ADVERTISEMENT

ಬರಗಾಲದಲ್ಲಿ ಆರ್‌ಟಿಪಿಎಸ್‌ ‘ಆಪದ್ಭಾಂಧವ’

ಆರ್‌ಟಿಪಿಎಸ್ ನಿರ್ವಹಣೆಗಾಗಿ ಕೃಷ್ಣಾನದಿಗೆ ನೀರು ಬಿಡುಗಡೆ

ಉಮಾಪತಿ ಬಿ.ರಾಮೋಜಿ
Published 29 ಏಪ್ರಿಲ್ 2019, 11:03 IST
Last Updated 29 ಏಪ್ರಿಲ್ 2019, 11:03 IST
ಶಕ್ತಿನಗರದ ಆರ್‌ಟಿಪಿಎಸ್ ವಿದ್ಯುತ್ ಘಟಕಗಳ ನಿರ್ವಹಣೆಗಾಗಿ ಗುರ್ಜಾಪುರ ಬ್ಯಾರೇಜ್‌ನಲ್ಲಿ ನೀರು ಸಂಗ್ರಹಿಸಿರುವುದು
ಶಕ್ತಿನಗರದ ಆರ್‌ಟಿಪಿಎಸ್ ವಿದ್ಯುತ್ ಘಟಕಗಳ ನಿರ್ವಹಣೆಗಾಗಿ ಗುರ್ಜಾಪುರ ಬ್ಯಾರೇಜ್‌ನಲ್ಲಿ ನೀರು ಸಂಗ್ರಹಿಸಿರುವುದು   

ಶಕ್ತಿನಗರ: ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್) ನಿರ್ವಹಣೆಗಾಗಿ ಕೃಷ್ಣಾನದಿಗೆ ನೀರು ಹರಿಸುತ್ತಿರುವುದರಿಂದ ದೇವಸೂಗೂರಿನ ಸುತ್ತಲಿನ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿದೆ.

ಬಿಸಿಲಿನ ತಾಪಮಾನ ಹೆಚ್ಚುತ್ತಿರುವುದರಿಂದ ಎಲ್ಲೆಡೆ ಜೀವ ಜಲದ ಕೊರತೆ ತೀವ್ರವಾಗಿದೆ. ಅಂತರ್ಜಲ ಬತ್ತಿ ಹನಿಹನಿ ನೀರಿಗೂ ಜನ ಪರದಾಡುವಂತಾಗಿತ್ತು. ನಲ್ಲಿಯಲ್ಲಿ ಒಂದು ತಾಸು ಸಿಗುವ ನೀರಿಗಾಗಿ ಪ್ರತಿದಿನವು ಮಹಿಳೆಯರ ಮಧ್ಯೆ ಜಗಳ ನಡೆಯುತ್ತಿತ್ತು.

ಬಹತೇಕ ಗ್ರಾಮಗಳಲ್ಲಿ ಒಂದು ಕೊಡ ನೀರಿಗಾಗಿ ಕಾಯುವಂತಾಗಿತ್ತು. ಕೃಷ್ಣಾನದಿ ಸಂಪೂರ್ಣ ಬತ್ತಿ ಹೋಗಿತ್ತು. ಆದರೆ ಆರ್‌ಟಿಪಿಎಸ್‌ನಿಂದಾಗಿ ಇಂದು ಹಳ್ಳಿಗಳಿಗೆ ಕುಡಿಯುವ ನೀರಿನ ಅನುಕೂಲ ಸಿಕ್ಕಿದೆ.

ADVERTISEMENT

ಬೇಸಿಗೆಯಲ್ಲಿ ವಿದ್ಯುತ್ ಘಟಕಗಳ ನಿರ್ವಹಣೆಗೆ ನೀರಿನ ಕೊರತೆ ಆಗದಂತೆ ಆಲಮಟ್ಟಿ ಜಲಾಶಯದಿಂದ ಪ್ರತಿ ತಿಂಗಳು 1 ಟಿಎಂಸಿ ನೀರು ಬಿಡಲಾಗುತ್ತಿದೆ.

ದೇವದುರ್ಗ ತಾಲ್ಲೂಕಿನ ಗೂಗಲ್ ಬ್ಯಾರೇಜ್‌ನಿಂದ ನೀರು ಬಿಡುತ್ತಿರುವುದರಿಂದ ವಿದ್ಯುತ್ ಘಟಕಗಳ ನಿರ್ವಹಣೆಗಾಗಿ ಆರ್‌ಟಿಪಿಎಸ್‌ ಪಂಪ್‌ಹೌಸ್‌ನಲ್ಲಿ ನೀರು ಸಂಗ್ರಹ ಮಾಡಲಾಗಿದೆ.

ಹೀಗಾಗಿ ಕೃಷ್ಣಾನದಿಯಲ್ಲಿ ನೀರಿನ ಹರಿವು ಹೆಚ್ಚಳ ಆಗಿದೆ. ಇದರಿಂದ ದೇವಸೂಗೂರು, ಯದ್ಲಾಪುರ, ಶಕ್ತಿನಗರ, ಗಂಜಳ್ಳಿ, ಕಾಡ್ಲೂರು, ಅರಷಿಣಿಗಿ, ಗುರ್ಜಾಪುರ, ಕರೇಕಲ್, ರಂಗಾಪುರ, ಎಚ್.ತಿಮ್ಮಾಪುರ ಸೇರಿದಂತೆ ಸುತ್ತಲಿನ ಹಳ್ಳಿಗಳಿಗೆ ನೀರಿನ ಕೊರತೆ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.

ಅಂತರ್ಜಲ ಮಟ್ಟ ಕುಸಿದಿದ್ದರಿಂದ ಇರುವ ಕೊಳವೆ ಬಾವಿಗಳಲ್ಲಿ ನೀರು ಬತ್ತಿದೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ವಿದ್ಯುತ್ ಘಟಕಗಳ ನಿರ್ವಹಣೆಗಾಗಿ ನದಿಯಲ್ಲಿ ನೀರು ಬಿಟ್ಟಿರುವುದರಿಂದ ಕುಡಿಯುವ ನೀರಿಗೆ ತೊಂದರೆ ಇಲ್ಲದಂತಾಗಿದೆ ಎಂದು ಸ್ಥಳೀಯರಾದ ಅಂಬಣ್ಣ ಅರಷಿಣಿಗಿ, ಸುರೇಶ ಇಳಿಗೇರಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.