ADVERTISEMENT

‘ಸರ್ವರ ಸಮಾನತೆಗಾಗಿ ಹಕ್ಕುಪತ್ರ’

ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯ ದಶಮಾನೋತ್ಸವ: ಸ್ಲಂ ಜನರ ಹಬ್ಬ

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 2:23 IST
Last Updated 31 ಜನವರಿ 2021, 2:23 IST
ರಾಯಚೂರಿನಲ್ಲಿ ಶನಿವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಸ್ಲಂ ಜನರ ಹಬ್ಬ ಹಾಗೂ ಕೊಳಗೇರಿ ನಿವಾಸಿಗಳ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರು
ರಾಯಚೂರಿನಲ್ಲಿ ಶನಿವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಸ್ಲಂ ಜನರ ಹಬ್ಬ ಹಾಗೂ ಕೊಳಗೇರಿ ನಿವಾಸಿಗಳ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರು   

ರಾಯಚೂರು: ‘ಕೇವಲ ತಾಂತ್ರಿಕವಾಗಿ ಮುಂದುವರಿದರೆ ಸಾಲದು. ಕೊಳೆಗೇರಿ ನಿವಾಸಿಗಳಿಗೆ ಸಮರ್ಪಕ ಸೌಕರ್ಯ ದೊರಕಿ ಅವರು ಅಭಿವೃದ್ಧಿಯಾದರೆ ಮಾತ್ರ ದೇಶ ಅಭಿವೃದ್ಧಿ ಆದಂತೆ’ ಎಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ ಅಭಿಪ್ರಾಯಪಟ್ಟರು.

ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯ ದಶಮಾನೋತ್ಸವದ ಅಂಗವಾಗಿ ನಗರದ ಪಂಡಿತ್‌ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶನಿವಾರ ನಡೆದ ಮೂರನೇ ರಾಜ್ಯಮಟ್ಟದ ಸ್ಲಂ ಜನರ ಹಬ್ಬ ಹಾಗೂ ಕೊಳಗೇರಿ ನಿವಾಸಿಗಳ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ರಾಜ್ಯದಲ್ಲಿ ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರ ನೀಡುವ ಕಾರ್ಯ ಐತಿಹಾಸಿಕವಾದದ್ದು, ಬಾಬಾಸಾಹೇಬ್ ಅಂಬೇಡ್ಕರ್‌ ಅವರು ದೇಶವನ್ನು ಮುನ್ನಡೆಸುವ ಸವಾಲನ್ನು ತಮ್ಮ ಹೆಗಲಿಗೆ ವಹಿಸಿಕೊಂಡು ಸಂವಿಧಾನ ರಚನೆ ಮಾಡಿದ್ದಾರೆ. ಅವರ ಆಶಯದಂತೆ ಎಲ್ಲರಿಗೂ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಬಿಜೆಪಿಯ ರಾಜ್ಯ ಹಾಗೂ ಕೇಂದ್ರ ಸರ್ಕಾರ ಪಣ ತೊಟ್ಟು ಕೆಲಸ ಮಾಡುತ್ತಿದೆ’
ಎಂದರು.

ADVERTISEMENT

‘ಘೋಷಿತ ಕೊಳಚೆ ಪ್ರದೇಶಗಳಿಗೆ ಮೂಲಸೌಕರ್ಯ ಕಲ್ಪಿಸುವುದು ನಿಜವಾದ ಅಭಿವೃದ್ಧಿ. ಜಿಲ್ಲೆಯಲ್ಲಿ 21 ವರ್ಷಗಳಿಂದ ಕೊಳೆಗೇರಿ ಬಡಾವಣೆಗಳ ನಿವಾಸಿಗಳಿಗೆ ಹಕ್ಕು ಪತ್ರ ನೀಡಬೇಕು ಎಂದು ಒತ್ತಾಯಿಸಲಾಗುತ್ತಿತ್ತು. ಆ ಬೇಡಿಕೆಯನ್ನು ಬಿಜೆಪಿ ಸರ್ಕಾರ ಈಡೇರಿಸಿದೆ. ಜಿಲ್ಲೆಯ ಒಟ್ಟು 97137 ಮನೆಗಳಿಗಾಗಿ ಕ್ಯಾಬಿನೆಟ್‌ನಲ್ಲಿ ಬಿಲ್ ಪಾಸ್ ಮಾಡಿ ತರಲು ಮುಂದಾಗಿದ್ದೇವೆ. ಕೋವಿಡ್ ಹಿನ್ನೆಲೆಯಲ್ಲಿ ಹಕ್ಕುಪತ್ರ ವಿತರಣೆ ಕಾರ್ಯ ವಿಳಂಬವಾಗಿದೆ. ಕೊಳೆಗೇರಿಗಳ ಅಭಿವೃದ್ಧಿಗೆ ಬದ್ಧವಾಗಿದ್ದು ಸಂಘಟನೆಯ ಹಕ್ಕೊತ್ತಾಯವನ್ನು ಸರ್ಕಾರದ ಗಮನಕ್ಕೆ ತಂದು ಈಡೇರಿಸುವುದಾಗಿ’ ಭರವಸೆ ನೀಡಿದರು.

ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಮಾತನಾಡಿ,‘ಒಂದು ವರ್ಷದಲ್ಲಿ 12 ಕೊಳೆಗೇರಿಗಳನ್ನು ಘೋಷಿಸಲಾಗಿದೆ. 82 ಘೋಷಣೆಯ ಹಂತದಲ್ಲಿವೆ. 26 ಸಾವಿರ ಕುಟುಂಬದ 90 ಸಾವಿರ ಜನ ಹಕ್ಕುಪತ್ರ ಪಡೆದುಕೊಳ್ಳುತ್ತಿದ್ದಾರೆ’ ಎಂದು ತಿಳಿಸಿದರು.

‘ಕೊಳೆಗೇರಿ ನಿವಾಸಿಗಳಿಗಾಗಿ ರಾಯಚೂರು ನಗರದಲ್ಲಿ ಒಟ್ಟು 42 ಎಕರೆ ಜಮೀನು ಕಾಯ್ದಿರಿಸಲಾಗಿದೆ. 2,770 ಸುಸಜ್ಜಿತ ಮನೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಅಂಗನವಾಡಿ ಕೇಂದ್ರ, ಆಸ್ಪತ್ರೆ ಸೇರಿದಂತೆ ಎಲ್ಲಾ ಮೂಲ ಸೌಕರ್ಯ ಇರಲಿದೆ. ಇದಕ್ಕೆ ₹172 ಕೋಟಿ ವೆಚ್ಚದಲ್ಲಿ ಡಿಪಿಆರ್ ತಯಾರಿಸಲಾಗಿದೆ. ದೇವದುರ್ಗ, ಮಸ್ಕಿ ಹಾಗೂ ಸಿಂಧನೂರು ಪಟ್ಟಣದಲ್ಲಿಯೂ ಕೊಳಗೇರಿ ಜನರಿಗೆ ಮನೆ ಕಟ್ಟಿಕೊಡಲು ಯೋಜಿಸಿದೆ’ ಎಂದು ತಿಳಿಸಿದರು.

ಶಾಸಕ ಡಾ. ಶಿವರಾಜ ಪಾಟೀಲ ಮಾತನಾಡಿ, ‘ಕೊಳೆಗೇರಿ ನಿವಾಸಿಗಳಿಗೆ ಹಕ್ಕು ಪತ್ರ ನೀಡುವುದು ಹಾಗೂ ಗುಡಿಸಲು ರಹಿತ ನಗರ ನಿರ್ಮಾಣ ನನ್ನ ಆಸೆಯಾಗಿತ್ತು. ಇಂದು ಕೊಳೆಗೇರಿ ನಿವಾಸಿಗಳಿಗೆ ರಾಜ್ಯ ಸರ್ಕಾರ ಹಕ್ಕುಪತ್ರ ನೀಡಿದೆ. ಕಾಂಗ್ರೆಸ್ ಪಕ್ಷದ ಮುಖಂಡರ ಒತ್ತಾಯಕ್ಕೆ ಮಣಿದು ಹಕ್ಕು ಪತ್ರ ನೀಡಿಲ್ಲ’ ಎಂದು
ಹೇಳಿದರು.

ಕಾರ್ಯಕ್ರಮದ ಪೂರ್ವದಲ್ಲಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ರಂಗಮಂದಿರದವರೆಗೆ ಮೆರವಣಿಗೆ ನಡೆಯಿತು. ವಾದ್ಯಮೇಳಗಳೊಂದಿಗೆ ಜೋಗಿ ವೇಷಧಾರಿಗಳು ಸೇರಿದಂತೆ ಕಲಾವಿದರು ನೃತ್ಯ ಪ್ರದರ್ಶಿಸಿದರು.

ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕ ನರಸಿಂಹಮೂರ್ತಿ ಮಾತನಾಡಿದರು.

ನಗರಸಭೆ ಅಧ್ಯಕ್ಷ ಈ.ವಿನಯ ಕುಮಾರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೈ.ಗೋಪಾಲರೆಡ್ಡಿ, ಮುಖಂಡ ರವೀಂದ್ರ ಜಲ್ದಾರ್‌, ಎಂ.ಆರ್.ಭೇರಿ, ದಾನಪ್ಪ ನಿಲೋಗಲ್, ಅಂಬಣ್ಣ ಅರೋಲಿಕರ್, ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಕೆ.ನೀಲಾ, ಎನ್.ಕೆ.ನಾಗರಾಜ, ಸ್ಲಂ ಕ್ರಿಯಾ ವೇದಿಕೆಯ ಜನಾರ್ಧನ ಹಳ್ಳಿಬೆಂಚಿ, ಕರಿಯಪ್ಪ ಮಾಸ್ತರ ಹಾಗೂ ಕೆ.ಪಿ.ಅನಿಲ್ ಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.