ADVERTISEMENT

ಸಿಂಧನೂರು: ಹಲ್ಲೆ ಆರೋಪಿಗಳ ಬಂಧನಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಮೇ 2025, 13:30 IST
Last Updated 5 ಮೇ 2025, 13:30 IST
ಸಿಂಧನೂರು ತಾಲ್ಲೂಕಿನ ಎಲೆಕೂಡ್ಲಿಗಿ ಗ್ರಾಮದ ಬಾಬುಸಾಬ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಎನ್.ಮೂರ್ತಿ ಸ್ಥಾಪಿತ)  ಸೋಮವಾರ ಸ್ಥಳೀಯ ಮಿನಿವಿಧಾನಸೌಧ ಕಚೇರಿ ಮುಂದೆ ಧರಣಿ ನಡೆಸಿತು
ಸಿಂಧನೂರು ತಾಲ್ಲೂಕಿನ ಎಲೆಕೂಡ್ಲಿಗಿ ಗ್ರಾಮದ ಬಾಬುಸಾಬ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಎನ್.ಮೂರ್ತಿ ಸ್ಥಾಪಿತ)  ಸೋಮವಾರ ಸ್ಥಳೀಯ ಮಿನಿವಿಧಾನಸೌಧ ಕಚೇರಿ ಮುಂದೆ ಧರಣಿ ನಡೆಸಿತು   

ಸಿಂಧನೂರು: ‘ತಾಲ್ಲೂಕಿನ ಎಲೆಕೂಡ್ಲಿಗಿ ಗ್ರಾಮದ ಬಾಬುಸಾಬ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಎನ್.ಮೂರ್ತಿ ಸ್ಥಾಪಿತ) ತಾಲ್ಲೂಕು ಘಟಕ ಸೋಮವಾರ ಸ್ಥಳೀಯ ಮಿನಿವಿಧಾನಸೌಧ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಿತು.

‘ನಿತ್ಯ ಸಮಾಜದಲ್ಲಿ ಒಂದಿಲ್ಲೊಂದು ಕಡೆ ಕೊಲೆ, ಅತ್ಯಾಚಾರ, ಮಾನಭಂಗ, ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ಹಣಬಲ, ತೋಳ್ಬಲದಿಂದ ಅಪರಾಧಿಗಳು ಯಾವುದೇ ಭಯವಿಲ್ಲದೆ ರಾಜಾರೋಷವಾಗಿ ಜೀವನ ನಡೆಸುತ್ತಿದ್ದಾರೆ. ಹಲ್ಲೆಗೀಡಾದ ಜನ ಆತಂಕದಲ್ಲಿ ಬದುಕುವಂತಾಗಿದೆ’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ನಂಜಲದಿನ್ನಿ ಆಕ್ರೋಶ ವ್ಯಕ್ತಪಡಿಸಿದರು.

‘ಏ.10, 2025ರಂದು ತಾಲ್ಲೂಕಿನ ಎಲೆಕೂಡ್ಲಿಗಿ ಗ್ರಾಮದಲ್ಲಿ ಬಾಬುಸಾಬ್ ಎಂಬ ವ್ಯಕ್ತಿ ಕೆಲಸದಲ್ಲಿ ನಿರತರಾಗಿದ್ದ ಸಮಯದಲ್ಲಿ ಬಸವರಾಜ ಈಶಪ್ಪಗೌಡ ಎಂಬಾತನು ವಿನಾಃಕಾರಣ ಮಾರಣಾಂತಿಕ ಹಲ್ಲೆ ಎಸಗಿ ಕೊಲೆ ಮಾಡಲು ಪ್ರಯತ್ನಿಸಿದ್ದಾನೆ. ಇದರಿಂದ ಬಾಬುಸಾಬ್ ಸಿಂಧನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನಂತರ ಬಾಬುಸಾಬ್ ಪತ್ನಿ ಪೊಲೀಸ್ ಠಾಣೆ ಮುಂದೆ ಮೂರು ದಿನ ಕುಳಿತರೂ ಪ್ರಕರಣ ದಾಖಲಿಸುವಲ್ಲಿ ಪೊಲೀಸರು ವಿಳಂಬ ಮಾಡಿ, ಮಹಿಳೆಗೆ ಗೌರವ ಕೊಡದೆ ಅನಾಗರಿಕರಂತೆ ವರ್ತಿಸಿದ್ದಾರೆ’ ಎಂದು ಆಪಾದಿಸಿದರು.

ADVERTISEMENT

ವಿಳಂಬವಾಗಿ ಪ್ರಕರಣ ದಾಖಲಿಸಿಕೊಂಡ ಸಬ್‍ಇನ್‌ಸ್ಪೆಕ್ಟರ್‌ ನೊಂದವರ ಪರವಾಗಿ ನಿಲ್ಲದೆ, ಆರೋಪಿ ಪರ ವಕಾಲತ್ ವಹಿಸಿ, ರಾಜಿ ಮಾಡಿಕೊಂಡು ಹೋಗುವಂತೆ ಬಾಬುಸಾಬ ಕುಟುಂಬದ ಮೇಲೆ ಒತ್ತಡ ಹಾಕಿದ್ದಾರೆ. ಆರೋಪಿ ಕಡೆಯಿಂದ ಲಂಚ ಪಡೆದು ಬಂಧಿಸುವಲ್ಲಿ ಮೀನಮೇಷ ಎಣಿಸುತ್ತಿದ್ದಾರೆ. ಆರೋಪಿ ಬಸವರಾಜ ಹಾಗೂ ಕುಟುಂಬದ ಸದಸ್ಯರು ಬಾಬುಸಾಬ್ ಅವರ ಮನೆಯ ಮುಂದೆ ಬಂದು ಬೈಕ್‍ನಿಂದ ಶಬ್ದ ಮಾಡಿ, ಬೆದರಿಕೆ ಹಾಕುತ್ತಿದ್ದಾರೆ. ಆದ್ದರಿಂದ ಕೂಡಲೇ ಆರೋಪಿಯನ್ನು ಬಂಧಿಸಬೇಕು ಹಾಗೂ ತುರ್ವಿಹಾಳ ಸಬ್‍ ಇನ್‌ಸ್ಪೆಕ್ಟರ್‌ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ಎಲೆಕೂಡ್ಲಿಗಿ ಗ್ರಾಮ ಘಟಕದ ಗೌರವಾಧ್ಯಕ್ಷ ಅಲ್ಲಾಸಾಬ್, ಅಧ್ಯಕ್ಷ ರಮೇಶ, ಕಾರ್ಯದರ್ಶಿ ರವಿ, ಹಲ್ಲೆಗೊಳಗಾದ ಬಾಬುಸಾಬ, ಮುಖಂಡರಾದ ನಿರುಪಾದೆಪ್ಪ, ಮೈಬು ಪಟೇಲ್, ಹೊಳಿಯಪ್ಪ, ಹುಲಿಗೆಮ್ಮ ಶೇಖರಪ್ಪ, ಪಂಪಮ್ಮ ಮೌನೇಶ, ಇಂದ್ರಮ್ಮ ಅಂಬಣ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.