
ಸಿಂಧನೂರು: ತುಂಗಭದ್ರಾ ಎಡದಂಡೆ ನಾಲೆಗೆ ಬೇಸಿಗೆ ಬೆಳೆಗೆ ನೀರು ಹರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ನೇತೃತ್ವದ ನಿಯೋಗ ಬೆಂಗಳೂರಿನಲ್ಲಿ ಜಲ ಸಂಪನ್ಮೂಲ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಮಾಡಿತು.
ನಿಯೋಗದಲ್ಲಿ ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಅವರು ಇದ್ದರು.
‘ಪ್ರಸಕ್ತ ವರ್ಷ ಅತಿಯಾದ ಮಳೆಯಿಂದಾಗಿ ಬೆಳೆಗಳು ಹಾನಿಗೊಳಗಾದ ಕಾರಣ ರೈತರು ಸಂಕಷ್ಟದಲ್ಲಿದ್ದಾರೆ. ತುಂಗಭದ್ರಾ ಜಲಾಶಯದಲ್ಲಿ 80 ಟಿಎಂಸಿ ಅಡಿ ನೀರು ಸಂಗ್ರಹ ಇದೆ. ಜಲಾಶಯಕ್ಕೆ ಒಳ ಹರಿವೂ ಇದೆ. ಒಳಹರಿವು ಮುಂದುವರಿಯುವ ನಿರೀಕ್ಷೆಯಿದೆ’ ಎಂದು ತಿಳಿಸಿದರು.
80 ಟಿಎಂಸಿ ಅಡಿಯಲ್ಲಿ 45 ಟಿಎಂಸಿ ಅಡಿ ಕರ್ನಾಟಕದ ಪಾಲಿಗೆ ಲಭ್ಯವಾಗುತ್ತದೆ. ಡಿ.1 ರಿಂದ 2026ರ ಮಾ.31ರವರೆಗೆ ಕಾಲುವೆಗೆ ನೀರು ಹರಿಸಬಹುದು. ಅಲ್ಲದೆ, 2026ರ ಜನವರಿ ಬದಲಾಗಿ ಫೆಬ್ರುವರಿಯಿಂದ ಕ್ರಸ್ಟ್‌ಗೇಟ್ ಅಳವಡಿಕೆ ಕಾರ್ಯ ಮಾಡಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ರೈತರಿಗೆ ನೀರು ಕೊಡುವ ಜೊತೆಯಲ್ಲಿ ಕ್ಟಸ್ಟ್‌ಗೇಟ್ ಅಳವಡಿಸುವ ಕಾರ್ಯ ಮಾಡಲು ಸಾಧ್ಯವಿದೆ. ಆದ್ದರಿಂದ ಸರ್ಕಾರ ರೈತರ ಹಿತ ಕಾಯುವ ಉದ್ದೇಶದಿಂದ ಬೇಸಿಗೆ ಬೆಳೆಗೆ ನೀರು ಪೂರೈಸಬೇಕು ಎಂದು ಡಿ.ಕೆ.ಶಿವಕುಮಾರ್ ಅವರ ಗಮನ ಸೆಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.