
ರಾಯಚೂರು: ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟುಡೆಂಟ್ಸ್ ಆರ್ಗನೈಸೇಶನ್ (ಎಐಡಿಎಸ್ಓ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಅರಕೇರಾ ತಾಲ್ಲೂಕಿನ ಅಡಕಲಗುಡ್ಡ, ಸಿಂಗೇರಿ ದೊಡ್ಡಿ, ಶಾವಂತಗಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ರೈತ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಮಲ್ಲನಗೌಡ ಮಾತನಾಡಿ, ‘ಗ್ರಾಮದ ರೈತರು ಮತ್ತು ಕಾರ್ಮಿಕ ಕುಟುಂಬಗಳ ಮಕ್ಕಳು ಶಿಕ್ಷಣಕ್ಕೆ ಈ ಸರ್ಕಾರಿ ಶಾಲೆಯನ್ನೇ ಅವಲಂಬಿಸಿದ್ದಾರೆ. ಶಾಲೆಯನ್ನು ಮುಚ್ಚಿ, ಮೂರು, ನಾಲ್ಕು ಕಿ.ಮೀ. ದೂರದಲ್ಲಿರುವ ಅಲ್ಕೋಡ ಕೆಪಿಎಸ್ ಶಾಲೆಗೆ ಮಕ್ಕಳನ್ನು ಕಳುಹಿಸುವುದು ಅಸಾಧ್ಯ‘ ಎಂದು ಹೇಳಿದರು.
‘ಮೂರು ಗ್ರಾಮಗಳ ಶಾಲೆಗಳಲ್ಲಿ, ಅಡಕಲಗುಡ್ಡ- 50, ಸಿಂಗೇರಿ ದೊಡ್ಡಿ- 80, ಹಾಗೂ ಶಾವಂತಗಲ್ - 120 ರಂತೆ ವಿದ್ಯಾರ್ಥಿಗಳು ಇರುವ ಈ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು’ ಎಂದು ಆಗ್ರಹಿಸಿದರು.
ಎಐಡಿಎಸ್ಓ ನ ಜಿಲ್ಲಾ ಕಾರ್ಯದರ್ಶಿ ಬಸವರಾಜ್ ಮಾತನಾಡಿ, ‘ರಾಜ್ಯ ಸರ್ಕಾರವು 40 ಸಾವಿರಕ್ಕೂ ಅಧಿಕ ಶಾಲೆಗಳನ್ನು ಮುಚ್ಚಲು ಮುಂದಾಗಿದ್ದರೂ, ಶಿಕ್ಷಣ ಸಚಿವರು ಮಾಧ್ಯಮಗಳ ಮುಂದೆ "ಶಾಲೆ ಮುಚ್ಚಲ್ಲ" ಎಂದು ಸುಳ್ಳು ಹೇಳುತ್ತಿದ್ದಾರೆ. ಇದರ ಜೊತೆಗೆ, ಇಲಾಖೆಯಿಂದ ಶಾಲೆ ಮುಚ್ಚುವ ಆದೇಶ ಮತ್ತು ಪಟ್ಟಿಗಳನ್ನು ಬಿಡುಗಡೆ ಮಾಡುತ್ತಿರುವುದು ಸರ್ಕಾರದ ಬಡವರಿಂದ ಶಿಕ್ಷಣ ಕಸಿಯುವ ಖಾಸಗೀಕರಣದ ಹುನ್ನಾರ’ ಎಂದು ದೂರಿದರು.
ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ದುಡಿದ ಜ್ಯೋತಿರಾವ್ ಮತ್ತು ಸಾವಿತ್ರಿಬಾಯಿ ಫುಲೆ ಹಾಗೂ ಭಗತ್ ಸಿಂಗ್, ಸುಭಾಷಚಂದ್ರ ಬೋಸ್ ಅವರ ಆಶಯಗಳಿಗೆ ಇದು ವಿರುದ್ಧವಾಗಿದೆ. ಶಿಕ್ಷಣವನ್ನು ಉಳಿಸಲು ಎಲ್ಲ ಪೋಷಕರು, ವಿದ್ಯಾರ್ಥಿಗಳು ಒಗ್ಗಟ್ಟಾಗಿ ಚಳುವಳಿಯನ್ನು ಕಟ್ಟಲು ಮುಂದಾಗಬೇಕು’ ಎಂದು ಮನವಿ ಮಾಡಿದರು.
ಹಿರಿಯರಾದ ಶರಣಪ್ಪ, ರಾಘವೇಂದ್ರ, ಹುಲಿಗೆಪ್ಪಾ, ಶಿವರಾಜ, ಅಂಬರೀಷ, ಮುಕ್ಕಣ್ಣ ಅಯ್ಯಪ್ಪ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.