ADVERTISEMENT

ಸಿರವಾರ: ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ತಪ್ಪದ ಸಂಕಷ್ಟ

ಗಣದಿನ್ನಿ, ಜಾಲಾಪೂರು, ಹರವಿ ಗ್ರಾಮಗಳ ಜನರಿಗೆ ನೀರು ತರವುದೇ ಸಾಹಸ

ಪಿ.ಕೃಷ್ಣ
Published 13 ಮೇ 2025, 4:13 IST
Last Updated 13 ಮೇ 2025, 4:13 IST
ಸಿರವಾರ ಪಟ್ಟಣದ ಗಿರಿಜಾಶಂಕರ ಕಾಲೊನಿಯಲ್ಲಿ ನೀರು ಬರುವಿಕೆಗಾಗಿ ಕಾಯುತ್ತಿರುವ ನಿವಾಸಿಗಳು
ಸಿರವಾರ ಪಟ್ಟಣದ ಗಿರಿಜಾಶಂಕರ ಕಾಲೊನಿಯಲ್ಲಿ ನೀರು ಬರುವಿಕೆಗಾಗಿ ಕಾಯುತ್ತಿರುವ ನಿವಾಸಿಗಳು   

ಸಿರವಾರ: ತಾಲ್ಲೂಕಿನಾದ್ಯಂತ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಕಾಣದಿದ್ದರೂ ಪಟ್ಟಣ ಸೇರಿದಂತೆ ಕೆಲ ಗ್ರಾಮಗಳಲ್ಲಿ ಬಿರುಬಿಸಿನಲ್ಲಿಯೂ ಕಿ.ಮೀ ದೂರದಿಂದ ನೀರು ತಂದು ಕುಡಿಯುವ ಅನಿವಾರ್ಯತೆ ಇದೆ.

ಪಟ್ಟಣದ ಮೂರನೇ ಗಿರಿಜಾ ಶಂಕರ ಕಾಲೊನಿ ವಾರ್ಡ್‌ನಲ್ಲಿ ಶುದ್ಧ ನೀರು ಕುಡಿಯುವುದು ಕನಸಾಗಿದ್ದು, ಹಣವಿದ್ದವರೂ ಮಾತ್ರ ಹೊರಗಡೆಯಿಂದ ತಂದು ಕುಡಿಯುವ ಪರಿಸ್ಥಿತಿ ಇದೆ. ಕಾಲೊನಿಯ ನಲ್ಲಿಗಳಲ್ಲಿ ಬರುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಬಳಕೆಗೆ ಮಾತ್ರ ಉಪಯೋಗಿಸಲಾಗುತ್ತಿದೆ. ಈ ನೀರನ್ನು ಪಡೆಯಬೇಕಾದರೆ ಪಂಚಾಯಿತಿ ಸಿಬ್ಬಂದಿಗೆ ಪ್ರತಿದಿನ ಎರಡು ಮೂರು ಬಾರಿ ಸಂಪರ್ಕ ಮಾಡುವ ಅನಿವಾರ್ಯತೆ ಇದೆ ಎಂದು ನಿವಾಸಿಗಳು ಆರೋಪಿಸುತ್ತಾರೆ.

ತಾಲ್ಲೂಕಿನ ಗಣದಿನ್ನಿ ಗ್ರಾಮವು ನೀರಿಗಾಗಿ ಕೆರೆಯನ್ನು ಅವಲಂಬಿಸಿದ್ದು, ಕೆರೆಯು ಗ್ರಾಮದಿಂದ 1 ಕಿ.ಮೀ ದೂರದಲ್ಲಿದೆ. ದಿನಬೆಳಗಾದರೆ ಕುಡಿಯಲು, ಬಳಕೆ ಮಾಡಲು ನೀರು ತರುವುದೇ ಗ್ರಾಮಸ್ಥರ ಮುಖ್ಯ ಕಾಯಕವಾಗಿದೆ. ಕೆರೆಯಲ್ಲಿ ನೀರು ಕಡಿಮೆ ಆದಂತೆಲ್ಲ ಕಲುಷಿತವಾಗುತ್ತಿದೆ. ಆದರೆ ನೀರು ಶುದ್ಧೀಕರಣ ಘಟಕಗಳು ಇಲ್ಲದಿರುವುದರಿಂದ ಕಲುಷಿತ ನೀರೇ ಕುಡಿಯುವ ಅನಿವಾರ್ಯತೆ ಇದೆ.
ಗ್ರಾಮದಲ್ಲಿ ಕೂಲಿಕಾರರೇ ಹೆಚ್ಚಾಗಿದ್ದಾರೆ. ಅವರು ಕೂಡ ಕೆಲ ಬಾರಿ ಕೂಲಿ ಕೆಲಸ ಬಿಟ್ಟು ನೀರು ತರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ADVERTISEMENT

ಚಾಗಭಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾಲಾಪೂರು ಗ್ರಾಮದಲ್ಲಿ ನೀರಿನ ಸಮಸ್ಯೆ ಹೇಳತೀರದಾಗಿದೆ. ಗ್ರಾಮದಲ್ಲಿರುವ 2 ಸಾವಿರ ಜನಸಂಖ್ಯೆಗೆ ಅನುಗುಣವಾಗಿ ಮನೆಮನೆಗೆ ನೀರು ಸರಬರಾಜಿಗೆ ನಲ್ಲಿಗಳ ವ್ಯವಸ್ಥೆ ಮಾಡಲಾಗಿದೆ. ಆದರೂ ನೀರು ಸರಬರಾಜು ಮಾಡುವ ಯಂತ್ರಗಳ ವಿದ್ಯುತ್ ಉಪಕರಣಗಳ ದುರಸ್ತಿಯಿಂದಾಗಿ ಗ್ರಾಮದ ಅರ್ಧ ಭಾಗಕ್ಕೆ 15 ದಿನಗಳಿಂದ ನೀರಿನ ವ್ಯವಸ್ಥೆ ಇಲ್ಲದಂತಾಗಿದೆ. ಇದರಿಂದಾಗಿ ಗ್ರಾಮದಿಂದ ದೂರದಲ್ಲಿರುವ ಕೊಳವೆಬಾವಿಗಳಿಂದ ನೀರು ತರುವುದು ಅನಿವಾರ್ಯವಾಗಿದೆ. ಬೇಸಿಗೆ ಹೆಚ್ಚಾದಂತೆ ಅಂರ್ತಜಲ ಕಡಿಮೆಯಾದಂತೆಲ್ಲ ಕೊಳವೆಬಾವಿಯೂ ಬಂದಾಗಿ ನೀರಿ‌ನ ಕೊರತೆಯಾಗುವ ಆತಂಕದಲ್ಲಿ ಗ್ರಾಮಸ್ಥರು ಇದ್ದಾರೆ.

‘ನೀರು ಹರಿಸುವ ಯಂತ್ರಗಳ ದುರಸ್ತಿ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಯಂತ್ರೋಪಕರಣಗಳ ಬಿಡಿ ಭಾಗಗಳು ಸಿಗದ ಕಾರಣ ರಿಪೇರಿ ಆಗುತ್ತಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಹರವಿ ಗ್ರಾಮದಲ್ಲಿ ಶುದ್ಧ ನೀರಿನ ಕೊರತೆ: 8 ಸಾವಿರ ಜನಸಂಖ್ಯೆ ಇರುವ ಹರವಿ ಗ್ರಾಮಕ್ಕೆ ವಿದ್ಯುತ್ ಇದ್ದರೆ ನೀರು ಎನ್ನುವಂತಾಗಿದೆ. ಅಕಾಲಿಕ ಗಾಳಿ ಮಳೆಯಿಂದಾಗಿ ಪ್ರತಿನಿತ್ಯ ವಿದ್ಯುತ್ ಕಡಿತವಾಗುವುದು ಸಾಮಾನ್ಯವಾಗಿದ್ದು, ವಿದ್ಯುತ್ ಇಲ್ಲ ಎಂದರೆ ನೀರು ಇಲ್ಲ ಎನ್ನುವಂತಾಗಿದೆ.

ಬಡವರಿಗೆ ಶುದ್ಧ ನೀರು ಮರೀಚಿಕೆ: ಗ್ರಾಮದಲ್ಲಿ ಎರಡು ಸರ್ಕಾರಿ ನೀರು ಶುದ್ಧೀಕರಿಸುವ ಘಟಕಗಳಿದ್ದು, ವರ್ಷಗಳಿಂದ ದುರಸ್ತಿಗಾಗಿ ಬೀಗ ಹಾಕಲಾಗಿದೆ. ಎರಡು ಖಾಸಗಿ ಘಟಕಗಳಿದ್ದು, ಇಲ್ಲಿ 20 ಲೀಟರ್ ನೀರಿಗೆ ₹10 ಹಣ ನೀಡಬೇಕು. ಇದರಿಂದ ಬಡವರಿಗೆ ಶುದ್ಧ ನೀರು ಕುಡಿಯುವುದು ಕನಸಾಗಿದೆ.

ಸಿರವಾರ ತಾಲ್ಲೂಕಿನ ಗಣದಿನ್ನಿ ಗ್ರಾಮದಲ್ಲಿ ವಾಹನಗಳ ಮೂಲಕ ಕಿ.ಮೀ ದೂರದ ಕೆರೆಯಿಂದ ನೀರು ತರುತ್ತಿರುವ ಗ್ರಾಮಸ್ಥರು
ಸಿರವಾರ ತಾಲ್ಲೂಕಿನ ಹರವಿ ಗ್ರಾಮದಲ್ಲಿ ತಳ್ಳುವ ಬಂಡಿ ಮೂಲಕ ನೀರು ತರುತ್ತಿರುವ ಬಾಲಕ
ಸಿರವಾರ ತಾಲ್ಲೂಕಿನ ಜಾಲಾಪೂರು ಗ್ರಾಮದಲ್ಲಿ ದೂರದ ಕೈಕೊಳವೆಬಾವಿಯಿಂದ ನೀರು ತುಂಬುತ್ತಿರುವುದು

ಕಾಲೊನಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಹಲವಾರು ಬಾರಿ ಪಂಚಾಯಿತಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಹುಲಿಗೆಪ್ಪ ಮಡಿವಾಳ ಗಿರಿಜಾ ಕಾಲೊನಿ ನಿವಾಸಿ ಸಿರವಾರ ಸರ್ಕಾರ ನೀರಿನ ಸೌಲಭ್ಯಕ್ಕೆ ಲಕ್ಷಾಂತರ ಹಣ ವ್ಯಯಿಸಿದರೂ ಕುಡಿಯುವ ನೀರನ್ನು ಹಣ ನೀಡಿ ತರುವುದು ಅನಿವಾರ್ಯತೆ ಇದೆ

-ಮಾಳಿಂಗರಾಯ ಹರವಿ ಗ್ರಾಮಸ್ಥ

ಅರ್ಧ ಗ್ರಾಮಕ್ಕೆ ನೀರಿನ ಕೊರತೆ ಇದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರತಿನಿತ್ಯ ದೂರದಿಂದ ನೀರು ತರುವ ಅನಿವಾರ್ಯತೆ ಇದೆ ಹನುಮಂತ್ರಾಯ ಜಾಲಾಪೂರು ನಿವಾಸಿ ಗ್ರಾಮದಲ್ಲಿ ಕೂಲಿಕಾರರೇ ಹೆಚ್ಚಾಗಿರುವುದರಿಂದ ಪ್ರತಿ ಮನೆಗೆ ಕೆರೆಯಿಂದ ನಲ್ಲಿಗಳ ಮೂಲಕ ನೀರು ಸರಬರಾಜು ಮಾಡುವ ಅವಶ್ಯಕತೆ ಇದೆ

-ವೀರೇಶ ಗಣದಿನ್ನಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.