ADVERTISEMENT

ಸಿಂಧನೂರು ನಗರ ಪ್ರಾಧಿಕಾರ: ಗುಂಡೂರು ಆಯುಕ್ತ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2025, 12:42 IST
Last Updated 13 ಫೆಬ್ರುವರಿ 2025, 12:42 IST
ಸಿಂಧನೂರು ನಗರ ಪ್ರಾಧಿಕಾರದ ಆಯುಕ್ತರಾಗಿ ನಗರಸಭೆಯ ಪೌರಾಯುಕ್ತ ಮಂಜುನಾಥ ಗುಂಡೂರು ಅವರು ಗುರುವಾರ ಪೂಜೆ ಸಲ್ಲಿಸಿ, ಸಹಿ ಹಾಕುವ ಮೂಲಕ ಅಧಿಕಾರ ಸ್ವೀಕರಿಸಿದರು
ಸಿಂಧನೂರು ನಗರ ಪ್ರಾಧಿಕಾರದ ಆಯುಕ್ತರಾಗಿ ನಗರಸಭೆಯ ಪೌರಾಯುಕ್ತ ಮಂಜುನಾಥ ಗುಂಡೂರು ಅವರು ಗುರುವಾರ ಪೂಜೆ ಸಲ್ಲಿಸಿ, ಸಹಿ ಹಾಕುವ ಮೂಲಕ ಅಧಿಕಾರ ಸ್ವೀಕರಿಸಿದರು   

ಸಿಂಧನೂರು: ಸಿಂಧನೂರು ನಗರ ಪ್ರಾಧಿಕಾರದ ಆಯುಕ್ತರಾಗಿ ನಗರಸಭೆಯ ಪೌರಾಯುಕ್ತ ಮಂಜುನಾಥ ಗುಂಡೂರು ಅವರು ಗುರುವಾರ ಅಧಿಕಾರ ಸ್ವೀಕರಿಸಿದರು.

ಈ ವೇಳೆ ಅವರನ್ನು ಸನ್ಮಾನಿಸಿ ಅಭಿನಂದಿಸಿದ ಶಾಸಕ ಹಂಪನಗೌಡ ಬಾದರ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಜನವರಿ 10, 2025 ರಂದು ಸಿಂಧನೂರು ನಗರ ಯೋಜನಾ ಪ್ರಾಧಿಕಾರವನ್ನು ನಗರ ಪ್ರಾಧಿಕಾರವನ್ನಾಗಿ ಮೇಲ್ದರ್ಜೇಗೇರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಫೆ.23 ರಂದು ತುರ್ವಿಹಾಳ ಪಟ್ಟಣಕ್ಕೆ ಬರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರಾಭಿವೃದ್ಧಿ ಇಲಾಖೆ ಸಚಿವ ಬೈರತಿ ಸುರೇಶ ಅವರನ್ನು ಸಿಂಧನೂರಿಗೆ ಆಹ್ವಾನಿಸಿ ಸುಡಾ ಕಚೇರಿ ಉದ್ಘಾಟಿಸಲಾಗುವುದು’ ಎಂದು ತಿಳಿಸಿದರು.

ಅಧ್ಯಕ್ಷರು ಸೇರಿ ಒಟ್ಟು 14 ಜನ ಸದಸ್ಯರನ್ನು ನಗರ ಪ್ರಾಧಿಕಾರ ಹೊಂದಿರುತ್ತದೆ. ಸದ್ಯ ತಾತ್ಕಾಲಿಕವಾಗಿ ಜಿಲ್ಲಾಧಿಕಾರಿಅಧ್ಯಕ್ಷರಾಗಿರುತ್ತಾರೆ. ಕೆಲವೇ ದಿನಗಳಲ್ಲಿ ಆಡಳಿತ ಮಂಡಳಿ ನೇಮಕಕ್ಕೆ ಸರ್ಕಾರ ಅಧಿಕೃತ ಆದೇಶ ಹೊರಡಿಸಲಿದೆ. ಸದ್ಯ ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಅವರನ್ನೇ ತಾತ್ಕಾಲಿಕವಾಗಿ ಪ್ರಾಧಿಕಾರದ ಆಯುಕ್ತರನ್ನಾಗಿ ನೇಮಿಸಿ ಅಧಿಕಾರ ನೀಡಲಾಗಿದೆ ಎಂದರು.

ADVERTISEMENT

ಸಿಂಧನೂರು ನಗರ ಸೇರಿ ಒಟ್ಟು 22 ಹಳ್ಳಿಗಳು ನಗರ ಪ್ರಾಧಿಕಾರ ವ್ಯಾಪ್ತಿಗೆ ಒಳಪಡುತ್ತವೆ. ಇದರಲ್ಲಿ 7 ಸರ್ಕಾರಿ ಹುದ್ದೆ, 2 ಗುತ್ತಿಗೆ ಆಧರಿತ ಹುದ್ದೆ ಇರುತ್ತವೆ. ಮೂಸೌಕರ್ಯ, ಖಾಸಗಿ ಬಡಾವಣೆಗಳ ಅಭಿವೃದ್ಧಿಗೆ ಅನುಮತಿ, ಜಮೀನು ಖರೀದಿಸಿ ಹೊಸ ಬಡಾವಣೆ ನಿರ್ಮಿಸಿ ಕಡಿಮೆ ಬೆಲೆಯಲ್ಲಿ ಬಡವರಿಗೆ ನಿವೇಶನ ಕಲ್ಪಿಸುವುದು ಪ್ರಾಧಿಕಾರದ ಕರ್ತವ್ಯವಾಗಿದೆ ಎಂದು ಹೇಳಿದರು.
ನಗರ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಹಳ್ಳಿಗಳನ್ನು ಪಂಚಾಯಿತಿಯಿಂದ ಬೇರ್ಪಡಿಸಿ ಪ್ರಾಧಿಕಾರಕ್ಕೆ ಒಪ್ಪಿಸಿ ಜಿಲ್ಲಾಧಿಕಾರಿಗಳು ಹಾಗೂ ಆರ್‌ಡಿಪಿಆರ್ ಇಲಾಖೆ ಆದೇಶ ಹೊರಡಿಸಬೇಕಿದೆ. ಈ ಬಗ್ಗೆ ತಕ್ಷಣವೇ ಆರ್‌ಡಿಪಿಆರ್ ಅಧೀನ ಕಾರ್ಯದರ್ಶಿಗೆ ಪತ್ರ ಬರೆಯಬೇಕು ಎಂದು ತಿಳಿಸಿದರು.

ಫೆ.19 ರಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಎಚ್.ಸಿ.ಮಹಾದೇವಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ಸಿಂಧನೂರಿಗೆ ಆಗಮಿಸಲಿದ್ದು, ಜಾಲಿಹಾಳ ಹಾಗೂ ಗೊರೇಬಾಳ ಗ್ರಾಮದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ನಿರ್ಮಾಣ ಮತ್ತು ಸಿಎಸ್‍ಎಫ್ ಕ್ಯಾಂಪ್ ಬಳಿ ಕಿತ್ತೂರುರಾಣಿ ವಸತಿ ಶಾಲೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಹಾಗೂ ಪ್ರಾಧಿಕಾರ, ನಗರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.