ADVERTISEMENT

ಸಿಂಧನೂರು: ಒಳಚರಂಡಿ ಕಾಮಗಾರಿ ಹಸ್ತಾಂತರಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 6:10 IST
Last Updated 14 ಅಕ್ಟೋಬರ್ 2025, 6:10 IST
ಸಿಂಧನೂರಿನ ನಗರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಮಾತನಾಡಿದರು
ಸಿಂಧನೂರಿನ ನಗರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಮಾತನಾಡಿದರು   

ಸಿಂಧನೂರು: ‘ನಗರಸಭೆ ವ್ಯಾಪ್ತಿಯಲ್ಲಿ ಕೆಯುಐಡಿಎಫ್‍ಸಿಯಿಂದ ಅನುಷ್ಠಾನಗೊಂಡಿರುವ ಒಳಚರಂಡಿ ಕಾಮಗಾರಿಯನ್ನು ನಗರಸಭೆಗೆ ಹಸ್ತಾಂತರಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಮತ್ತು ನಗರಸಭೆ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಒಳಚರಂಡಿ ಹಸ್ತಾಂತರ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಆಕ್ರೋಶಗೊಂಡ ಬಸನಗೌಡ ಬಾದರ್ಲಿ ಅವರು, ‘ಒಳಚರಂಡಿ ಕಾಮಗಾರಿ ನಗರದಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಕುರಿತು ನಗರಸಭೆ ಮತ್ತು ಕೆಯುಐಡಿಎಫ್‍ಸಿ ಜಂಟಿಯಾಗಿ ಪರಿಶೀಲನೆ ನಡೆಸಿ, ವರದಿ ಸಲ್ಲಿಸಲು ನಗರಾಭಿವೃದ್ಧಿ ಇಲಾಖೆ ಸಚಿವರು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚಿಸಿದ್ದಾರೆ. 10 ವರ್ಷಗಳಾದರೂ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಚರಂಡಿ ನೀರು ಹೋಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಕಳಪೆ ಮತ್ತು ಭ್ರಷ್ಟಾಚಾರದ ಕಾಮಗಾರಿಯನ್ನು ನಗರಸಭೆಗೆ ಹಸ್ತಾಂತರ ಮಾಡಿ, ಕೈತೊಳೆದುಕೊಳ್ಳಬೇಕು ಅಂತ ಮಾಡಿದ್ದೀರಾ?’ ಎಂದು ಕೆಯುಐಡಿಎಫ್‍ಸಿ ಯೋಜನಾ ವ್ಯವಸ್ಥಾಪಕ ಸತೀಶ ಮತ್ತು ಅಂಜನಪ್ಪ ಅವರನ್ನು ತರಾಟೆ ತೆಗೆದುಕೊಂಡರು.

ಇದಕ್ಕೆ ದನಿಗೂಡಿಸಿದ ನಗರಸಭೆ ಸದಸ್ಯ ಕೆ.ಜಿಲಾನಿಪಾಷಾ ಅವರು, ‘ಒಳಚರಂಡಿ ಕಾಮಗಾರಿ ಪೂರ್ಣಗೊಳ್ಳುವವರೆಗೂ ಹಸ್ತಾಂತರ ಬೇಡ ಎಂದು ಎಲ್ಲ ಸದಸ್ಯರು ತೀರ್ಮಾನಿಸಿದ್ದೇವೆ’ ಎಂದರು.

ADVERTISEMENT

ಇದಕ್ಕೆ ಪೌರಾಯುಕ್ತ ಪಾಂಡುರಂಗ ಇಟಗಿ, ‘ಈ ಯೋಜನೆ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟರು.‌

ಕಾಮಗಾರಿ ಕುರಿತು ಸತೀಶ ಮಾಹಿತಿ ಕೊಡಲು ಮುಂದಾದರು. ಇದಕ್ಕೆ ಒಪ್ಪದ ಸದಸ್ಯ ಮಲ್ಲಿಕಾರ್ಜುನ ಪಾಟೀಲ ಅವರು, ‘ದುಡ್ಡು ತಗೊಂಡು ಗುತ್ತಿಗೆದಾರ ಓಡಿ ಹೋಗಿದ್ದಾರೆ. ಅವರು ಬಂದು ವಾರ್ಡ್‌ವಾರು ಪರೀಕ್ಷೆ ನಡೆಸಿ ತೋರಿಸಬೇಕು’ ಎಂದು ಆಗ್ರಹಿಸಿದರು.

‘ದಸರಾ ಉತ್ಸವಕ್ಕೆ ₹ 50 ಲಕ್ಷ ಹಣ ಕೊಡುವ ಮುನ್ನ ನಗರಸಭೆ ಸದಸ್ಯರ ಸಭೆ ಕರೆದು ಒಪ್ಪಿಗೆ ಏಕೆ ಪಡೆದಿಲ್ಲ. ಸಾರ್ವಜನಿಕರ ತೆರಿಗೆ ಹಣವನ್ನು ಹೇಗೆ ಬೇಕಾದರೂ ಬಳಸಬಹುದೇ ಎಂದು ಬಸನಗೌಡ ಬಾದರ್ಲಿ ಅವರು, ಪೌರಾಯುಕ್ತರನ್ನು ಪ್ರಶ್ನಿಸಿದರು. ಅಲ್ಲದೆ, ನಾನು ಹೇಳಿದ್ದನ್ನು ನಿರ್ಣಯದಲ್ಲಿ ಬರೆದುಕೊಳ್ಳಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಸದಸ್ಯ ಮಲ್ಲಿಕಾರ್ಜುನ ಪಾಟೀಲ ಅವರು, ‘ಎಲ್ಲ ಸದಸ್ಯರು ಸರ್ವಾನುಮತದಿಂದ ಹಣ ನೀಡಲು ಒಪ್ಪಿಗೆ ನೀಡಿದ್ದಾರೆ ಎಂದು ನಿರ್ಣಯದಲ್ಲಿ ಬರೆಯಿರಿ’ ಎಂದು ಏರುಧ್ವನಿಯಲ್ಲಿ ಹೇಳಿದರು. ಆಗ ಸದಸ್ಯ ಕೆ.ಜಿಲಾನಿಪಾಷಾ ಎದ್ದು ನಿಂತು ಇಬ್ಬರೂ ಹೇಳಿದ್ದನ್ನು ಬರೆಯಿರಿ ಎಂದು ಸಮಾಧಾನ ಪಡಿಸಿದರು.

ನಗರಸಭೆಯ 2025-26ನೇ ಸಾಲಿನ ಆಸ್ತಿ ತೆರಿಗೆ ಪರಿಷ್ಕರಣೆಗೆ ಸದಸ್ಯರು ವಿರೋಧ ವ್ಯಕ್ತಪಡಿಸಿ, ‘ಜನರಿಗೆ ಆರ್ಥಿಕ ಹೊರೆ ಮಾಡುತ್ತೀರಿ. ಮೂಲಸೌಕರ್ಯ ಎಷ್ಟು ಕಲ್ಪಿಸಿದ್ದೀರಿ. ಫಾರಂ ನಂ.3, ರಿನಿವಲ್, ಮುಟೇಶನ್ ಪ್ರತಿಗಳನ್ನು ನಿಗದಿತ ಅವಧಿಯಲ್ಲಿ ಕೊಟ್ಟಿದ್ದೀರಾ ಎಂದು ಸದಸ್ಯರು ಪ್ರಶ್ನಿಸಿದರು.

ಆಗ ಪ್ರತಿಕ್ರಿಯಿಸಿದ ಪೌರಾಯುಕ್ತ ಪಾಂಡುರಂಗ ಇಟಗಿ ಮತ್ತು ಕಂದಾಯ ಅಧಿಕಾರಿ ಮಾಧುರಿ ಅವರು, ‘ಸರ್ಕಾರದ ಮಾರ್ಗಸೂಚಿ ಇದೆ. ಎಂದು ಮನವೊಲಿಸಿದಾಗ ಶೇ 3ರಷ್ಟು ಹೆಚ್ಚಳಕ್ಕೆ ಸದಸ್ಯರು ಒಪ್ಪಿಗೆ ನೀಡಿದರು.

ನೋಟೀಸ್ ಜಾರಿ ಮಾಡಿ: ‘ನಗರಸಭೆಯಲ್ಲಿ 3 ಕಾಯಂ, 7 ಮಂದಿ ಹೊರಗುತ್ತಿಗೆ ಆಧಾರದ ಬಿಲ್ ಕಲೆಕ್ಟರ್‌ಗಳು ಇದ್ದಾರೆ. ಬೇಕಾಬಿಟ್ಟಿಯಾಗಿ ಕೆಲಸ ಮಾಡಿ, ರಾಜಕಾರಣಿಗಳಂತೆ ವರ್ತಿಸುತ್ತಿದ್ದಾರೆ. ಸಾಮಾನ್ಯ ಸಭೆಗೆ ಹಾಜರಾಗುವುದಿಲ್ಲ’ ಎಂದು ಸದಸ್ಯ ಕೆ.ಹನುಮೇಶ ಆರೋಪಿಸಿದರು.

ಪೌರಾಯುಕ್ತರು ಪ್ರತಿಕ್ರಿಯಿಸಿ, ‘ಸಭೆಗೆ ಅಗೌರವ ತೋರಿ ಗೈರು ಹಾಜರಾದ ಬಿಲ್ ಕಲೆಕ್ಟರ್‌ಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗುವುದು’ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಮಂಜುಳಾ ಪ್ರಭುರಾಜ, ಸಹಾಯಕ ಕಾರ್ಯಪಾಲಕ ಎಂಜನಿಯರ್ ಕೆ.ಮಹಾದೇವ ಸೇರಿದಂತೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

ಸಿಂಧನೂರಿನ ನಗರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ಅಧಿಕಾರಿಗಳು ಸಿಬ್ಬಂದಿ ವರ್ಗ ಹಾಜರಿರುವುದು
52 ಪೌರಕಾರ್ಮಿಕರಿದ್ದು 158 ಜನರ ಅಗತ್ಯವಿದೆ. ಜನಸಂಖ್ಯೆಗೆ ಅನುಗುಣವಾಗಿಲ್ಲ. ಹೆಚ್ಚುವರಿ ಪೌರಕಾರ್ಮಿಕರನ್ನು ನೇಮಕಾತಿ ಮಾಡುವಂತೆ ಜಿಲ್ಲಾಧಿಕಾರಿ ಗಮನ ಸೆಳೆಯಬೇಕಿದೆ
ಪಾಂಡುರಂಗ ಇಟಗಿ ಪೌರಾಯುಕ್ತ ನಗರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.