ಲಿಂಗಸುಗೂರು: ಪುರಸಭೆ ವ್ಯಾಪ್ತಿಯ ಕರಡಕಲ್ ಗ್ರಾಮದಲ್ಲಿ ಮೂರು ಮನೆಗಳು, ತಾಲ್ಲೂಕಿನ ಚಿತ್ತಾಪುರ, ಈಚನಾಳ ತಾಂಡಾದಲ್ಲಿ ತಲಾ ಒಂದು ಮನೆಗಳಲ್ಲಿ ಶುಕ್ರವಾರ ರಾತ್ರಿ ಸರಣಿ ಕಳ್ಳತನ ನಡೆದಿದ್ದರಿಂದ ಜನ ಭಯಬೀತರಾಗಿದ್ದಾರೆ.
ಕರಡಕಲ್ ಗ್ರಾಮದಲ್ಲಿ ಕಿರಾಣಿ ವರ್ತಕ ಮಹಾಂತೇಶ ಕುಂಬಾರ ಮನೆಯ ಬಾಗಿಲು ಮುರಿದು ಅಲ್ಮೇರಾದಲ್ಲಿದ್ದ 30 ಗ್ರಾಂ ಚಿನ್ನದ ಸರ, ₹50 ಸಾವಿರ ಕಳ್ಳತನವಾಗಿದೆ. ಗ್ರಾಮದ ಗುಂಡಯ್ಯ ಸೊಪ್ಪಿಮಠ ಮನೆಯಲ್ಲಿ 40 ಗ್ರಾಂ ಬಂಗಾರ, 50 ಗ್ರಾಂ ಬೆಳ್ಳಿ ಆಭರಣ, ₹40 ಸಾವಿರ ಕಳ್ಳತನವಾಗಿದೆ. ರುದ್ರಯ್ಯಸ್ವಾಮಿ ಬಜಾರಮಠ ಮನೆಯಲ್ಲಿ 37 ಗ್ರಾಂ ಚಿನ್ನ, 26 ಗ್ರಾಂ ಬೆಳ್ಳಿ, ₹65 ಸಾವಿರ ಕಳ್ಳತನವಾಗಿದೆ.
ತಾಲ್ಲೂಕಿನ ಚಿತ್ತಾಪುರ ಗ್ರಾಮದಲ್ಲಿ ಪ್ರಕಾಶ ಕುರಿ ಅವರಿಗೆ ಸಂಬಂಧಿಸಿದ ಎಸ್‌ಬಿಐ ಸೇವಾ ಕೇಂದ್ರದ ಬೀಗ ಮುರಿದು ಕೇಂದ್ರದಲ್ಲಿದ್ದ ₹1.45 ಲಕ್ಷ ಕದ್ದಿದ್ದಾರೆ. ಈಚನಾಳ ತಾಂಡಾ-2ರ ಶಾಂತಮ ಖೀರಪ್ಪ ಜಾಧವ್ ಮನೆಯಲ್ಲಿ 65 ಗ್ರಾಂ ಚಿನ್ನ, 210 ಗ್ರಾಂ ಬೆಳ್ಳಿ ಮತ್ತು ನಗದು ಸೇರಿ ಒಟ್ಟು ₹4,89,900 ಮೌಲ್ಯದ ವಸ್ತುಗಳ ಕಳ್ಳತನವಾಗಿದೆ. ಈ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸ್ಥಳಕ್ಕೆ ಭಾನುವಾರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಹರೀಶ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.