ADVERTISEMENT

ಸಿಂಧನೂರು ಬಂದ್: ಜೋಳ ಖರೀದಿ ಆಗುವವರೆಗೂ ಧರಣಿ ಕೈಬಿಡದಿರಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 14:19 IST
Last Updated 1 ಜೂನ್ 2025, 14:19 IST
ಸಿಂಧನೂರಿನ ಮಿನಿವಿಧಾನಸೌಧದ ಮುಂದೆ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸಿ ಸಿಂಧನೂರು ಬಂದ್ ಕರೆ ಬೆಂಬಲಿಸಿ ಘೋಷಣೆ ಕೂಗಿದರು
ಸಿಂಧನೂರಿನ ಮಿನಿವಿಧಾನಸೌಧದ ಮುಂದೆ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸಿ ಸಿಂಧನೂರು ಬಂದ್ ಕರೆ ಬೆಂಬಲಿಸಿ ಘೋಷಣೆ ಕೂಗಿದರು   

ಸಿಂಧನೂರು: ‘ಮುಂಗಾರು ಮತ್ತು ಹಿಂಗಾರು ಹಂಗಾಮಿನ ಜೋಳವನ್ನು ಸಂಪೂರ್ಣವಾಗಿ ಖರೀದಿಸಲು ಸರ್ಕಾರ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಜೂ. 2ರಂದು ಸಿಂಧನೂರು ಬಂದ್ ನಡೆಸಲು ರೈತರೆಲ್ಲರೂ ಒಕ್ಕೊರಲಿನಿಂದ ತೀರ್ಮಾನಿಸಿದ್ದೇವೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಮೀನ್‍ಪಾಷಾ ದಿದ್ದಿಗಿ ತಿಳಿಸಿದರು.

ಇಲ್ಲಿನ ಮಿನಿವಿಧಾನಸೌಧದ ಮುಂದೆ ಜೋಳ ಬೆಳೆಗಾರರ ಒಕ್ಕೂಟ ಹಾಗೂ ರೈತಪರ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಸ್ಥಳದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಡಿ.31ಕ್ಕೆ ಜೋಳ ಖರೀದಿ ನೋಂದಣಿ ಹಾಗೂ ಜ.31 ರೊಳಗೆ ಜೋಳ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳಬೇಕಿತ್ತು. ಆದರೆ ರಾಜ್ಯ ಸರ್ಕಾರ ನಾಲ್ಕು ತಿಂಗಳ ನಂತರ ಅಂದರೆ ಮೇ ತಿಂಗಳಲ್ಲಿ ಖರೀದಿ ಆರಂಭಿಸಿದ್ದರಿಂದ ಜೋಳಕ್ಕೆ ನುಸಿ ಮತ್ತು ಹುಳ ಬಂದಿದೆ. ಇದಕ್ಕೆ ಸರ್ಕಾರದ ವಿಳಂಬ ನೀತಿ ಕಾರಣವೇ ಹೊರತು ರೈತರ ತಪ್ಪಲ್ಲ. ಇದರಿಂದ ರೈತರು ಆರ್ಥಿಕವಾಗಿ ದಿವಾಳಿಯಾಗಲಿದ್ದಾರೆ’ ಎಂದು ಹೇಳಿದರು.

ADVERTISEMENT

ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತರಾಯಗೌಡ ಕಲ್ಲೂರು ಮಾತನಾಡಿ,‘ಜೂ 2ರಂದು ತುರ್ತು ಸೇವೆ ಹೊರತುಪಡಿಸಿ ಎಲ್ಲ ಬಂದ್ ಮಾಡಲಾಗುವುದು. ಬೆಳಿಗ್ಗೆ 10 ಗಂಟೆಗೆ ಗಂಗಾವತಿ, ಕುಷ್ಟಗಿ ಹಾಗೂ ರಾಯಚೂರು ರಸ್ತೆಗಳಲ್ಲಿ ಸಾವಿರಾರು ರೈತರ ಮೆರವಣಿಗೆ ನಡೆಸಲಿದ್ದಾರೆ. ಮಿನಿವಿಧಾನಸೌಧದ ಮುಂದೆ ಬೃಹತ್ ಟೆಂಟ್ ಹಾಕಿ ಧರಣಿ ನಡೆಸಲಾಗುವುದು’ ಎಂದರು.

ವಕೀಲರ ಸಂಘ, ವೈದ್ಯರ ಸಂಘ, ಬೀಜ ಮತ್ತು ರಸಗೊಬ್ಬರ ಮಾರಾಟ ವ್ಯಾಪಾರಸ್ಥರ ಸಂಘ ಸೇರಿ ಪ್ರಗತಿಪರ, ದಲಿತಪರ, ಮಹಿಳಾಪರ, ಕನ್ನಡಪರ, ವಿದ್ಯಾರ್ಥಿ-ಯುವಜನರ ಸಂಘಟನೆಗಳು ಬಂದ್‍ ಬೆಂಬಲಿಸಿ ಭಾಗವಹಿಸುವ ಭರವಸೆ ನೀಡಿವೆ ಎಂದು ಹೇಳಿದರು.

ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಿ.ಎಚ್.ಪೂಜಾರ್, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಚಂದ್ರಶೇಖರ ಗೊರಬಾಳ, ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಬಸವರಾಜ ಗೋಡಿಹಾಳ, ರೈತ ಮುಖಂಡ ಮಲ್ಲೇಶಗೌಡ ಬಸಾಪುರ, ವಕೀಲರ ಸಂಘದ ಖಜಾಂಚಿ ಶರಣಬಸವ ಉಮಲೂಟಿ ಮಾತನಾಡಿದರು.

ಬಸವ ಕೇಂದ್ರದ ತಾಲ್ಲೂಕು ಘಟಕದ ಅಧ್ಯಕ್ಷ ಕರೇಗೌಡ ಕುರುಕುಂದಾ, ಶರಣ ಸಾಹಿತ್ಯ ಪರಿಷತ್ ಸಂಚಾಲಕ ವೀರಭದ್ರಗೌಡ ಅಮರಾಪುರ, ಮುಖಂಡರಾದ ಈರೇಶ ಇಲ್ಲೂರು, ಎಚ್.ಬಸವರಾಜ ವಕೀಲ, ಮಂಜುನಾಥ ಗಾಂಧಿನಗರ, ಬಸವರಾಜ ಬಾದರ್ಲಿ, ನಾಗರಾಜ ಪೂಜಾರ್, ಶೇಖ್‍ಸಾಬ್, ಚಂದ್ರಶೇಖರ ಕ್ಯಾತನಟ್ಟಿ, ಬಸವರಾಜ ಹಂಚಿನಾಳ, ಹಾಜಿಸಾಬ್ ಆಯನೂರು, ರಮೇಶ ಪಾಟೀಲ ಬೇರಿಗಿ, ಚನ್ನನಗೌಡ ಬನ್ನಿಗನೂರು, ಬಸವರಾಜ ಬನ್ನಿಗನೂರು, ನಾಗನಗೌಡ, ಅಪ್ಪಣ್ಣ ಕಾಂಬಳೆ, ಸಮ್ಮದ್ ಚೌದ್ರಿ, ಶಕುಂತಲಾ ಪಾಟೀಲ, ಬಸವರಾಜ ಖರಬದಿನ್ನಿ, ಪದ್ಮಾ ನಾಯ್ಡು, ಬಸವರಾಜ ಬುರ್ಲಿ ವಕೀಲ ಹಾಗೂ ಹನುಮಂತಪ್ಪ ಪುಲದಿನ್ನಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.