ADVERTISEMENT

ಶೀಘ್ರದಲ್ಲಿ ಕುಡಿಯುವ ನೀರಿನ ಕಾಮಗಾರಿ ಪೂರ್ಣ: ಶಾಸಕ ಹಂಪನಗೌಡ ಬಾದರ್ಲಿ

ನೂತನ ಕಚೇರಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 6:06 IST
Last Updated 8 ನವೆಂಬರ್ 2025, 6:06 IST
ಸಿಂಧನೂರಿನಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಅವರು ಪ್ರವಾಸಿ ಮಂದಿರದ ಆವರಣದ ಕಟ್ಟಡದಲ್ಲಿ ತಮ್ಮ ಅಧಿಕೃತ ಕಚೇರಿ ಉದ್ಘಾಟಿಸಿದರು
ಸಿಂಧನೂರಿನಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಅವರು ಪ್ರವಾಸಿ ಮಂದಿರದ ಆವರಣದ ಕಟ್ಟಡದಲ್ಲಿ ತಮ್ಮ ಅಧಿಕೃತ ಕಚೇರಿ ಉದ್ಘಾಟಿಸಿದರು   

ಸಿಂಧನೂರು: ‘ಬಹುದಿನಗಳಿಂದ ಅಪೂರ್ಣಗೊಂಡಿರುವ ನಿರಂತರ ಕುಡಿಯುವ ನೀರು ಮತ್ತು ಒಳಚರಂಡಿ ಯೋಜನೆ ಕಾಮಗಾರಿ ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದೆ’ ಎಂದು ಶಾಸಕ ಹಂಪನಗೌಡ ಬಾದರ್ಲಿ ಭರವಸೆ ನೀಡಿದರು.

ಪ್ರವಾಸಿ ಮಂದಿರದ ಹಳೆಯ ಕಟ್ಟಡದಲ್ಲಿ ಶುಕ್ರವಾರ ಅಧಿಕೃತವಾಗಿ ಶಾಸಕರ ಕಚೇರಿ ಉದ್ಘಾಟಿಸಿ ಮಾತನಾಡಿದರು.

‘ನಿರಂತರ ಕುಡಿಯುವ ನೀರಿನ ಯೋಜನೆಗೆ ₹18 ಕೋಟಿ ಅವಶ್ಯಕತೆ ಇದೆ. ಈಗಾಗಲೇ ನಗರಸಭೆಯಲ್ಲಿ ಅಧಿಕಾರಿಗಳ ಮತ್ತು ತಜ್ಞರ ಸಭೆ ನಡೆಸಿ ಅಪೂರ್ಣಗೊಂಡ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ಶೇ 75ರಷ್ಟು ಕೆಲಸ ಮುಗಿದಿದೆ’ ಎಂದರು.

ADVERTISEMENT

‘ಕುಡಿಯುವ ನೀರಿನ ಕೆರೆ, ತುರ್ವಿಹಾಳದಿಂದ ಸಿಂಧನೂರಿನವರೆಗೆ 22 ಕಿ.ಮೀ ಪೈಪ್‍ಲೈನ್ ಮತ್ತು ಓವರ್ ಹೆಡ್‍ಟ್ಯಾಂಕ್ ಹಾಗೂ ಶುದ್ಧೀಕರಣ ಘಟಕದ ಕಾಮಗಾರಿಗಳು ಪೂರ್ಣಗೊಂಡಿವೆ. ಆದಷ್ಟು ಶೀಘ್ರ ಸಿಂಧನೂರು ನಗರದ ಜನರಿಗೆ ಪ್ರತಿನಿತ್ಯ ನೀರು ಸಿಗುವಂತೆ ಕ್ರಮ ಕೈಗೊಳ್ಳುವುದಾಗಿ’ ಅವರು ತಿಳಿಸಿದರು.

‘ಒಳಚರಂಡಿ ವ್ಯವಸ್ಥೆಗೆ ₹20 ಕೋಟಿ ಹಣ ಬಿಡುಗಡೆಯಾಗಿದೆ. ಹಲವಾರು ಕಡೆ ಮ್ಯಾನ್‍ಹೋಲ್‍ಗಳು ಹೂಳು ತುಂಬಿವೆ. ಮನೆಗಳಿಗೆ ಚರಂಡಿ ಪೈಪ್‍ಗಳ ಸಂಪರ್ಕ ಕಲ್ಪಿಸಿಲ್ಲ. ಇನ್ನೂ ಅಲ್ಲಲ್ಲಿ ಒಡೆದು ಹೋಗಿರುವ ಪೈಪ್‌ಗಳನ್ನು ಸರಿಪಡಿಸುವುದು, ಸಂಸ್ಕರಣಾ ಘಟಕದ ಸಿದ್ಧತೆ ಸೇರಿದಂತೆ ಎಲ್ಲ ಕಾಮಗಾರಿಗಳನ್ನು ಮುಗಿಸುವಂತೆ ಒಳಚರಂಡಿ ಕಾಮಗಾರಿಯ ಗುತ್ತಿಗೆ ಪಡೆದ ಸಕಲೇಶ್‍ಚಂದ ಅವರಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು,‘ನಗರದಲ್ಲಿ ವಾಹನದಟ್ಟಣೆ ಹೆಚ್ಚಳವಾಗಿದ್ದು, ಸಂಚಾರ ನಿಯಂತ್ರಣಕ್ಕೆ ತೊಂದರೆಯಾಗುತ್ತಿದೆ. ಕಾರಣ ಪೊಲೀಸರು ಹಲವು ಕಡೆ ನಾಮಫಲಕಗಳನ್ನು ಅಳವಡಿಸಿ ಪಾರ್ಕಿಂಗ್ ವ್ಯವಸ್ಥೆ ಮಾಡುತ್ತಿದ್ದಾರೆ’ ಎಂದರು.

‘ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಪ್ರಮುಖ ವೃತ್ತಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಪೊಲೀಸ್ ಠಾಣೆಯಲ್ಲಿ ಕಂಟ್ರೋಲ್ ರೂಮ್ ಮಾಡಿ ಅಲ್ಲಿಂದಲೇ ಸಂಚಾರ ನಿಯಂತ್ರಣ ಸೇರಿದಂತೆ ಎಲ್ಲ ವಿಧದ ಚಲನವಲನಗಳನ್ನು ವೀಕ್ಷಿಸಲಾಗುತ್ತದೆ. ತಾಲ್ಲೂಕಿನಲ್ಲಿ ಯಾವುದೇ ವಿಧದ ಕಾನೂನುಬಾಹಿರ ಕೃತ್ಯಗಳು ಜರುಗದಂತೆ ನಿಗಾ ವಹಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

ಎಂ.ಕಾಳಿಂಗಪ್ಪ ವಕೀಲ, ಶ್ರೀದೇವಿ ಶ್ರೀನಿವಾಸ್, ಪ್ರಭುರಾಜ ಹಾಗೂ ಖಾಜಿ ಮಲಿಕ್ ವಕೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.