ADVERTISEMENT

ರೇಷ್ಮೆ ಕೃಷಿಗೆ ಉದ್ಯೋಗ ಖಾತ್ರಿ ವರದಾನ

ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ಲಿಂಗಸುಗೂರು ಉತ್ತಮ ಕ್ಲಸ್ಟರ್‌

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 29 ಏಪ್ರಿಲ್ 2019, 11:05 IST
Last Updated 29 ಏಪ್ರಿಲ್ 2019, 11:05 IST
ಲಿಂಗಸುಗೂರು ತಾಲ್ಲೂಕು ಭೂಪುರತಾಂಡಾದಲ್ಲಿ ತೇಜಪ್ಪ ಚವ್ಹಾಣ ಜಮೀನಿಗೆ ಭೇಟಿ ನೀಡಿದ್ದ ಅಧಿಕಾರಿಗಳು ರೈತರೊಂದಿಗೆ ಸಂವಾದ ನಡೆಸಿದರು
ಲಿಂಗಸುಗೂರು ತಾಲ್ಲೂಕು ಭೂಪುರತಾಂಡಾದಲ್ಲಿ ತೇಜಪ್ಪ ಚವ್ಹಾಣ ಜಮೀನಿಗೆ ಭೇಟಿ ನೀಡಿದ್ದ ಅಧಿಕಾರಿಗಳು ರೈತರೊಂದಿಗೆ ಸಂವಾದ ನಡೆಸಿದರು   

ಲಿಂಗಸುಗೂರು: ಹಲವು ವರ್ಷಗಳಿಂದ ಶೇ 75ರಷ್ಟು ದ್ವಿತಳಿ(ಬಿಳಿ), ಶೇ 25ರಷ್ಟು ಮಿಶ್ರತಳಿ (ಹಳದಿ) ರೇಷ್ಮೆ ಗೂಡು ಉತ್ಪಾದಿಸಲಾಗುತ್ತಿತ್ತು. ಆದರೆ ಈಚೆಗೆ ಶೇ 100ರಷ್ಟು ದ್ವಿತಳಿ(ಬಿಳಿ) ರೇಷ್ಮೆಗೂಡು ಉತ್ಪಾದನೆ ಮೂಲಕ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಾಲ್ಲೂಕಿನ ರೈತರು ಗುರುತಿಸಿಕೊಂಡಿದ್ದು ವಿಶೇಷ.

ಕೃಷಿ ವಿಶ್ವ ವಿದ್ಯಾಲಯ ತಜ್ಞರು ಕೃಷಿಜ್ಞಾನ ಪ್ರದೀಪಿಕೆ ಮೂಲಕ ಕೃಷಿಕರಿಗೆ ಜಾಗೃತಿ ಮೂಡಿಸಿದ್ದು, ನೈಸರ್ಗಿಕ ಆಗು ಹೋಗುಗಳನ್ನು ಸವಾಲಾಗಿ ಸ್ವೀಕರಿಸಿದ್ದಾರೆ. ಸತತ ಬರಗಾಲ, ಅಂತರ್ಜಲಮಟ್ಟ ಕುಸಿತದ ಮಧ್ಯೆ ರೇಷ್ಮೆ ಕೃಷಿ ಚಟುವಟಿಕೆ ಹೆಚ್ಚಿಸುವಲ್ಲಿ ರೇಷ್ಮೆ ಇಲಾಖೆ ಅಧಿಕಾರಿಗಳ ಕಠಿಣ ಪರಿಶ್ರಮವಿದೆ.

ಜಿಲ್ಲೆಯಲ್ಲಿ 743 ರೈತರು 1743 ಹೆಕ್ಟೇರ್‌ ಪ್ರದೇಶದಲ್ಲಿ ಹಿಪ್ಪುನೇರಳೆ ನಾಟಿ ಮಾಡಿದ್ದಾರೆ. ಈ ಪೈಕಿ ತಾಲ್ಲೂಕಿನಲ್ಲಿ 417 ರೈತರು 938 ಹೆಕ್ಟೇರ್‌ ಪ್ರದೇಶದಲ್ಲಿ ಹಿಪ್ಪುನೇರಳೆ ನಾಟಿ ಮಾಡಿದ್ದಾರೆ. ರೇಷ್ಮೆ ಕೃಷಿಕರಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ವರದಾನವಾಗಿದ್ದು, ಹಿಪ್ಪುನೇರಳೆ ಬೆಳೆಗೆ ಉತ್ತೇಜನ ನೀಡಿದಂತಾಗಿದೆ ಎಂಬುದು ಅಧಿಕಾರಿಗಳ ಅನಿಸಿಕೆ.

ADVERTISEMENT

ರೇಷ್ಮೆ ಕೃಷಿ ಎಂದಾಕ್ಷಣ ರಾಯಚೂರು ಜಿಲ್ಲೆ ಅದರಲ್ಲೂ ಮಟ್ಟೂರು ಗ್ರಾಮದ ಹೆಸರು ಹೇಳುತ್ತಿದ್ದರು. ಆದರೆ, ಈಚೆಗೆ ಲಿಂಗಸುಗೂರು, ಮಟ್ಟೂರು, ಮಸ್ಕಿ, ವೀರಾಪುರ, ಮುದಗಲ್ಲ, ಗುಂಡಸಾಗರ ವಲಯಗಳಲ್ಲಿ ಹೆಚ್ಚಿನ ಪ್ರಮಾಣದ ರೈತರು ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ವರ್ಷ ಗುರಿ ಮೀರಿದ ಸಾಧನೆ ತೋರಿಸುತ್ತಿರುವ ಲಿಂಗಸುಗೂರು ಹೈದರಬಾದ್‌ ಕರ್ನಾಟಕದಲ್ಲಿ ಉತ್ತಮ ಕ್ಲಸ್ಟರ್‌ ಎಂಬ ಗರಿ ಹೊಂದಿದೆ.

ಸರ್ಕಾರ ಕೂಡ ರೇಷ್ಮೆ ಹುಳು ಸಾಕಾಣಿಕೆ ಮನೆ ಮತ್ತು ಶೆಡ್‌ ನಿರ್ಮಾಣ, ಹಿಪ್ಪುನೇರಳೆ ಸಸಿಗಳ ಅಭಿವೃದ್ಧಿ, ಸಲಕರಣೆಗಳ ಖರೀದಿ, ಹನಿ ನೀರಾವರಿ ಅಳವಡಿಕೆ, ಹಿಪ್ಪುನೇರಳೆ ನಾಟಿ, ದ್ವಿತಳಿ ಬೆಳೆಗಾರರಿಗೆ ಪ್ರೋತ್ಸಾಹಧನ, ದ್ವಿತಳಿ ಚಾಕಾಣಿಕೆಗೆ ಪ್ರತ್ಯೇಕ ಪ್ರೋತ್ಸಾಹ ಸೇರಿದಂತೆ ರೇಷ್ಮೆ ಕೃಷಿ ಅಭಿವೃದ್ಧಿಗೆ ರಾಜ್ಯ, ಕೇಂದ್ರ ಯೋಜನೆಗಳಡಿ ಲಕ್ಷಾಂತರ ಸಹಾಯಧನ ಮತ್ತು ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸಹಕಾರದಲ್ಲಿ ಕೂಡ ಸೋಂಕು ನಿವಾರಕ, ಸಲಹಾ ಸೇವೆ, ಅಲ್ಪಾವಧಿ ತರಬೇತಿ, ನಿರ್ವಹಣೆಗೆ ಹಣಕಾಸಿನ ನೆರವು ಸಿಗುತ್ತಿದೆ. ಪ್ರಸಕ್ತ ವರ್ಷ 48 ಹೆಕ್ಟೇರ್‌ ಗುರಿ ಇದ್ದು, 72.80 ಹೆಕ್ಟೇರ್‌ ಹಿಪ್ಪುನೇರಳೆ ಹಾಕಲಾಗಿದೆ. 188.5 ಮೆಟ್ರಿಕ್‌ಟನ್‌ ಗೂಡು ಉತ್ಪಾದನೆ ಗುರಿ ಇತ್ತು. 190.255 ಮೆಟ್ರಿಕ್‌ ಟನ್‌ ಉತ್ಪಾದನೆ ಮಾಡಿ ಸಾಧನೆ ತೋರಿದ್ದಾರೆ.

‘ಸತತ ಬರಗಾಲ, ಅಂತರ್ಜಲಮಟ್ಟ ಕುಸಿತದ ಮಧ್ಯೆ ರೇಷ್ಮೆ ಕೃಷಿಗೆ ರೈತರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಆದರೆ, ಸರ್ಕಾರ ಸಾಕಾಣಿಕೆ ಮನೆ, ಸಲಕರಣೆಗಳ ಖರೀದಿಗೆ ಹಳೆಯಕಾಳದ ದರವನ್ನೆ ನೀಡುತ್ತಿದೆ. ರೈತರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ರೈತರಿಗೆ ಮಾದರಿ ಆಗಬೇಕಿದ್ದ ಕನ್ನಾಪುರಹಟ್ಟಿ ಮತ್ತು ಕೆಸರಹಟ್ಟಿ ಫಾರ್ಮ್‌ ಅಭಿವೃದ್ಧಿ ಪಡಿಸಲು ಸರ್ಕಾರ ಮುಂದಾಗಬೇಕು’ ಎಂದು ರಾಜ್ಯ ರೈತ ಸಂಘದ ಹಿರಿಯ ಮುಖಂಡ ಅಮರಣ್ಣ ಗುಡಿಹಾಳ ಆಗ್ರಹಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.