
ಲಿಂಗಸುಗೂರು: ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯುದ್ದಕ್ಕೂ ತಗ್ಗು-ದಿನ್ನೆಗಳು ಬಿದ್ದಿವೆ. ಅಲ್ಲಲ್ಲಿ ದೊಡ್ಡ ಹೊಂಡಗಳೇ ನಿರ್ಮಾಣವಾಗಿವೆ. ಇಲ್ಲಿ ಸಂಚರಿಸುವ ವಾಹನ ಸವಾರರು, ಪ್ರಯಾಣಿಕರು ನರಕಯಾತನೆ ಅನುಭವಿಸುವಂತ ದುಸ್ಥಿತಿ ರಾಜ್ಯ ಹೆದ್ದಾರಿ–41ಕ್ಕೆ ಬಂದೊದಗಿದೆ.
ಪಟ್ಟಣದ ಮೂಲಕ ಬಸವಸಾಗರ ಜಲಾಶಯ, ನಾರಾಯಣಪುರ ಮಾರ್ಗವಾಗಿ ಸಾಗುವ ರಾಯಚೂರು-ವಿಜಯಪುರ ರಾಜ್ಯ ಹೆದ್ದಾರಿ–41ರ ಲಿಂಗಸುಗೂರು-ನಾರಾಯಣಪುರದವರೆಗಿನ 34 ಕಿ.ಮೀ ರಸ್ತೆ ನರಕದ ದರ್ಶನ ಮಾಡಿಸುತ್ತಿದೆ.
ಲಿಂಗಸುಗೂರು ಪಟ್ಟಣದಿಂದ ರೈತರ ಜೀವನಾಡಿಯಾದ ಬಸವಸಾಗರ ಜಲಾಶಯ, ನಾರಾಯಣಪುರ ಮಾರ್ಗ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಇಲ್ಲಿ ವಾಹನಗಳ ಸಂಚಾರ ಹೆಚ್ಚಾಗಿರುತ್ತದೆ. ಶಾಲಾ ಮಕ್ಕಳು ಸೇರಿದಂತೆ ಪ್ರತಿನಿತ್ಯ ನೂರಾರು ಪ್ರಯಾಣಿಕರು ಹೈರಾಣರಾಗುವಂತಾಗಿದೆ.
ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಮೃತ್ಯು ಕೂಪವಾಗಿ ಮಾರ್ಪಟ್ಟಿದೆ. ಮಳೆ ಬಂದಾಗ ರಸ್ತೆಯಲ್ಲಿನ ಗುಂಡಿಗಳಲ್ಲಿ ನೀರು ಸಂಗ್ರಹಗೊಂಡು ರಸ್ತೆ ಯಾವುದೋ, ಗುಂಡಿ ಯಾವುದೋ ತಿಳಿಯದಂತಾಗುತ್ತದೆ. ಇಷ್ಟಾದರೂ ಅಧಿಕಾರಿ ಮತ್ತು ಜನಪ್ರತಿನಿಧಿಗಳು ಮೌನವಹಿಸಿರುವುದು ನಿರ್ಲಕ್ಷ್ಯದ ಪರಮಾವಧಿಯಾಗಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಬಸವಸಾಗರ ಜಲಾಶಯವನ್ನು ನೋಡಲು ಬರುವ ಪ್ರವಾಸಿಗರು ಹದಗೆಟ್ಟ ರಸ್ತೆ ಕಂಡು ಈ ಕಡೆಗೆ ಮತ್ತೊಮ್ಮೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಲಿಂಗಸುಗೂರು-ಬಸವಸಾಗರ-ನಾರಾಯಣಪುರ 34 ಕಿ.ಮೀ ಸಂಚರಿಸಲು ಬರೋಬ್ಬರಿ ಎರಡು ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತಿದೆ.
ರಸ್ತೆ ಮೇಲೆ ಬಿದ್ದ ಗುಂಡಿಗಳು, ರಸ್ತೆಯ ಮೇಲೆ ಜಲ್ಲಿ ಕಲ್ಲು ತೇಲಿ, ತಗ್ಗುಗಳು ಬಿದ್ದಿವೆ. ಹೀಗಾಗಿ ಪ್ರಯಾಣಿಕರು ಹಗಲು ಹೊತ್ತಿನಲ್ಲೇ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಇನ್ನು ರಾತ್ರಿ ವೇಳೆ ತಿರುಗಾಡುವವರ ಕಷ್ಟ ಹೇಳತೀರದು.
ನಾಲ್ಕೇ ಕಿ.ಮೀ ಅಭಿವೃದ್ಧಿ
2024-25ನೇ ಸಾಲಿನ ರಾಜ್ಯ ಹೆದ್ದಾರಿಯ ಎಸ್‌ಡಿಪಿ ಅಡಿ ₹10 ಕೋಟಿ ಅನುದಾನದಲ್ಲಿ ಚಿಕ್ಕ ಉಪ್ಪೇರಿ-ಹಿರೇಜಾವೂರು ಗ್ರಾಮದವರೆಗೆ ಕೇವಲ ನಾಲ್ಕು ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ. ಇನ್ನೂ 30 ಕಿ.ಮೀ ರಸ್ತೆ ಅಭಿವೃದ್ಧಿಗೆ ಯಾವಾಗ ಯೋಗ ಕೂಡಿ ಬರುತ್ತದೆಯೋ ತಿಳಿಯದಾಗಿದೆ. ತಗ್ಗು ದಿನ್ನೆಗಳಿಂದ ಕೂಡಿದ ಈ ಹೆದ್ದಾರಿ ಅಭಿವೃದ್ಧಿ ಪಡಿಸುವ ಬದಲು ಅಲ್ಲಿಲ್ಲಿ ತೆಗ್ಗುಗಳಲ್ಲಿ ಡಾಂಬಾರು ಹಾಕಿ ತೇಪೆ ಹಾಕುವ ಕೆಲಸ ಲೋಕೋಪಯೋಗಿ ಇಲಾಖೆ ಮಾಡುತ್ತಿದೆ. ತೇಪೆ ಹಾಕಲು ದುಡ್ಡು ಖರ್ಚು ಮಾಡುವ ಬದಲು ಒಟ್ಟಿಗೆ ರಸ್ತೆ ಸುಧಾರಣೆ ಮಾಡಿ ಪರಿತಪಿಸುವುದನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ವಾಹನ ಸವಾರರು ಒತ್ತಾಯಿಸಿದ್ದಾರೆ.
ಲಿಂಗಸುಗೂರು-ನಾರಾಯಣಪುರ ರಸ್ತೆ ಅಭಿವೃದ್ಧಿಗೆ ₹40 ಕೋಟಿಯ ಅಂದಾಜು ವೆಚ್ಚ ಪತ್ರಿಕೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುಮೋದನೆ ಸರ್ಕಾರದ ಮಟ್ಟದಲ್ಲಿದೆ.– ಪ್ರಕಾಶ, ಎಇಇ, ಪಿಡಬ್ಲ್ಯೂಡಿ ಲಿಂಗಸುಗೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.