ADVERTISEMENT

ಮಾದಕ ದ್ರವ್ಯ ವ್ಯಸನದಿಂದ ದೂರವಿರಿ: ಅಬಕಾರಿ ಇಲಾಖೆಯ ಉಪ ಆಯುಕ್ತ ಸಿ.ಕೆ.ಮಹೇಂದ್ರ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 8:36 IST
Last Updated 30 ಡಿಸೆಂಬರ್ 2025, 8:36 IST
ರಾಯಚೂರಿನ ಹರಿಜನವಾಡ ಬಡಾವಣೆಯಲ್ಲಿ ಆಯೋಜಿಸಿದ್ದ ಸಿ.ಎಚ್ ಮಿಶ್ರಿತ ಕಲಬೆರಕೆ ಸೇಂದಿ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅಬಕಾರಿ ಇಲಾಖೆಯ ಉಪ ಆಯುಕ್ತ ಸಿ,ಕೆ,ಮಹೇಂದ್ರ, ಡಿವೈಎಸ್ಪಿ ಮೌನೇಶ, ಮಾನಸಿಕ ಆರೋಗ್ಯ ತಜ್ಞ ಡಾ.ಮನೋಹರ ಪತ್ತಾರ ಉಪಸ್ಥಿತರಿದ್ದರು
ರಾಯಚೂರಿನ ಹರಿಜನವಾಡ ಬಡಾವಣೆಯಲ್ಲಿ ಆಯೋಜಿಸಿದ್ದ ಸಿ.ಎಚ್ ಮಿಶ್ರಿತ ಕಲಬೆರಕೆ ಸೇಂದಿ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅಬಕಾರಿ ಇಲಾಖೆಯ ಉಪ ಆಯುಕ್ತ ಸಿ,ಕೆ,ಮಹೇಂದ್ರ, ಡಿವೈಎಸ್ಪಿ ಮೌನೇಶ, ಮಾನಸಿಕ ಆರೋಗ್ಯ ತಜ್ಞ ಡಾ.ಮನೋಹರ ಪತ್ತಾರ ಉಪಸ್ಥಿತರಿದ್ದರು   

ರಾಯಚೂರು: ‘ಸಿಎಚ್ ಪೌಡರ್ ಮಿಶ್ರಿತ ಕಲಬೆರಕೆ ಸೇಂದಿ ಸೇವನೆ ಸಂಪೂರ್ಣ ಆರೋಗ್ಯವನ್ನೇ ಹಾಳು ಮಾಡುತ್ತದೆ. ಇದು ಬಹು ಅಂಗಾಂಗ ವೈಫಲ್ಯಕ್ಕೂ ದಾರಿ ಮಾಡಿಕೊಡುತ್ತದೆ’ ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತ ಸಿ.ಕೆ.ಮಹೇಂದ್ರ ಎಚ್ಚರಿಸಿದರು.

ನಗರದ ಹರಿಜನವಾಡ ಬಡಾವಣೆಯಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಅಬಕಾರಿ ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ಆರೋಗ್ಯ ವಿಭಾಗದಿಂದ ಶನಿವಾರ ಏರ್ಪಡಿಸಿದ್ದ ಕಾನೂನು ಅರಿವು ಮತ್ತು ಸಿ.ಎಚ್ ಮಿಶ್ರಿತ ಕಲಬೆರಕೆ ಸೇಂದಿ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಹಾಗೂ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಿಎಚ್ ಪೌಡರ್ ಮಿಶ್ರಿತ ಕಲಬೆರಕೆ ಸೇಂಧಿ ಸೇವನೆಯಿಂದ ಜಠರ ನಿಷ್ಕ್ರಿಯಗೊಳ್ಳುತ್ತದೆ. ಕಣ್ಣಿನ ಪೊರೆಗೆ ಹಾನಿ ಉಂಟಾಗಿ ಅಂಧತ್ವ ಬರುತ್ತದೆ. ಹೃದಯಾಘಾತಕ್ಕೆ ಕಾರಣವಾಗುತ್ತದೆ. ಜೀರ್ಣ ಶಕ್ತಿಯನ್ನು ದುರ್ಬಲಗೊಳಿಸುತ್ತದೆ’ ಎಂದು ತಿಳಿಸಿದರು.

‘ಸಿಎಚ್ ಪೌಡರ್ ಮಾರಾಟ ಮಾಡುತ್ತಿದ್ದ ಮೂವರನ್ನು ಪತ್ತೆ ಮಾಡಿ ಗಡಿಪಾರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಈಗಾಗಲೇ 6 ಜನರನ್ನು ಗಡಿಪಾರು ಮಾಡಲಾಗಿದೆ’ ಎಂದು ಹೇಳಿದರು.

‘ಸೇಂದಿ, ಸಿಎಚ್ ಪೌಡರ್‌ ವ್ಯಸನಿಗಳು ಅಬಕಾರಿ ಇಲಾಖೆಯಲ್ಲಿ ಹೆಸರು ನೋಂದಾಯಿಸಿಕೊಂಡರೆ ಅವರಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ವ್ಯಸನ ಮುಕ್ತ ಕೇಂದ್ರಕ್ಕೆ ಕಳಿಸಿಕೊಡಲಾಗುವುದು’ ಎಂದು ಹೇಳಿದರು

‘ಸಿಎಚ್ ಪೌಡರ್ ದಂದೆಗೆ ಕಡಿವಾಣ ಹಾಕಲು ಅಬಕಾರಿ ಇಲಾಖೆಯ ವತಿಯಿಂದ ದಿನದ 24ಗಂಟೆಯೂ ಕಾರ್ಯನಿರ್ವಹಿಸಲಾಗುತ್ತಿದೆ. ಸಾರ್ವಜನಿಕರು ಇಲಾಖೆಯೊಂದಿಗೆ ಸಂಪರ್ಕ ಹೊಂದಬಹುದಾಗಿದೆ’ ಎಂದರು.

ಮಾನಸಿಕ ಆರೋಗ್ಯ ತಜ್ಞ ಡಾ.ಮನೋಹರ ಪತ್ತಾರ ಮಾತನಾಡಿ, ‘ಹೆಂಡ ಸೇವನೆ ದಿನಕಳೆದಂತೆ ಹೆಚ್ಚು ಮಾಡುವುದು, ಕೈನಡುಕ, ಗಾಬರಿ, ತಲೆನೋವು, ಇತ್ಯಾದಿ ಕಾಣಿಸುವುದು ವ್ಯಸನದ ಲಕ್ಷಣಗಳಾಗಿವೆ. ಸಿಎಚ್ ಪೌಡರ್ ಅಥವಾ ಕೈ ಹೆಂಡ ಸೇವೆ ತ್ಯಜಿಸಲು ಹತ್ತಿರದ ಆಪ್ತ ಸಮಾಲೋಚನೆ, ಔಷಧಿಗಳು, ಧ್ಯಾನ, ಯೋಗ ಇತ್ಯಾದಿ ಸೂಕ್ತ ಚಿಕಿತ್ಸೆಗಳು ಲಭ್ಯವಿದೆ’ ಎಂದರು.

ಕಾಂಗ್ರೆಸ್ ಮುಖಂಡ ನರಸಿಂಹಲು ಮಾಡಿಗಿರಿ, ಮಹಾನಗರ ಪಾಲಿಕೆ ಸದಸ್ಯ ನಾಗರಾಜ, ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಪಿ. ಯಲ್ಲಪ್ಪ, ರಿಮ್ಸ್ ಆಸ್ಪತ್ರೆಯ ನಿರ್ದೇಶಕ, ರಮೇಶ ಬಾಬು, ಅಬಕಾರಿ ಡಿವೈಎಸ್ಪಿ ಮೌನೇಶ, ಅಬಕಾರಿ ಅಧಿಕಾರಿ ವೆಂಕಟೇಶ, ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.