
ಲಿಂಗಸುಗೂರು: ‘ಶಾಲೆ, ಶಿಕ್ಷಣ ವ್ಯವಸ್ಥೆ ಉಳಿದರೆ ಮಾತ್ರ ಗ್ರಾಮ ಭಾರತ ಉಳಿಯಲು ಸಾಧ್ಯವಾಗುತ್ತದೆ’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಚಿದಾನಂದ ಸಾಲಿ ಹೇಳಿದರು.
ಪಟ್ಟಣದ ಬಸವೇಶ್ವರ ಕಾಲೇಜಿನ ಬೆಳ್ಳಿ ಸಂಭ್ರಮದ ಪ್ರಯುಕ್ತ ಭಾನುವಾರ ಹಮ್ಮಿಕೊಂಡಿದ್ದ ‘ಪ್ರೌಢಶಿಕ್ಷಣ: ಒಂದು ಮರು ಚಿಂತನೆ’ ಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನ್ನ ಅನಿವಾರ್ಯ, ಅಕ್ಷರ ಅಲಂಕಾರ ಎಂಬ ಸ್ಥಿತಿ ಇದೆ. ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ಹೆಸರಿನಲ್ಲಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಹತ್ತಾರು ಕೆಲಸಗಳ ಒತ್ತಡ ಹೇರಿ ಉತ್ತಮ ಫಲಿತಾಂಶ ನಿರೀಕ್ಷೆ ಮಾಡಿದರೆ ಹೇಗೆ ಸಾಧ್ಯ’ ಎಂದರು.
ಮೂಡಬಿದರೆ ಶಿಕ್ಷಣ ಚಿಂತಕ ಅರವಿಂದ ಚೊಕ್ಕಾಡಿ ಮಾತನಾಡಿ, ‘ಇಡೀ ಶಿಕ್ಷಣ ವ್ಯವಸ್ಥವೇ ಮಿತಿಮೀರಿದ ಒತ್ತಡದಲ್ಲಿದೆ. ಶಿಕ್ಷಣ ವ್ಯವಸ್ಥೆ ಸುಧಾರಿಸಲು ಪಠ್ಯಕ್ರಮದಲ್ಲಿ ಸರಳ ವಿವರಣೆಗಳ ವ್ಯವಸ್ಥೆ ಹಾಗೂ ಹಳೆಯ ಪದ್ಧತಿಯಲ್ಲಿ ಮೌಲ್ಯಮಾಪನ ವ್ಯವಸ್ಥೆಯಲ್ಲೂ ಬದಲಾವಣೆ ತರಬೇಕು. ಪಾಲಕರಿಗೂ ತರಬೇತಿ ನೀಡಬೇಕಾಗಿದೆ. ಯಾವುದೇ ಮಾಧ್ಯಮದಲ್ಲಿ ಶಿಕ್ಷಣ ನೀಡಿದರೂ ಉತ್ತಮವಾಗಿ ಕಲಿಸುವ ಚಿಂತನೆ ಮಾಡಬೇಕಾಗಿದೆ’ ಎಂದರು.
ರಾಯಚೂರಿನ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಕೆ.ವೆಂಕಟೇಶ ಮಾತನಾಡಿದರು.
ವಿವಿ ಸಂಘದ ಆಡಳಿತ ಮಂಡಳಿ ಸದಸ್ಯರಾದ ಸಿದ್ಧನಗೌಡ ಪಾಟೀಲ ಯರಡೋಣಿ, ಡಾ.ಶರಣಗೌಡ ಪಾಟೀಲ, ಉಪನ್ಯಾಸಕ ಮಹಾಂತೇಶ ಮಸ್ಕಿ, ನಿವೃತ್ತ ಉಪನ್ಯಾಸಕ ಸೋಮಶೇಖರ ಬಳಗಾನೂರು, ಮೌನೇಶ, ದೊಡ್ಡನಗೌಡ ಪಾಟೀಲ, ಸುಧಾಕರ ನಾಗಠಾಣ, ಬಸಣ್ಣ ಹಿಂದಿನಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.