
ಸಿಂಧನೂರು: ಇಲ್ಲಿನ ಇಂದಿರಾನಗರದ ಖಬರಸ್ತಾನ ಪಕ್ಕದ ಬಳ್ಳಾರಿಯವರ ಬಡಾವಣೆಯ ಕಿರಾಣಿ ಅಂಗಡಿ ವ್ಯಾಪಾರಿಯೊಬ್ಬರ ಎರಡು ಕೈ–ಕಟ್ಟಿ ಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿದೆ.
ತಾಲ್ಲೂಕಿನ ಆರ್.ಎಚ್.ಕ್ಯಾಂಪ್-2ರ ನಿವಾಸಿ ಪ್ರವೀರ ಸರ್ದಾರ್ (32) ಕೊಲೆಯಾದ ಯುವಕ.
ಪ್ರವೀರ ಹಾಗೂ ಅವರ ಅಣ್ಣ ಪ್ರಶಾಂತ ಸರ್ದಾರ್ ನಗರಸಭೆ ಎದುರು ಕಿರಾಣಿ ಅಂಗಡಿ ನಡೆಸಿಕೊಂಡು ಹೋಗುತ್ತಿದ್ದರು. ಅ.30ರಂದು ಸಂಜೆ 6 ಗಂಟೆಗೆ ಪ್ರಶಾಂತ ಸರ್ದಾರ್ ಕ್ಯಾಂಪ್‌ಗೆ ಹೋಗಿದ್ದರು. ಆದರೆ, ರಾತ್ರಿ 8 ಗಂಟೆಯಾದರೂ ಪ್ರವೀರ ಮನೆಗೆ ವಾಪಸ್ ಬಾರದ ಕಾರಣ ಗಾಬರಿಗೊಂಡ ಪ್ರಶಾಂತ ಆತನ ಮೊಬೈಲ್‍ಗೆ ಕರೆ ಮಾಡಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಪ್ರಶಾಂತ ಹಾಗೂ ಅವರ ಸಂಬಂಧಿಕರು ರಾತ್ರಿಯೆಲ್ಲ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ.
ಅ.31ರಂದು ಬೆಳಿಗ್ಗೆ ಶಹರ ಪೊಲೀಸ್ ಠಾಣೆಯಲ್ಲಿ ಪ್ರಶಾಂತ ಸರ್ದಾರ್ ಅವರು ತಮ್ಮ ಸಹೋದರ ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಿಸಿದ್ದಾರೆ. ಶನಿವಾರ ಬೆಳಿಗ್ಗೆ ಸಿಂಧನೂರಿನ ಇಂದಿರಾನಗರದ ಖಬರಸ್ತಾನದ ಪಕ್ಕದಲ್ಲಿರುವ ಬಳ್ಳಾರಿ ಲೇಔಟ್‍ನಲ್ಲಿ ಪ್ರವೀರನ ಮೃತದೇಹ ಪತ್ತೆಯಾಗಿದೆ. ಆತನ ಎರಡೂ ಕೈಗಳನ್ನು ಕಬ್ಬಿಣದ ಬೈಂಡಿಂಗ್ ವೈಯರ್‌ನಿಂದ ಕಟ್ಟಿಹಾಕಿ, ತಲೆಯ ಮೇಲೆ ಕಲ್ಲು ಹಾಕಿ ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ.
ಶನಿವಾರ ಸಂಜೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ಶ್ವಾನದಳ ಮತ್ತು ಬೆರಳಚ್ಚುಗಾರರ ತಂಡ ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿತು. ಡಿವೈಎಸ್‍ಪಿ ಜಿ.ಚಂದ್ರಶೇಖರ, ಸರ್ಕಲ್ ಇನ್‌ಸ್ಪೆಕ್ಟರ್ ವೀರಾರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.