ADVERTISEMENT

ಡ್ರಗ್ಸ್, ಗಾಂಜಾ ಮಾರಾಟ, ಸೇವನೆ ನಿಯಂತ್ರಿಸಿ: ಸಭೆಯಲ್ಲಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 6:43 IST
Last Updated 19 ಡಿಸೆಂಬರ್ 2025, 6:43 IST
ಸಿಂಧನೂರಿನ ಹಳೆಬಜಾರ್‍ನ ಮಸ್ಜೀದ್ ಏ ಹುದಾ ಸಭಾಂಗಣದಲ್ಲಿ ಬುಧವಾರ ಸಂಜೆ ವಿವಿಧ ಜನಪರ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರ ಸಭೆ ನಡೆಯಿತು
ಸಿಂಧನೂರಿನ ಹಳೆಬಜಾರ್‍ನ ಮಸ್ಜೀದ್ ಏ ಹುದಾ ಸಭಾಂಗಣದಲ್ಲಿ ಬುಧವಾರ ಸಂಜೆ ವಿವಿಧ ಜನಪರ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರ ಸಭೆ ನಡೆಯಿತು   

ಸಿಂಧನೂರು: ‘ನಗರ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಶಂಕಿತ ಡ್ರಗ್ಸ್, ಗಾಂಜಾ ಮಾರಾಟ ಮತ್ತು ಸೇವಿಸುವವರ ಹಾವಳಿ ಹೆಚ್ಚಿದೆ. ಇಂತಹವರನ್ನು ಪತ್ತೆ ಹಚ್ಚಿ, ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು’ ಎಂದು ವಿವಿಧ ಪ್ರಗತಿಪರ ಮತ್ತು ಜನಸೇವಾ ಸಂಘಟನೆಗಳ ಮುಖಂಡರು ನಗರದ ಹಳೆಬಜಾರ್‌ನ ಮಸೀದಿ ಏ ಹುದಾ ಸಭಾಂಗಣದಲ್ಲಿ ಬುಧವಾರ ಸಂಜೆ ನಡೆದ ಸಭೆಯಲ್ಲಿ ಒಕ್ಕೊರಲಿನಿಂದ ಒತ್ತಾಯಿಸಿದರು.

ನಗರದ ಮಹೆಬೂಬಿಯಾ ಕಾಲೊನಿ, ಶರಣಬಸವೇಶ್ವರ ಕಾಲೊನಿ, ಇಂದಿರಾನಗರ, ಪ್ರಶಾಂತನಗರ ಹಾಗೂ ಕೆಲ ಪುನರ್ವಸತಿ ಕ್ಯಾಂಪ್‍ಗಳಲ್ಲಿ ಗಾಂಜಾ ಮಾರಾಟ ನಡೆಯುತ್ತಿದೆ. ಚಾಕೂಲೇಟ್‍ನಲ್ಲಿ ಮಾದಕ ವಸ್ತು ಸೇರಿಸಿ ಮಾರಾಟ, ಡ್ರಗ್ಸ್ ಒಳಗೊಂಡ ಇಂಜೆಕ್ಷನ್ ಮಾರಾಟ ಮಾಡಲಾಗುತ್ತಿದೆ ಎಂದು ಕೆಲ ನಾಗರಿಕರು ಮೇಲಿಂದ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೂ ಪೊಲೀಸ್ ಇಲಾಖೆಯವರು ಕ್ರಮಕ್ಕೆ ಮುಂದಾಗುತ್ತಿಲ್ಲ ಏಕೆ ಎಂದು ಸಂಘಟಕರು ಪ್ರಶ್ನಿಸಿದ್ದಾರೆ.

ಕೆಡಿಪಿ ಜಿಲ್ಲಾ ಸದಸ್ಯ ಶಫಿವುಲ್ಲಾಖಾನ್ ಅವರು, ಶಂಕಿತ ಡ್ರಗ್ಸ್ ಮಾರಾಟದ ವ್ಯಕ್ತಿ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ. ಆದರೆ ಮಾಹಿತಿಯು ಸೋರಿಕೆ ಆಗಿದ್ದರಿಂದ ಶಂಕಿತ ಡ್ರಗ್ಸ್ ಮಾರಾಟ ಜಾಲದಲ್ಲಿದ್ದಾನೆಂದು ಹೇಳಲಾಗುವ ಯುವಕ ಡಿ. 15ರಂದು ಮಧ್ಯರಾತ್ರಿ ಕೆಡಿಪಿ ಸದಸ್ಯನ ಮನೆ ಮೇಲೆ ದಾಳಿ ಮಾಡಿ, ಚಾಕುವಿನಿಂದ ಇರಿಯಲು ಯತ್ನಿಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ದಲಿತ ಮುಖಂಡರು ಸಭೆಯಲ್ಲಿ ಪ್ರಸ್ತಾಪಿಸಿದರು.

ADVERTISEMENT

‘ಬೆಳಗಾವಿ ಅಧಿವೇಶನದ ಹಿನ್ನೆಲೆಯಲ್ಲಿ ಶಾಸಕರು ಅಲಭ್ಯರಾಗಿದ್ದು, ಅಧಿವೇಶನ ಮುಗಿದ ತಕ್ಷಣ ಈ ಕುರಿತು ಒಕ್ಕೂಟ, ವಿವಿಧ ಜನಪರ ಸಂಘಟನೆಗಳು, ಸಂಘ-ಸಂಸ್ಥೆಗಳು ಹಾಗೂ ಸಾಮಾಜಿಕ ಕಾರ್ಯಕರ್ತರನ್ನು ಒಳಗೊಂಡಂತೆ ನಿಯೋಗ ತೆರಳಿ ವಿಸ್ತೃತವಾಗಿ ಚರ್ಚಿಸಿ, ಕಟ್ಟುನಿಟ್ಟಿನ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಮನವಿ ಮಾಡಬೇಕು ಎಂದು ಮುಖಂಡರಿಂದ ಅಭಿಪ್ರಾಯ ವ್ಯಕ್ತವಾಯಿತು. 

ಅಪರಾಧಿಕ ಚಟುವಟಿಕೆಗಳು ಮೇಲಿಂದ ಮೇಲೆ ಕೆಲವೊಂದು ನಗರ ಹಾಗೂ ತಾಲ್ಲೂಕು ವ್ಯಾಪ್ತಿಯಲ್ಲಿ ಘಟಿಸಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಬಗ್ಗೆ ಆರೋಪ ಸಭೆಯಲ್ಲಿ ವ್ಯಕ್ತವಾಯಿತು. ಈ ಕುರಿತು ಗೃಹ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಬಳ್ಳಾರಿ ವಲಯದ ಐಜಿಪಿಯವರ ಗಮನ ಸೆಳೆಯುವುದು, ಇಲ್ಲವೇ ನಿಯೋಗ ತೆರಳಿ ಮನವಿ ಸಲ್ಲಿಸಬೇಕು ಎಂದು ಚರ್ಚಿಸಲಾಯಿತು.

ಮುಖಂಡರಾದ ಬಾಬರ್‍ಪಾಷಾ ಜಾಗೀರದಾರ, ಟಿ.ಹುಸೇನಸಾಬ, ಕೆ.ಜಿಲಾನಿಪಾಷಾ, ಪಿ.ರುದ್ರಪ್ಪ, ಕರೇಗೌಡ ಕುರುಕುಂದಿ, ಚಂದ್ರಶೇಖರ ಗೊರಬಾಳ, ಎಸ್.ದೇವೇಂದ್ರಗೌಡ, ಬಸವಂತರಾಯಗೌಡ ಕಲ್ಲೂರು, ಶಂಕರ ಗುರಿಕಾರ, ಬಸವರಾಜ ಬಾದರ್ಲಿ, ಚಿಟ್ಟಿಬಾಬು, ಸಿರಾಜ್‍ಪಾಷಾ, ಡಾ.ವಸೀಮ್ ಉಪಸ್ಥಿತರಿದ್ದರು.

ಮೂರು ತಿಂಗಳ ಹಿಂದೆ ಡ್ರಗ್ಸ್ ಮಾರಾಟ ಮತ್ತು ಸೇವನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದೆ. ಈ ವಿಷಯವನ್ನು ಡ್ರಗ್ಸ್ ಮಾರಾಟಕ್ಕೆ ಸಂಬಂಧಿಸಿದ ವ್ಯಕ್ತಿಗೆ ಸೋರಿಕೆ ಮಾಡಿದ ಸಂಗತಿಯನ್ನು ಅಪರಾಧ ಮಾಸಾಚರಣೆ ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಇದರಿಂದ ಆ ವ್ಯಕ್ತಿ ನನ್ನ ಮನೆಗೆ ಬಂದು ಕೊಲೆಗೆ ಯತ್ನಿಸಿದ್ದಾನೆ
ಶಫಿವುಲ್ಲಾಖಾನ್ ಜಿಲ್ಲಾ ಸದಸ್ಯ ಕೆಡಿಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.