ADVERTISEMENT

SSP ಪೋರ್ಟಲ್‌ ಸಮಸ್ಯೆ: ರಾಜ್ಯದ ಗಡಿ ವಿದ್ಯಾರ್ಥಿಗಳಿಗಿಲ್ಲ ಹಾಸ್ಟೆಲ್‌ ಪ್ರವೇಶ

ಎಸ್‌ಎಸ್‌ಪಿ ಪೋರ್ಟಲ್‌ನಲ್ಲೇ ಸ್ವೀಕೃತವಾಗದ ಅರ್ಜಿಗಳು

ಚಂದ್ರಕಾಂತ ಮಸಾನಿ
Published 19 ಜೂನ್ 2025, 23:37 IST
Last Updated 19 ಜೂನ್ 2025, 23:37 IST
ರಾಯಚೂರಿನ ಅನುದಾನಿತ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿಗೆ ಪ್ರವೇಶ ಪಡೆದಿರುವ ತೆಲಂಗಾಣದ ಕೃಷ್ಣಾ ಮಂಡಲದ ಮೂವರು ವಿದ್ಯಾರ್ಥಿಗಳು
ರಾಯಚೂರಿನ ಅನುದಾನಿತ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿಗೆ ಪ್ರವೇಶ ಪಡೆದಿರುವ ತೆಲಂಗಾಣದ ಕೃಷ್ಣಾ ಮಂಡಲದ ಮೂವರು ವಿದ್ಯಾರ್ಥಿಗಳು   

ರಾಯಚೂರು: ಗಡಿಕನ್ನಡಿಗರ ಮಕ್ಕಳಿಗೆ ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರವೇಶ ಸಿಗುತ್ತಿದ್ದರೂ ಪೋರ್ಟಲ್‌ ಸಮಸ್ಯೆಯಿಂದಾಗಿ ವಸತಿನಿಲಯಗಳಲ್ಲಿ ಪ್ರವೇಶ ಸಿಗದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

ಕೃಷ್ಣಾ ನದಿಯನ್ನೇ ರಾಜ್ಯದ ಗಡಿಯನ್ನಾಗಿ ಗುರುತಿಸಿರುವ ಕಾರಣ ನದಿ ಆಚೆಗೆ ಇರುವ ತೆಲಂಗಾಣದ ಹಾಗೂ ಆಂಧ್ರಪ್ರದೇಶದಲ್ಲಿರುವ ಅಚ್ಚ ಕನ್ನಡದ ಗ್ರಾಮಗಳ ವಿದ್ಯಾರ್ಥಿಗಳು ಕರ್ನಾಟಕದಲ್ಲಿ ಶೈಕ್ಷಣಿಕ ಸೌಲಭ್ಯ ಪಡೆಯಲು ತಾಂತ್ರಿಕ ಸಮಸ್ಯೆ ಎದುರಿಸುತ್ತಿದ್ದಾರೆ.

ತೆಲಂಗಾಣದ ಗುಡೇಬಲ್ಲೂರು ಗ್ರಾಮದ ವಿದ್ಯಾರ್ಥಿ ಕರ್ವ ವಿಷ್ಣು, ಕೃಷ್ಣಾ ಬ್ರಿಡ್ಜ್ ಪಕ್ಕದ ಗುರ್ಜಾಲಿಯ ಎಸ್. ರಮೇಶ, ಹಿಂದೂಪುರ ಗ್ರಾಮದ ಎಸ್.ಅಭಿ ತೆಲಂಗಾಣದ ಜಿಲ್ಲಾ ಪಂಚಾಯಿತಿ ಕೃಷ್ಣಾ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ಅತ್ಯುತ್ತಮ ಶ್ರೇಣಿಯಲ್ಲಿ 10ನೇ ತರಗತಿ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಐವರು ವಿದ್ಯಾರ್ಥಿಗಳು ರಾಯಚೂರಿನ ಕಾಲೇಜೊಂದರಲ್ಲಿ ಪ್ರವೇಶ ಪಡೆದುಕೊಂಡಿದ್ದಾರೆ.

ADVERTISEMENT

ಗಡಿಯಾಚಿನ 30 ಕಿ.ಮೀ ವ್ಯಾಪ್ತಿಯಲ್ಲಿ ಪದವಿ ಪೂರ್ವ ಕಾಲೇಜುಗಳು ಇಲ್ಲ. ಹೀಗಾಗಿ ರಾಯಚೂರಿನಲ್ಲಿರುವ ಅನುದಾನಿತ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪ್ರವೇಶ ಪಡೆದಿದ್ದಾರೆ. ಅವರ ಗ್ರಾಮಗಳಿಗೆ ಹೋಗಿ ಬರಲು ಸಮಯಕ್ಕೆ ಸರಿಯಾಗಿ ಸಾರಿಗೆ ವ್ಯವಸ್ಥೆ ಇಲ್ಲ. ಹೀಗಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿನಿಲಯದಲ್ಲಿ ಪ್ರವೇಶ ಪಡೆಯಲು ಒಂದು ವಾರದಿಂದ ಪ್ರಯತ್ನ ನಡೆಸಿದ್ದಾರೆ. ತಾಂತ್ರಿಕ ಸಮಸ್ಯೆಯಿಂದ ಅವರಿಗೆ ಪ್ರವೇಶ ದೊರೆಯುತ್ತಿಲ್ಲ. ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಕೇರಳದ ಗಡಿಯಲ್ಲಿರುವ ಕನ್ನಡಿಗರ ಮಕ್ಕಳು ಇದೇ ಸಮಸ್ಯೆ ಎದುರಿಸುತ್ತಿದ್ದಾರೆ.

‘ಎಸ್‌ಎಸ್‌ಪಿ ಪೋರ್ಟಲ್‌ನಲ್ಲಿ ಎಷ್ಟೇ ಪ್ರಯತ್ನಿಸಿದರೂ ಅರ್ಜಿ ಸ್ವೀಕೃತವಾಗುತ್ತಿಲ್ಲ. ರಾಜ್ಯದ ಕಾಲಂನಲ್ಲಿ ತೆಲಂಗಾಣ ಎಂದು ನಮೂದು ಮಾಡಿದ ತಕ್ಷಣ ಅರ್ಜಿ ತಿರಸ್ಕೃತಗೊಳ್ಳುತ್ತಿದೆ. ಪೋರ್ಟಲ್‌ನಲ್ಲಿ ಗಡಿ ಕನ್ನಡಿಗರ ಮಕ್ಕಳು ಪ್ರವೇಶ ಪಡೆಯುವಂತಾಗಲು ತಂತ್ರಾಂಶದಲ್ಲಿ ಬದಲಾವಣೆ ಮಾಡಬೇಕು’ ಎಂದು ವಿದ್ಯಾರ್ಥಿಗಳಾದ ಕರ್ವ ವಿಷ್ಣು, ಎಸ್. ರಮೇಶ ಹಾಗೂ ಎಸ್.ಅಭಿ ಮನವಿ ಮಾಡಿದ್ದಾರೆ.

‘ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಲಿಖಿತವಾಗಿ ಬರೆದುಕೊಟ್ಟರೆ ಇಲಾಖೆಯ ಮೇಲಧಿಕಾರಿಗಳಿಗೆ ಕಳುಹಿಸಿ ತಾಂತ್ರಿಕ ಸಮಸ್ಯೆ ಇತ್ಯರ್ಥಪಡಿಸುವಂತೆ ಕೋರಲಾಗುವುದು’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಅಶೋಕ ಹೇಳುತ್ತಾರೆ.

‘ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಕೇರಳದ ವಿದ್ಯಾರ್ಥಿಗಳು ಶೈಕ್ಷಣಿಕ ಸೌಲಭ್ಯ ಪಡೆಯಲಾಗದೇ ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಗಡಿ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಈ ಕುರಿತು ಗಂಭೀರವಾಗಿ ಚರ್ಚಿಸಲಾಗಿದೆ. ಗಡಿನಾಡ ಕನ್ನಡಿಗರ ಮಕ್ಕಳಿಗೆ ವಸತಿನಿಲಯದಲ್ಲಿ ಪ್ರವೇಶ ಕಲ್ಪಿಸುವಂತೆ ಸರ್ಕಾರಕ್ಕೆ ಕೋರಲಾಗಿದೆ’ ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಭಗತರಾಜ ನಿಜಾಮಕಾರಿ ಹೇಳುತ್ತಾರೆ.‌

ಗಡಿನಾಡಿನಲ್ಲಿ 10ನೇ ತರಗತಿವರೆಗೆ ಕನ್ನಡದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ವಸತಿನಿಲಯಗಳಲ್ಲೂ ಪ್ರವೇಶಕೊಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಸೋಮಣ್ಣ ಬೇವಿನಮರದ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ಗಡಿನಾಡು ಕನ್ನಡಿಗರು ಶೈಕ್ಷಣಿಕವಾಗಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಕರ್ನಾಟಕದ ಹಾಸ್ಟೆಲ್‌ನಲ್ಲಿ ಉಳಿದುಕೊಳ್ಳಲು ಅವಕಾಶ ಕಲ್ಪಿಸಬೇಕು ಸುಂದರ ಬಾರಡ್ಕ ಕಾಸರಗೋಡು

ನೆರೆ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಕರ್ನಾಟಕದ 19 ಜಿಲ್ಲೆಗಳ ವಸತಿನಿಲಯದಲ್ಲಿ ಗಡಿನಾಡ ಕನ್ನಡಿಗರ ಮಕ್ಕಳಿಗೆ ಪ್ರವೇಶ ದೊರೆಯಬೇಕು. ಅಶೋಕ ಚಂದರಗಿ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಬೆಳಗಾವಿ

ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ನೂರಾರು ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಕರ್ನಾಟಕಕ್ಕೆ ಬರುತ್ತಾರೆ. ಬಡ ವಿದ್ಯಾರ್ಥಿಗಳ ಅನುಕೂಲಕ್ಕೆ ವಸತಿ ಸೌಲಭ್ಯ ಕಲ್ಪಿಸಬೇಕು. ಆರ್‌.ಜಿ.ಬಿರಾದಾರ ಶಿಕ್ಷಕ ಜತ್ತ ತಾಲ್ಲೂಕಿನ ಸಂಕ ಗ್ರಾಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.