ADVERTISEMENT

ತಾಯಿ ಮಾತನಾಡಿಸಿದ್ದು ಅಪರಾಧವಾಯಿತೇ!

ಸಿಂಧನೂರು: ಐವರ ಕೊಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 16:29 IST
Last Updated 12 ಜುಲೈ 2020, 16:29 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಸಿಂಧನೂರು: ನಗರದ ಸುಕಾಲಪೇಟೆಯಲ್ಲಿ ಐವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಮಿಸಿ ವಿವಾಹವಾಗಿರುವ ಮಂಜುಳಾ ತನ್ನ ತಾಯಿಯನ್ನು ಮಾತನಾಡಿಸಿದ ಘಟನೆಯೇ ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ.

ಕಳೆದ 9 ತಿಂಗಳ ಹಿಂದೆ ಮಂಜುಳಾ ಮತ್ತು ಮೌನೇಶ ಮನೆ ಬಿಟ್ಟು ಹೋಗಿ ಗದಗದಲ್ಲಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸುವ ಮೂಲಕ ವಿವಾಹವಾಗಿದ್ದರು. 3 ತಿಂಗಳ ನಂತರ ಮೌನೇಶನ ಮನೆಗೆ ಬಂದಿದ್ದಾರೆ. ಮಂಜುಳಾ ತನ್ನ ತಂದೆ ಫಕೀರಪ್ಪನವರಿಗೆ ಒಬ್ಬಳೇ ಮಗಳಿದ್ದು, ಮತ್ತೊಬ್ಬ ಅಂಗವಿಕಲ ಮಗನಿದ್ದು ಆತನು ಅನಾರೋಗ್ಯ ಸ್ಥಿತಿಯಲ್ಲಿದ್ದಾನೆ.

ಮಗಳು ಮನೆ ಬಿಟ್ಟು ಹೋಗಿರುವುದು ಮತ್ತು ಮಗನ ಆರೋಗ್ಯ ಉತ್ತಮ ಸ್ಥಿತಿಯಲ್ಲಿ ಇಲ್ಲದಿರುವುದು ಫಕ್ಕೀರಪ್ಪನಿಗೆ ಬೇಸರವಿತ್ತು. ಈತನು ಮತ್ತೊಂದು ಮಗು ಪಡೆಯಬೇಕು ಎನ್ನುವ ಇಚ್ಛೆಯಿಂದ 3 ತಿಂಗಳ ಹಿಂದೆ 2ನೇ ಮದುವೆಯಾಗಿದ್ದನು. ತನ್ನ ತಂದೆ ಎರಡನೇ ಮದುವೆಯಾಗಿರುವುದಕ್ಕೆ ಮಂಜುಳಾ ತಂದೆಯೊಂದಿಗೆ ಮಾತನಾಡಿ ಅಸಮಾಧಾನ ವ್ಯಕ್ತಪಡಿಸಿ, ತನಗೆ ಆಸ್ತಿಯಲ್ಲಿ ಪಾಲು ಕೊಡಬೇಕು ಎಂದು ತಕರಾರು ತೆಗೆದಿದ್ದಳು ಎಂದು ಹೇಳಲಾಗುತ್ತಿದೆ.

ADVERTISEMENT

ಆದರೆ, ವಡ್ಕಿ ಮತ್ತು ಕೋಣದ್ ಕುಟುಂಬಗಳ ನೆರೆ ಹೊರೆಯ ಜನರು ಇದಕ್ಕೆ ಭಿನ್ನವಾಗಿ ಹೇಳುತ್ತಾರೆ.

ಶನಿವಾರ ಬೆಳಿಗ್ಗೆ ಕೋಣದ್ ಫಕೀರಪ್ಪನ ಮೊದಲ ಹೆಂಡತಿ (ಮಂಜುಳ ಅವರ ತಾಯಿ) ಮನೆ ಮುಂದೆ ಕಸಗುಡಿಸುವ ಸಮಯದಲ್ಲಿ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಮಂಜುಳಾ ತನ್ನ ತಾಯಿಯೊಂದಿಗೆ ಮಾತನಾಡಿದ್ದಾಳೆ.

ಇದನ್ನು ಗಮನಿಸಿದ ಎರಡನೇ ಪತ್ನಿ ಫಕೀರಪ್ಪನಿಗೆ ತಿಳಿಸಿದ್ದು, ಪ್ರೇಮ ವಿವಾಹವಾಗಿ ಮನೆ ಬಿಟ್ಟು ಹೋಗಿರುವ ಮಗಳೊಂದಿಗೆ ಮಾತನಾಡಿದ್ದಕ್ಕೆ ಸಿಟ್ಟಿಗೆದ್ದು ಫಕ್ಕೀರಪ್ಪ ತನ್ನ ಮೊದಲ ಹೆಂಡತಿಯ ಮೇಲೆ ಹಲ್ಲೆ ಮಾಡಿದ್ದಾನೆ. ಈ ವಿಷಯ ತಿಳಿದು ಮಂಜುಳಾ ತನ್ನ ತಂದೆ ಮನೆಯಲ್ಲಿ ಇಲ್ಲದ್ದನ್ನು ಗಮನಿಸಿ ತನ್ನ ಅತ್ತೆ, ನಾದಿನಿಯವರೊಂದಿಗೆ ಬಂದು ತನ್ನ ತಂದೆಯ ಎರಡನೇ ಪತ್ನಿಯ ಮೇಲೆ ಹಲ್ಲೆ ಮಾಡಿದ್ಧಾರೆ. ಈ ಘಟನೆಯಿಂದ ಕೆರಳಿದ ಫಕೀರಪ್ಪ ತನ್ನ ಸಹೋದರರನ್ನು ಕರೆಯಿಸಿ ಅಕ್ರಮ ಕೂಟ ರಚಿಸಿಕೊಂಡು ಮಾರಕಾಸ್ತ್ರಗಳ ಸಮೇತ ಕವಡ್ಕಿ ಈರಪ್ಪನವರ ಮನೆಗೆ ನುಗ್ಗಿ 5 ಜನರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ಧಾನೆ. ಘಟನೆಯಲ್ಲಿ 4 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮನೆಯ ಯಜಮಾನ ಈರಪ್ಪ ಬಳ್ಳಾರಿ ಆಸ್ಪತ್ರೆಗೆ ತೆರಳುವಾಗ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ.

ತಾಯಿಗೆ ಹಿಂಸೆ ಕೊಟ್ಟರು:

‘ನಮ್ಮ ತಂದೆ ಎರಡನೇ ಪತ್ನಿಯ ಪ್ರಚೋದನೆಯಿಂದ ನಮ್ಮ ತಾಯಿಗೆ ಇಬ್ಬರೂ ಸೇರಿ ಚಿತ್ರ ಹಿಂಸೆ ಕೊಡುತ್ತಿದ್ದರು. ಇದನ್ನೇ ಪ್ರಶ್ನೆ ಮಾಡಿದ್ದಕ್ಕೆ ಸಹಿಸದೆ ನನ್ನ ತಂದೆ ದ್ವೇಷದಿಂದ ನನ್ನ ಗಂಡನ ತಾಯಿ, ತಂದೆ, ಅಣ್ಣಂದಿರು ಮತ್ತು ಅಕ್ಕಳನ್ನು ಕೊಲೆ ಮಾಡಿದ್ದಾರೆ‘ ಎಂದು ಮಂಜುಳಾ ಆರೋಪಿಸಿದ್ದಾರೆ.

ಸಿಂಧನೂರಿನಲ್ಲಿ ಪ್ರಥಮ:

ಸಿಂಧನೂರು ಇತಿಹಾಸದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಇದೇ ಪ್ರಥಮ. ಇಂತಹ ಘಟನೆ ನಡೆಯಬಾರದಿತ್ತು ಎಂದು ಸುಕಾಲಪೇಟೆಯ 85 ವರ್ಷದ ವೃದ್ಧೆಯೊಬ್ಬರು ಹೇಳಿದರು.

ಸಾರ್ವಜನಿಕರ ಆತಂಕ: ನಗರದಲ್ಲಿ ಹಾಡಹಗಲೆ 5 ಜನರನ್ನು ಹತ್ಯೆ ಮಾಡಿರುವ ಘಟನೆಯಿಂದ ಸಾರ್ವಜನಿಕರು ತೀವ್ರ ಆತಂಕಗೊಂಡಿದ್ದಾರೆ.

ಅಂತರ್ ಜಾತಿ ವಿವಾಹಗಳು ನಡೆದಿವೆ. ಅಂತರ್ ಧರ್ಮಿಯ ವಿವಾಹಗಳು ನಡೆದಿದ್ದು, ಅವರೆಲ್ಲ ಆದರ್ಶ ದಂಪತಿಗಳಾಗಿ ಬಾಳುತ್ತಿದ್ದಾರೆ. ಸ್ವಜಾತಿಯ ಪ್ರೇಮ ವಿವಾಹ ಮಾಡಿಕೊಂಡಿರುವ ಮಂಜುಳಾ ಮತ್ತು ಮೌನೇಶ ಅವರ ಪ್ರೇಮ ವಿವಾಹವನ್ನು ಸಹಿಸದೆ ಇಂಥ ಕೃತ್ಯ ನಡೆದಿರುವುದು ಖಂಡನೀಯ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.