
ಸಿಂಧನೂರು: ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ಎರಡನೇ ಬೆಳೆಗಾಗಿ ಸಮರ್ಪಕ ನೀರು ಹರಿಸಬೇಕು ಹಾಗೂ ರೈತರು ಬೆಳೆದ ಸಂಪೂರ್ಣ ಜೋಳವನ್ನು ರಾಜ್ಯ ಸರ್ಕಾರದ ಖರೀದಿ ಕೇಂದ್ರಗಳ ಮೂಲಕ ಖರೀದಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೋಮವಾರ ಸ್ಥಳೀಯ ಮಿನಿವಿಧಾನಸೌಧ ಕಚೇರಿಗೆ ಮುತ್ತಿಗೆ ಚಳವಳಿ ನಡೆಸಿತು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ನೆರೆದ್ದ ರೈತ ಮುಖಂಡರು ಮೆರವಣಿಗೆ ಮೂಲಕ ಗಾಂಧಿ ವೃತ್ತದ ಮಾರ್ಗವಾಗಿ ಮಿನಿವಿಧಾನಸೌಧ ಕಚೇರಿಯ ಮುಂಭಾಗಕ್ಕೆ ತಲುಪಿದರು. ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ಮಿನಿವಿಧಾನಸೌಧ ಮುಖ್ಯದ್ವಾರದ ಗೇಟ್ ಹಾಕಿ, ಬ್ಯಾರಿಕೇಡ್‍ಗಳನ್ನು ಇಟ್ಟು ತಡೆದರು. ರೊಚ್ಚಿಗೆದ್ದ ಪ್ರತಿಭಟನಕಾರರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಬ್ಯಾರಿಕೇಡ್ ತಳ್ಳಿ ನುಗ್ಗಲು ಪ್ರಯತ್ನಿಸಿದ ರೈತ ಮುಖಂಡರನ್ನು ಸಂಚಾರ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಚಂದ್ರಶೇಖರ ನೇತೃತ್ವದಲ್ಲಿ ಬಂಧಿಸಿ ಕೆಎಸ್‍ಆರ್‌ಪಿ ವಾಹನದಲ್ಲಿ ಠಾಣೆಗೆ ಕರೆದೊಯ್ದರು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆಯಿತು. ಕೆಲ ಹೊತ್ತಿನ ನಂತರ ಬಿಡುಗಡೆಗೊಳಿಸಲಾಯಿತು.
ತದನಂತರ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಮೀನ್‍ಪಾಷ ದಿದ್ದಿಗಿ ಮಾತನಾಡಿ ‘ಕಳೆದ ವರ್ಷ 2 ಲಕ್ಷ ಮೆಟ್ರಿಕ್ ಟನ್‍ಗಳಷ್ಟು ಜೋಳ ಖರೀದಿಸಲಾಗಿತ್ತು. ಆದರೆ ಈ ವರ್ಷ ಏಕಾಏಕಿ ಕೇವಲ 88 ಸಾವಿರ ಮೆಟ್ರಿಕ್ ಟನ್ ಜೋಳ ಖರೀದಿಗೆ ನಿರ್ಣಯಿಸಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಕೃಷಿ ಚಟುವಟಿಕೆಗೆ ಖರ್ಚು ಮಾಡಿದ ಹಣದಷ್ಟು ಬೆಳೆ ಮಾರಾಟದ ಹಣ ಬರುತ್ತಿಲ್ಲ. ಇಂತಹ ಸಂದರ್ಭದಲ್ಲಿ ಎರಡನೇ ಬೆಳೆಗೆ ನೀರು ಹರಿಸುವುದಿಲ್ಲ ಎಂದು ಐಸಿಸಿ ಸಭೆಯಲ್ಲಿ ತೀರ್ಮಾನಿಸಿರುವುದು ರೈತ ವಿರೋಧಿ ಧೋರಣೆಯಾಗಿದೆ. ಡಿ.1 ರಿಂದ ಜೋಳ ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡುವುದರ ಜೊತೆಗೆ ರೈತರು ಬೆಳೆದ ಎಲ್ಲ ಜೋಳವನ್ನು ಖರೀದಿ ಮಾಡಬೇಕು. ಎರಡನೇ ಬೆಳೆಗಾಗಿ ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ನೀರು ಹರಿಸಬೇಕು’ ಎಂದು ಒತ್ತಾಯಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಹಂಚಿನಾಳ, ತಾಲ್ಲೂಕು ಘಟಕದ ಅಧ್ಯಕ್ಷ ಶಿವನಗೌಡ ಗುಡದೂರು, ಗೌರವ ಅಧ್ಯಕ್ಷ ಅಣ್ಣಪ್ಪ ಹುಡೇದ್ ಜಾಲಿಹಾಳ, ಮುಖಂಡರಾದ ನಾಗನಗೌಡ ಪೋತ್ನಾಳ, ವೀರೇಶ ಮಡಿವಾಳ, ಬಸವರಾಜ ಗೋಡಿಹಾಳ, ಖಾದರ್‍ಸಾಬ್, ಉಮೇಶ ಬಾಗಲವಾಡ, ಹನುಮಂತ ಜವಳಗೇರಾ ಸೇರಿದಂತೆ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.
ಎರಡನೇ ಬೆಳೆಗೆ ನೀರು ಹರಿಸಬೇಕು ಹಾಗೂ ಖರೀದಿ ಕೇಂದ್ರಗಳನ್ನು ತೆರೆದು ಕನಿಷ್ಠ ಬೆಂಬಲ ಬೆಲೆಯಡಿ ಬೆಳೆಗಳನ್ನು ಖರೀದಿಸಬೇಕುಅಮೀನ್ಪಾಷಾ ದಿದ್ದಿಗಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.