
ಸಿಂಧನೂರು: ವಿದ್ಯಾರ್ಥಿಗಳು ಮೊಬೈಲ್‍ನಲ್ಲಿ ಕಾಲಹರಣ ಮಾಡುವುದನ್ನು ಬಿಟ್ಟು ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎಫ್.ಮಸ್ಕಿ ಹೇಳಿದರು.
ನಗರದ ಪಿಡಬ್ಲ್ಯೂಡಿ ಕ್ಯಾಂಪಿನ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಮತ್ತು ತಾಲ್ಲೂಕು ಘಟಕದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ದಿ.ಆನಂದ ಹೆಗಡೆ ಮತ್ತು ದಿ.ಬಸಪ್ಪ ನಾಗಪ್ಪ ತುಕ್ಕಾಯಿ ಅವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ಉನ್ನತ ಮಟ್ಟದ ಕನಸುಗಳನ್ನು ಕಾಣಬೇಕು. ಅದಕ್ಕಾಗಿ ಛಲ ಮತ್ತು ಕಠಿಣ ಪರಿಶ್ರಮ ಪಡಬೇಕು’ ಎಂದರು.
ಪ್ರಾಂಶುಪಾಲ ಶೇಖರಯ್ಯ ಮಾತನಾಡಿ, ಶರಣ ಸಾಹಿತ್ಯದಲ್ಲಿ ದಾಸರು, ಸಂತರು, ವಚನಕಾರರು ಕನ್ನಡ ಸಾಹಿತ್ಯ ರಚನೆಯಲ್ಲಿ ಅತ್ಯಮೂಲ್ಯವಾದ ಸಾಮಾಜಿಕ ಮತ್ತು ಮಾನವೀಯ ಮೌಲ್ಯಗಳನ್ನು ಸಾರುವ ಸಂದೇಶಗಳನ್ನು ನೀಡಿದ್ದಾರೆ. ಅವುಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಶರಣ ಸಾಹಿತ್ಯ ವಿಷಯ ಕುರಿತು ಉಪನ್ಯಾಸ ನೀಡಿದ ಉಪನ್ಯಾಸಕ ಶರಣಪ್ಪ ಹೊಸಳ್ಳಿ ಅವರು ಶರಣ ಸಾಹಿತ್ಯ ಜೀವನದ ಮೌಲ್ಯಗಳನ್ನು ಕಲಿಸಿಕೊಡುತ್ತದೆ. ಶರಣರ ವಚನಗಳು, ಚಿಂತನೆಗಳು, ಸದ್ವಿಚಾರಗಳು ಮನುಷ್ಯನ ಸಾರ್ಥಕ ಜೀವನಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು.
ಹಿರಿಯ ವಕೀಲ ನಿರುಪಾದೆಪ್ಪ ಗುಡಿಹಾಳ ಮಾತನಾಡಿದರು.
ನಗರಸಭೆ ಮಾಜಿ ಸದಸ್ಯ ಶಿವಬಸವನಗೌಡ, ಗುತ್ತಿಗೆದಾರ ಅಂಬರೀಶ್ ಮಿಟ್ಟಿಮನಿ, ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬೀರಪ್ಪ ಶಂಭೋಜಿ, ಪತ್ರಕರ್ತರ ನಾಗರಾಜ ಬೊಮ್ಮನಾಳ, ಉಪನ್ಯಾಸಕರಾದ ಹುಡಸಪ್ಪ ಹುಡುಸೂರು, ಸಿದ್ದನಗೌಡ, ಬಸವರಾಜ ಯಲಬುರ್ಗಿ ಇದ್ದರು. ಉಪನ್ಯಾಸಕ ಎಚ್.ಎಂ.ಶ್ರೀಶೈಲ ಸ್ವಾಗತಿಸಿದರು. ಶಾಂತಾ ವಳಗಿನಮನಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.