ಲಿಂಗಸುಗೂರು: ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಶ್ವಾನಗಳಿಗೆ ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆಗೆ ಪುರಸಭೆ ಮುಂದಾಗಿದೆ.
ಪುರಸಭೆ ವ್ಯಾಪ್ತಿಯಲ್ಲಿ ಸುಮಾರು 500ಕ್ಕೂ ಅಧಿಕ ಬೀದಿ ನಾಯಿಗಳಿಗೆ ಸಂತಾನ ಶಕ್ತಿಹರಣ ಚಿಕಿತ್ಸೆಗಾಗಿ ಚಿಕ್ಕಮಗಳೂರು ಗ್ರೀನ್ ಪೂಡ್ ಪ್ರಿಂಟ್ ಟ್ರಸ್ಟ್ ಗೆ ಗುತ್ತಿಗೆ ನೀಡಲಾಗಿದೆ. ಬೀದಿ ನಾಯಿಗಳನ್ನು ಹಿಡಿದು ಪಟ್ಟಣದ ಘನ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಪಶುವೈದ್ಯರ ಮೂಲಕ ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆ ನಡೆಸಿ, ರೇಬಿಸ್ ಚುಚ್ಚುಮದ್ದು ನೀಡಿ ಮರು ಆರೈಕೆ ಮಾಡಿ ಅದನ್ನು ನಿಗದಿತ ಸ್ಥಳಕ್ಕೆ ಬೀಡಲಾಗುತ್ತಿದೆ. ನಾಯಿಯ ಚಿಕಿತ್ಸೆಗಾಗಿ ₹1,650 ಟ್ರಸ್ಟ್‌ಗೆ ನೀಡಲಾಗುತ್ತಿದೆ.
ಶಸ್ತ್ರಚಿಕಿತ್ಸೆ ಸಮಯದಲ್ಲಿ ನಾಯಿಗಳಿಗೆ ಸೋಂಕು ಹರಡದಂತೆ ನಿವಾರಕ ಬಳಸಲಾಗುತ್ತಿದ್ದು, ರೇಬಿಸ್ ನಿರೋಧಕ ಚುಚ್ಚು ಮದ್ದು ನೀಡಲಾಗುತ್ತಿದೆ. ಇದರಿಂದ ಬೀದಿ ನಾಯಿಗಳು ಒಂದು ವೇಳೆ ಮನುಷ್ಯರ ಮೇಲೆ ದಾಳಿ ಮಾಡಿದಾಗ ರೇಬಿಸ್ ರೋಗಾಣುಗಳು ಹರಡುವುದಿಲ್ಲ.
ಶಸ್ತ್ರಚಿಕಿತ್ಸೆಯಾದ ನಾಯಿಗಳನ್ನು ಸುಲಭವಾಗಿ ಗುರುತಿಸಲು ಅವುಗಳ ಒಂದು ಭಾಗದ ಕಿವಿಯನ್ನು ಸುಮಾರು ಅರ್ಧ ಇಂಚು ಪಂಚ್ ಮಾಡಿ ಕತ್ತರಿಸಲಾಗುತ್ತಿದೆ. ಪ್ರತಿದಿನ ಅಂದಾಜು 20 ನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಯಲಿದೆ. ಕಳೆದ ಎರಡು ದಿನಗಳಿಂದ ಕಾರ್ಯಾಚರಣೆ ಆರಂಭವಾಗಿದೆ ಒಂದು ತಿಂಗಳ ಕಾಲ ನಡೆಯಲಿದೆ ಎಂದು ಪುರಸಭೆ ಪರಿಸರ ಅಭಿಯಂತರ ಕೆ.ಗಿರಿಜಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.