ಸಿಂಧನೂರು: ನಗರದಲ್ಲಿ ಮೂರು ದಿನ ನಡೆದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ 12ನೇ ರಾಜ್ಯ ಮಟ್ಟದ ಸಮ್ಮೇಳನದಲ್ಲಿ 12 ಪ್ರಮುಖ ನಿರ್ಣಯಗಳನ್ನು ಅಂಗೀಕಾರ ಮಾಡಲಾಗಿದೆ ಎಂದು ರಾಜ್ಯ ಘಟಕದ ನೂತನ ಪ್ರಧಾನ ಕಾರ್ಯದರ್ಶಿ ದೇವಿ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಧರ್ಮಸ್ಥಳದಲ್ಲಿ ನಡೆದಿರುವ ಪದ್ಮಲತಾರಿಂದ ಸೌಜನ್ಯವರೆಗಿನ ಅಪಹರಣ, ಅತ್ಯಾಚಾರ, ಕೊಲೆ, ಭೂಕಬಳಿಕೆ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಮಹಿಳಾ ಬ್ಯಾಂಕ್‍ಗಳ ವ್ಯವಹಾರದ ಕುರಿತು ಎಸ್‍ಐಟಿ ತನಿಖೆ ನಡೆಸಬೇಕು. ಕೋಮುವಾದ ಹೆಸರಿನಲ್ಲಿ ಮಹಿಳೆಯರ ಮೇಲೆ ಶೋಷಣೆ ಮತ್ತು ಲಿಂಗ ತಾರತಮ್ಯ ನಡೆಯುತ್ತಿದ್ದು, ಇದರ ವಿರುದ್ಧ ಜಾಗೃತಿ ಅಭಿಯಾನ ನಡೆಸಿ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಮಾನತೆ ಕಲ್ಪಿಸಬೇಕು ಎಂದರು.
‘ಮೈಸೂರು ದಸರಾ ಉತ್ಸವದ ಉದ್ಘಾಟನೆಗಾಗಿ ‘ಬುಕರ್’ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರನ್ನು ರಾಜ್ಯ ಸರ್ಕಾರ ಆಹ್ವಾನಿಸಿದ್ದು ಸಮಯೋಚಿತವಾಗಿದೆ. ಆದರೆ ಬಿಜೆಪಿ ಮತ್ತು ಸಂಘ ಪರಿವಾರದವರು ಧರ್ಮದ ಲೇಪನ ಹಚ್ಚಿ ತಕರಾರು ಮಾಡುತ್ತಿರುವುದು ಖಂಡನೀಯ. ಜನಪ್ರತಿನಿಧಿಗಳು ಮತ್ತು ರಾಜಕಾರಣಿಗಳು ಮಹಿಳಾ ವಿರೋಧಿ ಭಾಷೆ ಮತ್ತು ಮನೋಭಾವ ಬದಲಿಸಿಕೊಳ್ಳಬೇಕು’ ಎಂದರು.
‘ಎಲ್ಲ ಜನರಿಗೆ ಆಹಾರ ಭದ್ರತೆಯನ್ನು ಖಾತ್ರಿ ಮಾಡಿ ಮಹಿಳಾ ಪರ ಆಹಾರ ನೀತಿ ರೂಪಿಸಿ, 16 ಆಹಾರ ವಸ್ತುಗಳನ್ನು ವಿತರಿಸಬೇಕು. ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ನಿರ್ಮೂಲನೆಗೆ ದಿಟ್ಟ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಆರೋಗ್ಯ ರಂಗವನ್ನು ಬಲಪಡಿಸಿ ಆರೋಗ್ಯದ ಹಕ್ಕನ್ನು ಶಾಸನ ಬದ್ಧಗೊಳಿಸಬೇಕು’ ಎಂದು ಆಗ್ರಹಿಸಿದರು.
ರಾಜ್ಯ ಘಟಕದ ನೂತನ ಅಧ್ಯಕ್ಷೆ ಎಂ.ಚಂದ್ರಕುಮಾರಿ ಮಾತನಾಡಿ, ‘ದುಡಿಯುವ ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ಕಡ್ಡಾಯಗೊಳಿಸಬೇಕು. ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ ತಡೆಗಟ್ಟಿ ಮಹಿಳೆಯರನ್ನು ಸಾಲಬಾಧೆಯಿಂದ ರಕ್ಷಿಸಬೇಕು. ನರೇಗಾ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸಬೇಕು. ಕಾಲೇಜು ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.
ಖಜಾಂಚಿ ಸುನೀತಾ, ಜಿಲ್ಲಾ ಘಟಕದ ಅಧ್ಯಕ್ಷೆ ಶಕುಂತಲಾ ಪಾಟೀಲ, ಉಪಾಧ್ಯಕ್ಷೆ ಶ್ಯಾಮಲಾ ಪೂಜಾರಿ, ತಾಲ್ಲೂಕು ಘಟಕದ ಅಧ್ಯಕ್ಷೆ ಗಿರಿಜಾ ಕಿಲ್ಲೇದ್, ಕಾರ್ಯದರ್ಶಿ ಸಿದ್ದೇಶ್ವರಿ, ಸದಸ್ಯೆ ವಾಣಿಶ್ರೀ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.