್ದೇಶ್ವರಿ, ಬಸವರಾಜ ಬಿಳೆಕಲ್, ವೆಂಕಟರೆಡ್ಡಿ, ಟಿ.ಅಯ್ಯಪ್ಪ, ಪ್ರಭು, ಎಚ್.ಎಂ.ಶ್ರೀಶೈಲ ಸೇರಿದಂತೆ ನಿವೃತ್ತ ನೌಕರರ ಸಂಘದ ಸದಸ್ಯರು ಹಾಗೂ ಸಾಹಿತಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.