ADVERTISEMENT

ಕನ್ನಡದ ಮಣ್ಣಿಗೆ ಸದಾ ಚಿರಋಣಿ: ತೆಲುಗು ನಟ ಶ್ರೀಕಾಂತ್

ಗಾಂಧಿನಗರದಲ್ಲಿ ಗ್ರಾಮೀಣ ದಸರಾಕ್ಕೆ ಚಾಲನೆ: ವಿವಿಧ ಕಲಾ ತಂಡಗಳೊಂದಿಗೆ ಅದ್ದೂರಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 4:56 IST
Last Updated 25 ಸೆಪ್ಟೆಂಬರ್ 2025, 4:56 IST
ಸಿಂಧನೂರು ತಾಲ್ಲೂಕಿನ ಗಾಂಧಿನಗರದ ಶಿವಾಲಯ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಗ್ರಾಮೀಣ ದಸರಾ ಕಾರ್ಯಕ್ರಮದಲ್ಲಿ ತೆಲುಗು ನಟ ಶ್ರೀಕಾಂತ್ ಅವರನ್ನು ಶಾಸಕ ಹಂಪನಗೌಡ ಬಾದರ್ಲಿ ಮತ್ತು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಸನ್ಮಾನಿಸಿದರು
ಸಿಂಧನೂರು ತಾಲ್ಲೂಕಿನ ಗಾಂಧಿನಗರದ ಶಿವಾಲಯ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಗ್ರಾಮೀಣ ದಸರಾ ಕಾರ್ಯಕ್ರಮದಲ್ಲಿ ತೆಲುಗು ನಟ ಶ್ರೀಕಾಂತ್ ಅವರನ್ನು ಶಾಸಕ ಹಂಪನಗೌಡ ಬಾದರ್ಲಿ ಮತ್ತು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಸನ್ಮಾನಿಸಿದರು   

ಸಿಂಧನೂರು: ‘ನನ್ನ ಕರ್ಮಭೂಮಿ ಆಂಧ್ರಪ್ರದೇಶವಾದರೂ ಮಾತೃಭೂಮಿ ಕರ್ನಾಟಕ. ಈ ಕನ್ನಡದ ಮಣ್ಣಿಗೆ ಸದಾ ಚಿರಋಣಿ’ ಎಂದು ತೆಲುಗು ನಟ ಶ್ರೀಕಾಂತ್ ಹೇಳಿದರು.

ತಾಲ್ಲೂಕಿನ ಗಾಂಧಿನಗರದ ಶಿವಾಲಯದ ಸಮುದಾಯ ಭವನದಲ್ಲಿ ನಡೆದ ಗ್ರಾಮೀಣ ದಸರಾ ಉದ್ಘಾಟಿಸಿ ಅವರು ಮಾತನಾಡಿದರು.

‘ಗಂಗಾವತಿ ತಾಲ್ಲೂಕಿನ ಬಸಪಟ್ಟಣದಲ್ಲಿ ಜನಿಸಿದ ನಾನು ಚಿತ್ರನಟನಾಗಿ ಬೆಳೆದದ್ದು ಪಕ್ಕದ ಆಂಧ್ರಪ್ರದೇಶದಲ್ಲಿ. ಆದರೆ, ಅಲ್ಲಿ ನೂರಾರು ಸಿನಿಮಾಗಳನ್ನು ಮಾಡಿ ಎಷ್ಟೇ ಹೆಸರುವಾಸಿಯಾಗಿದ್ದರೂ ಕರ್ನಾಟಕ ಮತ್ತು ಕನ್ನಡಿಗರನ್ನು ಎಂದಿಗೂ ಮರೆಯಲಾರೆ’ ಎಂದು ಹೇಳಿದರು.

ADVERTISEMENT

‘ಕನ್ನಡಿಗರು ಸರಳ, ಸಜ್ಜನಿಕೆ, ಮೃದು ಸ್ವಭಾವದವರು. ಎಲ್ಲರನ್ನು ಅಪ್ಪಿ ಒಪ್ಪಿಕೊಳ್ಳುವ ಪ್ರೀತಿ ಸ್ನೇಹವನ್ನು ಬಂಧುತ್ವಕ್ಕಿಂತ ಹೆಚ್ಚಾಗಿ ನೀಡುವ ಗುಣ ಹೊಂದಿದ್ದಾರೆ. ವಿಶೇಷವಾಗಿ ಅನ್ಯ ಭಾಷಿಕರನ್ನು ಸಹ ತಮ್ಮ ಸಹೋದರರಂತೆ ಕಾಣುವುದು ಕನ್ನಡಿಗರ ವಿಶೇಷತೆಯಾಗಿದೆ. ಕನ್ನಡ ಮತ್ತು ತೆಲುಗು ಭಾಷೆಗಳು ಸಹೋದರ ಭಾಷೆಗಳಾಗಿವೆ. ಕನ್ನಡ ಚಿತ್ರನಟರು ತೆಲುಗು, ತೆಲುಗು ಚಿತ್ರನಟರು ಕನ್ನಡದಲ್ಲಿ ಹೆಸರು ಮಾಡಿದ್ದಾರೆ. ಇಲ್ಲಿ ಕೊಡುಕೊಳ್ಳುವಿಕೆ ಇದೆ. ಹೀಗಾಗಿ ನಾವೆಲ್ಲರೂ ಭಾರತ ಮಾತೆಯ ಪುತ್ರರು’ ಎಂದು ಹೇಳಿದರು.
‌‌
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ, ಅಧ್ಯಕ್ಷತೆ ವಹಿಸಿದ್ದ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿದರು.

ನಗರಸಭೆ ಅಧ್ಯಕ್ಷೆ ಮಂಜುಳಾ ಪ್ರಭುರಾಜ, ತಹಶೀಲ್ದಾರ್ ಅರುಣ್ ಎಚ್.ದೇಸಾಯಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ರೈಲ್ವೆ ಭೂಸ್ವಾಧೀನ ವಿಶೇಷ ಅಧಿಕಾರಿ ಶೃತಿ.ಕೆ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಪನಗೌಡ ಬಾದರ್ಲಿ, ಪೊಲೀಸ್ ಅಧಿಕಾರಿಗಳಾದ ಎರಿಯಪ್ಪ, ಸುಜಾತ, ಮೌನೇಶ ರಾಠೋಡ, ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ, ಅಂಬಾಮಠದ ಅಂಬಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ರಂಗನಗೌಡ ಗೊರೇಬಾಳ, ಮುಖಂಡರಾದ ಲಿಂಗರಾಜ ಪಾಟೀಲ ಹಂಚಿನಾಳ, ಎಂ.ಭಾಸ್ಕರ್‍ರಾವ್, ಚಿಟ್ಟೂರಿ ಶ್ರೀನಿವಾಸ, ಬಸವರಾಜ ಹಿರೇಗೌಡರ್, ಶ್ರೀನಿವಾಸರಾಜು ಲಕ್ಷ್ಮಿಕ್ಯಾಂಪ್, ಗೋಪಿನೀಡಿ ಕೃಷ್ಣ, ಖಾಜಿಮಲಿಕ್ ವಕೀಲ, ಎಸ್.ದೇವೇಂದ್ರಗೌಡ ಉಪಸ್ಥಿತರಿದ್ದರು.

ಹುಸೇನಪ್ಪ ಅಮರಾಪುರ ನಿರೂಪಿಸಿದರು.

ಅದ್ದೂರಿ ಮೆರವಣಿಗೆ

ಗಾಂಧಿನಗರಕ್ಕೆ ತೆಲುಗು ನಟ ಶ್ರೀಕಾಂತ್ ಅವರು ಆಗಮಿಸುತ್ತಿದ್ದಂತೆ ಮಹಿಳೆಯರು ಆರತಿ ಬೆಳಗಿ ಅದ್ದೂರಿಯಾಗಿ ಸ್ವಾಗತಿಸಿಕೊಂಡರು. ನಂತರ ಆಂಜನೇಯ ದೇವಸ್ಥಾನದಿಂದ ನೂರಾರು ಮಹಿಳೆಯರು ಕುಂಭ-ಕಳಸ ಹಿಡಿದು ವಿವಿಧ ಕಲಾತಂಡಗಳು ಬಾಜಾ-ಭಜಂತ್ರಿಗಳ ವಾದ್ಯ ಮೇಳಗಳೊಂದಿಗೆ ಶಿವಾಲಯ ದೇವಸ್ಥಾನದವರೆಗೆ ಮೆರವಣಿಗೆ ನಡೆಸಲಾಯಿತು.

ಆಕರ್ಷಿಸಿದ ನಾಟಕ ಸಂಗೀತ ಕಾರ್ಯಕ್ರಮ

ಗ್ರಾಮೀಣ ದಸರಾ ಕಾರ್ಯಕ್ರಮದಲ್ಲಿ ಸರಿಗಮಪ ಖ್ಯಾತಿಯ ವರ್ಣಾ ಬೆಂಗಳೂರು ಅವರಿಂದ ಸಂಗೀತ ಕಾರ್ಯಕ್ರಮ ರಂಗಧಾರಿ ರೇಪರ್ಟರಿ ಕೊಪ್ಪಳ ತಂಡದಿಂದ ಶಿಕ್ಷಣ ಆರೋಗ್ಯ ಕೃಷಿಗೆ ಸಂಬಂಧಿಸಿದಂತೆ ಜಾಗೃತಿ ರೂಪಕ ನಾಟಕಗಳು ಗ್ರಾಮೀಣ ಕಲಾ ತಂಡಗಳಿಂದ ಕಲೆ ಸಂಸ್ಕೃತಿ ಜನಪದ ಕಾರ್ಯಕ್ರಮಗಳು ಕಾಲೇಜು ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದ ಜನರನ್ನು ಆಕರ್ಷಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.