
ರಾಯಚೂರು: ಶಾಲಾ ಆಡಳಿತ ಮಂಡಳಿಗಳು ಶಾಲಾ ವಾಹನಗಳ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸುತ್ತಿರುವುದು ಕಂಡು ಬಂದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ನಿಯಮ ಗಾಳಿಗೆ ತೂರಿರುವ ಸಂಸ್ಥೆಗಳ ವಾಹನಗಳ ಬೇಟೆ ಆರಂಭಿಸಿದ್ದಾರೆ.
ಜಿಲ್ಲೆಯ ಮಾನ್ವಿಯಲ್ಲೇ ಎರಡು ಗಂಭೀರ ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ನೋಂದಾಯಿತ ಶಾಲಾ ಬಸ್ಸುಗಳು ಮತ್ತು ವ್ಯಾನ್‌ಗಳ ಪರಿಶೀಲನೆ ತೀವ್ರಗೊಳಿಸಿದೆ. ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸುತ್ತಿರುವ ವಾಹನಗಳನ್ನು ಆರ್‌ಟಿಒ ಅಧಿಕಾರಿಗಳು ನೇರವಾಗಿ ವಶಕ್ಕೆ ತೆಗೆದುಕೊಂಡು ದಂಡ ವಿಧಿಸಲು ಆರಂಭಿಸಿದ್ದಾರೆ.
ಶಾಲಾ ಆಡಳಿತ ಮಂಡಳಿಯ ಪ್ರಮುಖರು ರಾಜಕೀಯ ನಾಯಕರಿಗೆ ಮೊಬೈಲ್‌ನಲ್ಲಿ ಕರೆ ಮಾಡಿ ದಂಡದಿಂದ ತಪ್ಪಿಸಿಕೊಳ್ಳಲು ಎಲ್ಲ ರೀತಿಯ ಪ್ರಯತ್ನ ನಡೆಸಿದ್ದಾರೆ. ಮಕ್ಕಳ ಸುರಕ್ಷತೆಗೆ ಒತ್ತುಕೊಟ್ಟಿರುವ ಆರ್‌ಟಿಒ ಅಧಿಕಾರಿಗಳು ಯಾವುದೇ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.
ಜಿಲ್ಲೆಯಲ್ಲಿ ಫಿಟ್‌ನೆಸ್ ಪ್ರಮಾಣಪತ್ರದ ಅವಧಿ ಮೀರಿದ್ದರೂ ಹಲವು ವಾಹನಗಳು ರಸ್ತೆಯಲ್ಲಿ ಸಂಚರಿಸುತ್ತಿರುವುದು ಬೆಳಕಿಗೆ ಬರುತ್ತಿವೆ. ಹೀಗಾಗಿ ಶಾಲಾ ಪ್ರಾಂಶುಪಾಲರು ಮತ್ತು ವ್ಯವಸ್ಥಾಪಕರು ತಮ್ಮ ಶಾಲೆಯಿಂದ ನಿರ್ವಹಿಸುವ ಪ್ರತಿಯೊಂದು ವಾಹನಕ್ಕೆ (ಬಸ್, ವ್ಯಾನ್ ಅಥವಾ ಆಟೊ) ಸಂಪೂರ್ಣ ಜವಾಬ್ದಾರರಾಗಿರುತ್ತಾರೆ ಎಂದು ತಿಳಿಸಲಾಗಿದೆ. ಪ್ರತಿಯೊಂದು ಶಾಲಾ ಮಂಡಳಿ ಶಾಲಾ ಸಾರಿಗೆ ಸುರಕ್ಷತಾ ಸಮಿತಿ ರಚಿಸಬೇಕು. ವಾಹನಗಳ ದಾಖಲೆಗಳು, ಚಾಲಕ ಪರಿಶೀಲನೆ ಮತ್ತು ಸರಿಯಾದ ಸುರಕ್ಷತಾ ಸಾಧನಗಳನ್ನು ಹೊಂದಿವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸ್ಪಷ್ಟವಾಗಿ ಸೂಚಿಸುತ್ತಿದ್ದಾರೆ.
ಶಾಲಾ ವಾಹನಗಳ ಸುರಕ್ಷಿತ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸಾರಿಗೆ ಆಯುಕ್ತರು ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುವ ಖಾಸಗಿ ವಾಹನಗಳನ್ನು ತಕ್ಷಣವೇ ವಶಪಡಿಸಿಕೊಳ್ಳಬೇಕು. ಅವಧಿ ಮೀರಿದ ಫಿಟ್‌ನೆಸ್ ಪ್ರಮಾಣಪತ್ರಗಳನ್ನು ಹೊಂದಿರುವ ವಾಹನಗಳನ್ನು ಚಲಾಯಿಸಲು ಅನುಮತಿ ನೀಡಬಾರದು. ಶಾಲೆಗಳು ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದರೆ, ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯೊಂದಿಗೆ ಸಮನ್ವಯದೊಂದಿಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆದೇಶ ನೀಡಿದ್ದಾರೆ.
‘ಶಾಲಾ ವಾಹನಗಳ ದಾಖಲೆಗಳು, ಸರಿಯಾದ ಸುರಕ್ಷತಾ ಸಾಧನಗಳು, ಪೊಲೀಸ್ ಕ್ಲಿಯರೆನ್ಸ್ ಮತ್ತು ಚಾಲಕರು ಮತ್ತು ಸಹಾಯಕರ ನಿಯಮಿತ ಆರೋಗ್ಯ ತಪಾಸಣೆ ನಡೆಸಲಾಗಿದೆಯೇ ಎನ್ನುವ ಕುರಿತು ಪರಿಶೀಲಿಸಲಾಗುತ್ತಿದೆ. ನಿಯಮ ಉಲ್ಲಂಘಿಸಿದ ವಾಹನಗಳಿಗೆ ಈಗಾಗಲೇ ದಂಡ ವಿಧಿಸಲಾಗಿದೆ’ ಎನ್ನುತ್ತಾರೆ ಪ್ರಾದೇಶಿಕ ಸಾರಿಗೆ ಇಲಾಖೆಯ ಇನ್‌ಸ್ಪೆಕ್ಟರ್ ಪ್ರವೀಣ.
‘ಜಿಲ್ಲೆಯಲ್ಲಿ 444 ವಾಹನಗಳು ಇವೆ. ಇದರಲ್ಲಿ 121 ವಾಹನಗಳು 15 ವರ್ಷ ಮೀರಿದ್ದು, ಶಾಲಾ ಆಡಳಿತ ಮಂಡಳಿಗೆ ನೋಟಿಸ್ ಕೊಡಲಾಗಿದೆ. 175 ಶಾಲಾ ವಾಹನಗಳ ಫಿಟ್‌ನೆಸ್ ಪ್ರಮಾಣಪತ್ರದ ಅವಧಿ ಮುಗಿದಿವೆ. 44 ಶಾಲಾ ವಾಹನ ಸ್ಕ್ರ್ಯಾಪ್ ಮಾಡಲಾಗಿದೆ. ಶಿಕ್ಷಣ ಇಲಾಖೆ ಹಾಗೂ ಪೊಲೀಸರ ಮೂಲಕ ತಿಳಿವಳಿಕೆ ನೀಡಲಾಗಿದೆ. ಈಗ ವಾಹನಗಳನ್ನು ತಪಾಸಣೆಗೆ ಒಳಪಡಿಸಿ ದಂಡ ವಿಧಿಸುವ ಹಾಗೂ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಶುರು ಮಾಡಲಾಗಿದೆ’ ಎಂದು ಹೇಳುತ್ತಾರೆ.
ಶಾಲಾ ವಾಹನಗಳನ್ನು ಹೊಂದಿರುವ ಶಾಲಾ ಆಡಳಿತ ಮಂಡಳಿಗಳು 1988ರ ಮೋಟಾರು ವಾಹನ ಕಾಯ್ದೆ, 1989ರ ಕೇಂದ್ರ ಮೋಟಾರು ವಾಹನ ನಿಯಮಗಳ ಕಾಯ್ದೆಯನ್ನು (26ನೇ ತಿದ್ದುಪಡಿ) ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ರಾಯಚೂರಿನ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ಮಿಲಿಂದಕುಮಾರ ಸೂಚಿಸಿದ್ದಾರೆ.
ಶಾಲಾ ಆಡಳಿತ ಮತ್ತು ಪೋಷಕರು ಗಮನಿಸಬೇಕಾದ ಅಂಶಗಳು
1.ಪೋಷಕರು ಶಾಲಾ ಸಿಬ್ಬಂದಿ ಮತ್ತು ಸಾರಿಗೆ ಪ್ರತಿನಿಧಿಗಳನ್ನು ಒಳಗೊಂಡ ಸುರಕ್ಷತಾ ಸಮಿತಿ ರಚಿಸಬೇಕು.
2.ಶಾಲಾ ಬಸ್‌ಗಳಿಗೆ ಜಿಪಿಎಸ್ ಮತ್ತು ಸಿಸಿಟಿವಿ ಕಡ್ಡಾಯವಾಗಿ ಅಳವಡಿಸಬೇಕು.
3.ವಾಹನಗಳು ಕಡ್ಡಾಯವಾಗಿ ಹಳದಿ ಬಣ್ಣ ಹೊಂದಿರಬೇಕು ಸಿಸಿಟಿವಿ ಮತ್ತು ಜಿಪಿಎಸ್ ಅಳವಡಿಕೆ ಕಡ್ಡಾಯ ಆಸನ ಸಾಮರ್ಥ್ಯ ಮೀರಬಾರದು ಮತ್ತು ಚಾಲಕರಿಗೆ ಗುರುತಿನ ಚೀಟಿ ಇರಬೇಕು.
4.ಚಾಲಕರಿಗೆ ನಿಯಮಿತ ತರಬೇತಿ ಆರೋಗ್ಯ ತಪಾಸಣೆ ಮತ್ತು ಪೊಲೀಸ್ ಪರಿಶೀಲನೆ ಅಗತ್ಯ.
5. ಶಾಲಾ ಬ್ಯಾಗ್‌ಗಳನ್ನು ವಾಹನದೊಳಗೆ ಸುರಕ್ಷಿತವಾಗಿ ಇಡಬೇಕು. ಮಕ್ಕಳು ಅಪರಿಚಿತರೊಂದಿಗೆ ಹೋಗದಂತೆ ನಿಗಾವಹಿಸಬೇಕು
6. ಶಾಲಾ ಆಡಳಿತವು ನಿಯಮಿತವಾಗಿ ನಿಯಮಗಳ ಪಾಲನೆ ಪರಿಶೀಲಿಸಬೇಕು.
7.ಚಾಲಕ ನಿರ್ವಾಹಕರ ಬಗೆ ದೂರುಗಳಿದ್ದರೆ ತಕ್ಷಣ ಶಾಲಾ ಆಡಳಿತ ಮಂಡಳಿ ಗಮನಕ್ಕೆ ತರಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.