ADVERTISEMENT

ಹೆಚ್ಚುತ್ತಿದೆ ಸಿಂಧನೂರು ಜಿಲ್ಲಾ ಹೋರಾಟದ ಕಿಚ್ಚು

ಶಾಸಕ, ವಿಧಾನ ಪರಿಷತ್ ಸದಸ್ಯರ ಭಿನ್ನ ನಡೆ: ಪಕ್ಷಾತೀತ ಹೋರಾಟದ ಜಪ, ಹಲವು ಬಾರಿ ಸಭೆ, ಚರ್ಚೆ

ಡಿ.ಎಚ್.ಕಂಬಳಿ
Published 9 ಫೆಬ್ರುವರಿ 2026, 7:50 IST
Last Updated 9 ಫೆಬ್ರುವರಿ 2026, 7:50 IST
ಸಿಂಧನೂರು ಜಿಲ್ಲಾ ಕರಡು ನಕಾಶೆ
ಸಿಂಧನೂರು ಜಿಲ್ಲಾ ಕರಡು ನಕಾಶೆ   

ಸಿಂಧನೂರು: ಸಿಂಧನೂರು ಜಿಲ್ಲಾ ಕೇಂದ್ರ ರಚನೆಯ ಹೋರಾಟದ ಕಿಚ್ಚು ದಿನದಿಂದ ದಿನಕ್ಕೆ ವ್ಯಾಪಿಸುತ್ತಿದೆ. ಸಂಘ-ಸಂಸ್ಥೆಗಳು, ಚುನಾಯಿತ ಜನಪ್ರತಿನಿಧಿಗಳ ನೇತೃತ್ವದಲ್ಲಿ ಮೇಲಿಂದ ಮೇಲೆ ಜಿಲ್ಲಾ ಹೋರಾಟ ಸಮಿತಿಯ ಸಭೆಗಳು ನಡೆಯುತ್ತಿದ್ದು, ಸರ್ಕಾರದ ಗಮನ ಸೆಳೆಯಲು ಒಕ್ಕೊರಲ ದನಿ ಮೊಳಗಿದೆ.

ಶಾಸಕ ಹಂಪನಗೌಡ ಬಾದರ್ಲಿ, ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್ ನೇತೃತ್ವದಲ್ಲಿ ನಗರಸಭೆ ಸಭಾಂಗಣದಲ್ಲಿ ಜ.2ರಂದು ಜಿಲ್ಲಾ ಹೋರಾಟಕ್ಕೆ ಸಂಬಂಧಿಸಿದಂತೆ ವರ್ತಕರು, ವಕೀಲರು, ವೈದ್ಯರು, ಪ್ರಗತಿಪರ ಮತ್ತು ಕನ್ನಡಪರ ಸಂಘಟನೆಗಳ ಪ್ರಮುಖರ ಸಭೆ ನಡೆಸಲಾಯಿತು.

ಬಳಿಕ ಜ.8ರಂದು ನಗರದ ಟೌನ್‌ಹಾಲ್‌ನಲ್ಲಿ ವಿವಿಧ ಸಂಘಟನೆಗಳ ವಿಸ್ತೃತ ಸಭೆ ನಡೆಯಿತು. ಅಲ್ಲದೆ, ಜ.18ರಂದು ವಿವಿಧ ಮಠಾಧೀಶರು, ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಹಾಗೂ ಹಲವು ಸಂಘಟನೆಗಳ ನೇತೃತ್ವದಲ್ಲಿ ನಗರದ ಟೌನ್ ಹಾಲ್‍ನಲ್ಲಿ ನಡೆದ ಸಭೆಯಲ್ಲಿ ಹೋರಾಟವನ್ನು ಇನ್ನಷ್ಟು ಗಟ್ಟಿಗೊಳಿಸುವುದು ಮತ್ತು ಸರ್ಕಾರದ ಮುಂದೆ ಬೇಡಿಕೆ ಮಂಡಿಸಲು ಹಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.

ADVERTISEMENT

ಎರಡು ಪರಿಕಲ್ಪನೆ ಕುರಿತು ಚರ್ಚೆ: ಸಿಂಧನೂರು, ಮಸ್ಕಿ, ಕಾರಟಗಿ, ಸಿರುಗುಪ್ಪ ತಾಲ್ಲೂಕು ಹಾಗೂ ತುರ್ವಿಹಾಳ ಪಟ್ಟಣವನ್ನು ಒಳಗೊಂಡು ಸಿಂಧನೂರು ಜಿಲ್ಲೆ ರಚನೆ ಹಾಗೂ ಸಿಂಧನೂರು, ಮಸ್ಕಿ, ಲಿಂಗಸುಗೂರು, ಸಿರವಾರ ತಾಲ್ಲೂಕುಗಳನ್ನು ಸೇರಿಸಿಕೊಂಡು ಸಿಂಧನೂರು ಜಿಲ್ಲೆ ರಚನೆ ಹೀಗೆ ಎರಡು ರೀತಿಯ ಪರಿಕಲ್ಪನೆಗಳ ಬಗ್ಗೆ ಮಠಾಧೀಶರು ಹಾಗೂ ಎಂಎಲ್‍ಸಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ.

ಈ ಸಭೆಯಲ್ಲಿ ಜಿಲ್ಲಾ ಹೋರಾಟ ಸಮಿತಿ ರಚಿಸುವ ಬಗ್ಗೆ, ಜಿಲ್ಲಾ ಹೋರಾಟದ ರೂಪು-ರೇಷೆಗಳು, ಸಿಂಧನೂರು ಜಿಲ್ಲೆ ರಚನೆಗೆ ಯಾವ್ಯಾವ ತಾಲ್ಲೂಕುಗಳನ್ನು ಆಯ್ಕೆ ಮಾಡಿಕೊಂಡರೆ ಸೂಕ್ತ ಹಾಗೂ ಇನ್ನಿತರೆ ವಿಷಯಗಳ ಕುರಿತು ಸಭೆಯಲ್ಲಿದ್ದ ಹಲವು ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿಂಧನೂರು ಜಿಲ್ಲೆಯಾಗಲು ಯೋಗ್ಯ: ಸಿಂಧನೂರು ಜಿಲ್ಲಾ ಕೇಂದ್ರವಾಗಲು ಯೋಗ್ಯವಾಗಿದೆ. 1996ರಲ್ಲಿ ರಚನೆಯಾದ ಗದ್ದಿಗೌಡರ್ ಸಮಿತಿಯಲ್ಲಿ ಜಿಲ್ಲಾ ಕೇಂದ್ರವಾಗಲು ಇರಬೇಕಾದ ಅರ್ಹತೆಗಳು, ಜಿಲ್ಲಾಧಿಕಾರಿಗಳ ಕಾರ್ಯನಿರ್ವಹಣೆಯ ಮಾನದಂಡ ಹಾಗೂ ಕ್ಷೇತ್ರದ ಕೊನೆಯ ಹಳ್ಳಿಗಳಿಗೆ ಪ್ರಯಾಣದ ಮೂಲಕ ತಲುಪುವ ಅಂತರ ಹೀಗೆ ಹಲವು ವಿಶೇಷ ಅಂಶಗಳನ್ನು ಪರಿಗಣಿಸಲಾಗಿದೆ.

‘ರಾಯಚೂರಿನಿಂದ ಜಿಲ್ಲಾಧಿಕಾರಿಯವರು ಮುಕ್ಕುಂದಾ ಗ್ರಾಮಕ್ಕೆ ತಲುಪಬೇಕಾದರೆ 140 ಕಿ.ಮೀ ಕ್ರಮಿಸಬೇಕಾಗುತ್ತದೆ. ಅಲ್ಲದೆ, ಮಸ್ಕಿ ಪಟ್ಟಣವೂ 140 ಕಿ.ಮೀ ಅಂತರದಲ್ಲಿದೆ. ಜಿಲ್ಲಾಧಿಕಾರಿ ತಮ್ಮ 100 ತಾಸಿನ ಕಾರ್ಯನಿರ್ವಹಣೆಯ ಅವಧಿಯಲ್ಲಿ ಶೇ 50ರಷ್ಟು ಪ್ರಯಾಣಕ್ಕೆ ಬಳಸಿದರೆ ಅಭಿವೃದ್ಧಿ ಹೇಗೆ ಸಾಧ್ಯ? ಹಾಗಾಗಿ ಸಿಂಧನೂರು ಜಿಲ್ಲಾ ಕೇಂದ್ರವಾಗಲು ಸೂಕ್ತ’ ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಹೇಳುತ್ತಾರೆ

ಮಿನಿ ವಿಧಾನಸೌಧ

ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯ ಪ್ರಚಾರ, ಚರ್ಚೆ ಪಕ್ಷಾತೀತವಾಗಿ ಒಗ್ಗೂಡಿ ಹೋರಾಟ ಸಮಿತಿ ರಚಿಸಲಿ ಮುಖ್ಯಮಂತ್ರಿ ಬಳಿ ನಿಯೋಗ ತೆಗೆದುಕೊಂಡು ಹೋಗಲು ನಿರ್ಧಾರ

ಸಿಂಧನೂರು ಜಿಲ್ಲಾ ಕೇಂದ್ರಕ್ಕೆ ಸೇರ್ಪಡೆ ಆಗಬಹುದಾದ ತಾಲ್ಲೂಕುಗಳ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆದಿದೆ
ಹಂಪನಗೌಡ ಬಾದರ್ಲಿ ಶಾಸಕ
ಸರ್ಕಾರದ ಮಟ್ಟದಲ್ಲಿ ಸಿಂಧನೂರು ಜಿಲ್ಲಾ ಕೇಂದ್ರದ ಅಗತ್ಯತೆಯ ಕುರಿತು ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಮತ್ತು ಮೇಲಧಿಕಾರಿಗಳ ಗಮನ ಸೆಳೆಯಲಾಗಿದೆ
ಬಸನಗೌಡ ಬಾದರ್ಲಿ ವಿಧಾನ ಪರಿಷತ್ ಸದಸ್ಯ
ಶಾಸಕರು ಮಾಜಿ ಶಾಸಕರು ಮಾಜಿ ಸಂಸದರು ಮತ್ತು ಸಂಘ-ಸಂಸ್ಥೆಗಳ ಒಗ್ಗಟ್ಟಿನಿಂದ ಮಾತ್ರ ಸಿಂಧನೂರು ಜಿಲ್ಲಾ ಹೋರಾಟ ಮಹತ್ವ ಪಡೆಯಲು ಸಾಧ್ಯ
ಬಿ.ಲಿಂಗಪ್ಪ ಕಾರ್ಮಿಕ ಮುಖಂಡ
ಎಲ್ಲ ಜನಪ್ರತಿನಿಧಿಗಳು ರಾಜಕೀಯ ಮುಖಂಡರು ಮತ್ತು ಸಂಘ-ಸಂಸ್ಥೆಗಳ ಮುಖಂಡರನ್ನು ಒಗ್ಗೂಡಿಸಿ ಜಿಲ್ಲಾ ಹೋರಾಟ ಕಟ್ಟುವ ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ
ವೈ.ನರೇಂದ್ರನಾಥ ಅಧ್ಯಕ್ಷ ಖಾಸಗಿ ಶಾಲಾ-ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟ

‘ಪಕ್ಷಾತೀತ ಹೋರಾಟ ಅಗತ್ಯ’

ಸಿಂಧನೂರು ಜಿಲ್ಲಾ ರಚನೆ ಕುರಿತಂತೆ ಪಕ್ಷಾತೀತ ಜಾತ್ಯತೀತ ಧರ್ಮಾತೀತ ಹಾಗೂ ಲಿಂಗಾತೀತ ಹೋರಾಟ ನಡೆಯಬೇಕಿದೆ. ಈ ನಿಟ್ಟಿನಲ್ಲಿ ರಾಜಕೀಯ ಇಚ್ಛಾಸಕ್ತಿ ಪ್ರಮುಖವಾಗಿದೆ. ಶಾಸಕರು ವಿಧಾನ ಪರಿಷತ್ ಸದಸ್ಯರು ಮಾಜಿ ಸಚಿವರು ಮಾಜಿ ಸಂಸದರು ಸೇರಿದಂತೆ ಎಲ್ಲರೂ ಒಗ್ಗೂಡಿ ಸಿಂಧನೂರು ಜಿಲ್ಲಾ ರಚನೆಗೆ ಒಕ್ಕೊರಲಿನಿಂದ ಸರ್ಕಾರದ ಗಮನ ಸೆಳೆಯಬೇಕೆನ್ನುವುದು ಕನ್ನಡಪರ ಜನಪರ ಸಂಘಟನೆಗಳು ಹಾಗೂ ಜಿಲ್ಲಾ ಹೋರಾಟ ಸಮಿತಿಯ ಪ್ರಮುಖರ ಮನವಿಯಾಗಿದೆ.

ರಾಜಕಾರಣಿಗಳ ಭಿನ್ನ ನಡೆ

ಶಾಸಕ ಹಂಪನಗೌಡ ಬಾದರ್ಲಿ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರು ಪ್ರತ್ಯೇಕ ಸಭೆಗಳನ್ನು ನಡೆಸುತ್ತಿರುವುದು ಮತ್ತು ಇತ್ತೀಚೆಗೆ ನಗರದ ಸರ್ಕಿಟ್‌ ಹೌಸ್‍ನಲ್ಲಿ ನಡೆದ ಸಭೆಯಿಂದ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅಸಮಾಧಾನದಿಂದ ಹೊರ ನಡೆದಿದ್ದು ಮತ್ತು ಮಾಜಿ ಸಚಿವ ವೆಂಕಟರಾವ್ ನಾಡಗೌಡ ಅವರು ಜಿಲ್ಲಾ ಹೋರಾಟ ಸಮಿತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದಿರುವುದು ಹೀಗೆ ಭಿನ್ನ ನಡೆಗಳು ವ್ಯಾಪಕ ಚರ್ಚೆಗೆ ಕಾರಣವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.