ADVERTISEMENT

ರಾಯಚೂರು: ವಿದ್ಯುತ್ ಇಲ್ಲದಿದ್ದರೂ ಮೋಟರ್‌ನಿಂದ 50ಅಡಿ ಎತ್ತರಕ್ಕೆ ಚಿಮ್ಮಿದ ನೀರು!

ಸೋಲಾರ್‌ ಯಂತ್ರೋಪಕರಣಗಳ ಪ್ರದರ್ಶನದಲ್ಲಿ ಪ್ರಾತ್ಯಕ್ಷಿಕೆ

ಚಂದ್ರಕಾಂತ ಮಸಾನಿ
Published 4 ಡಿಸೆಂಬರ್ 2025, 5:59 IST
Last Updated 4 ಡಿಸೆಂಬರ್ 2025, 5:59 IST
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಸೋಲಾರ್‌ ಉಪಕರಣ ಪ್ರದರ್ಶದಲ್ಲಿ ಚಕ್ಕುಲಿ ತಯಾರಿಕೆ ಯಂತ್ರದ ಪ್ರಾತ್ಯಕ್ಷಿಕೆ ವೀಕ್ಷಿಸಿದ ಮಹಿಳೆಯರು
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಸೋಲಾರ್‌ ಉಪಕರಣ ಪ್ರದರ್ಶದಲ್ಲಿ ಚಕ್ಕುಲಿ ತಯಾರಿಕೆ ಯಂತ್ರದ ಪ್ರಾತ್ಯಕ್ಷಿಕೆ ವೀಕ್ಷಿಸಿದ ಮಹಿಳೆಯರು   

ರಾಯಚೂರು: ವಿದ್ಯುತ್‌ ಇಲ್ಲದಿದ್ದರೂ 20 ಅಡಿ ಆಳದಿಂದ ನೀರು ಜಗ್ಗಿ 50 ಅಡಿ ಮೇಲಕ್ಕೆ ಚಿಮ್ಮಿಸಬಲ್ಲ ಮೋಟರ್, ಕಬ್ಬು ನುರಿದು ಹಾಲು ಸುರಿಯುವ ಯಂತ್ರ, ಗಂಟೆಗೆ 500 ರೊಟ್ಟಿ, ಹಪ್ಪಳ ಮಾಡುವ ಯಂತ್ರ, ಚಕ್ಕುಲಿ ಸೇವು ಕುರುಕಲು ಆಹಾರ ಸಿದ್ಧಪಡಿಸಿಕೊಡುವ ಯಂತ್ರ..…

ಹೌದು! ಇದು ಕಂಡು ಬಂದಿದ್ದು ಇಲ್ಲಿಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಕರ್ನಾಟಕ ಗ್ರಾಮೀಣ ಜೀವನೋಪಾಯ ಅಭಿಯಾನ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ಆಶ್ರಯದಲ್ಲಿ ಸೆಲ್ಕೊ ಫೌಂಡೆಷನ್‌ ಆಯೋಜಿಸಿರುವ ಸೌರಶಕ್ತಿಯಿಂದ ಬಳಸಬಹುದಾದ ಉಪಕರಣಗಳ ಪ್ರದರ್ಶನದಲ್ಲಿ.

ಕಾಡು ಪ್ರಾಣಿ, ಕೀಟ, ಹಕ್ಕಿಗಳಿಂದ ರಕ್ಷಿಸುವ ಸೋಲಾರ ಉಪಕರಣ, ಸೌರ ಶಕ್ತಿ ಬಳಕೆಯ ಸೆನ್ಸಾರ್‌ ಸೈರನ್ ಪ್ರದರ್ಶನದಲ್ಲಿ ಹೆಚ್ಚು ಗಮನ ಸೆಳೆಯಿತು. ಸೌರಶಕ್ತಿ ಬಳಸಿ ಭತ್ತ ನಾಟಿ, ಕೋಳಿ ಸಾಕಾಣಿಕೆ ಕೇಂದ್ರದಲ್ಲಿ ಗೊಬ್ಬರ ಎತ್ತಿಹಾಕುವ ಯಂತ್ರ ರೈತರಲ್ಲಿ ಹೊಸ ಭರವಸೆ ಮೂಡಿಸಿದವು.

ADVERTISEMENT

ಗ್ರಾಮೀಣ ಮಹಿಳೆಯರು, ಸ್ವಸಹಾಯ ಗುಂಪುಗಳ ಸದಸ್ಯೆಯರು, ಅಂಗವಿಕಲರು ಹಾಗೂ ರೈತರಿಗೆ ತಾವಿರುವ ಊರಲ್ಲೇ ಯಂತ್ರೋಪಕರಣಗಳನ್ನು ಬಳಸಿಕೊಂಡು ಸ್ವಯಂ ಉದ್ಯೋಗ ಆರಂಭಿಸಲು ಹಾಗೂ ಜೀವನೋಪಾಯ ಕಂಡುಕೊಳ್ಳಲು ಸಾಧ್ಯ ಎನ್ನುವುದನ್ನು ಪ್ರದರ್ಶನದ ಮೂಲಕ ಮನವರಿಕೆ ಮಾಡಲಾಯಿತು.

ಪ್ರದರ್ಶನದಲ್ಲಿ ಸೋಲಾರ್ ಉಪಕರಣಗಳ ಖರೀದಿಗೆ ಬ್ಯಾಂಕ್‌ಗಳಿಂದ ದೊರೆಯುವ ಸಾಲ ಸೌಲಭ್ಯ, ಸರ್ಕಾರದಿಂದ ಲಭಿಸುವ ಶೇಕಡ 30ರಷ್ಟು ರಿಯಾಯಿತಿ, ಮಾರುಕಟ್ಟೆ, ಮಾರಾಟ ವ್ಯವಸ್ಥೆಯ ಕುರಿತು ಮಹಿಳೆಯರಿಗೆ ತಿಳಿವಳಿಕೆ ನೀಡಲಾಯಿತು.

ಬಿಸಿಲ ನಾಡಲ್ಲಿ ಬೇಸಿಗೆಯಲ್ಲಿ ಶೆಡ್‌ಗಳಲ್ಲಿ ವಾಸಮಾಡುವುದು ಕಷ್ಟಕರ. ಬಬಲ್‌ಶೀಟ್, ಎಕ್ಸ್‌ಎಲ್‌ಒಇಇ ರೂಫ್‌ ಶೀಟ್‌. ರೋಕ್ವುಲ್ ಬಳಸಿ ಶೆಡ್‌ನಲ್ಲಿ ಉಷ್ಣಾಂಶ ಕಡಿಮೆ ಮಾಡುವ ವಿಧಾನ, ಚಿಕ್ಕ ಅಂಗಡಿಗಳ ನಿರ್ಮಾಣದ ಮಾಹಿತಿ ಸಹ ಮಹಿಳೆಯರನ್ನು ಆಕರ್ಷಿಸಿದವು.

‘ಗ್ರಾಮೀಣ ಮಹಿಳೆಯರು ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಡೆದು ಊರಲ್ಲೇ ಉದ್ಯೋಗ ಭದ್ರತೆ ಒದಗಿಸುವಂತಹ ಪ್ರಯತ್ನವನ್ನು ಪ್ರದರ್ಶನದ ಮೂಲಕ ಮಾಡಲಾಗಿದೆ. ಪ್ರಾತ್ಯಕ್ಷಿಕೆಯ ಮೂಲಕ ಸೌರಶಕ್ತಿ ಬಳಕೆಯಿಂದ ಬಳಸಬಹುದಾದ ಉಪಕರಣಗಳ ಮಾಹಿತಿ ಒದಗಿಸಲಾಗಿದೆ’ ಎಂದು ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಿಜಯಕುಮಾರ ಪಲ್ಲೇದ ತಿಳಿಸಿದರು.

ಮೊದಲ ದಿನ ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಮೂರು ಸಾವಿರ ಮಹಿಳೆಯರು ಪ್ರದರ್ಶನ ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ವೇದಿಕೆ ಕಾರ್ಯಕ್ರಮದಲ್ಲೂ ಸ್ವಸಹಾಯ ಸಂಘಗಳ ಸದಸ್ಯೆಯರಿಗೆ ವಿಷಯ ತಜ್ಞರಿಂದ ಉಪಯುಕ್ತ ಮಾಹಿತಿ ಒದಗಿಸಲಾಯಿತು. 

ಮಹಿಳೆಯರ ಜೀವನೋಪಾಕ್ಕೆ ಉಪಯುಕ್ತವಾದ ಸೋಲಾರ ಉಪಕರಣಗಳ ಪ್ರದರ್ಶನಕ್ಕೆ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಗುರುವಾರ ಮುಂದುವರಿಯಲಿದೆ.
-ಫಣೀಂದ್ರ ಸಿಂಗ್, ಸೆಲ್ಕೊ ಫೌಂಡೇಷನ್ ಯೋಜನಾ ವ್ಯವಸ್ಥಾಪಕ
ಸೌರಶಕ್ತಿಯಿಂದ ಕಬ್ಬು ನುರಿಸುವ ಯಂತ್
ಕೊಬ್ಬರಿ ಎಣ್ಣೆ ಹಾಗೂ ಶೇಂಗಾ ಸಿಪ್ಪೆ ತೆಗೆಯುವ ಯಂತ್ರಗಳು
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.