ADVERTISEMENT

ಸಿಂಧನೂರು: ತರಗತಿ ನಡೆಸದಿದ್ದರೆ ಪರೀಕ್ಷೆ ಬಹಿಷ್ಕಾರ, ಎಚ್ಚರಿಕೆ

ಮಿನಿ ವಿಧಾನಸೌಧ ಮುಂದೆ ವಿದ್ಯಾರ್ಥಿನಿಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2021, 2:25 IST
Last Updated 29 ಡಿಸೆಂಬರ್ 2021, 2:25 IST
ಸಿಂಧನೂರಿನ ಮಿನಿವಿಧಾನಸೌಧ ಕಚೇರಿ ಮುಂದೆ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಮಂಗಳವಾರ ಮಿನಿವಿಧಾನಸೌಧ ಕಚೇರಿ ಮುಂದೆ ಪ್ರತಿಭಟಿಸಿ ಶಿರಸ್ತೇದಾರ್ ಅಂಬಾದಾಸ್ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಸಿಂಧನೂರಿನ ಮಿನಿವಿಧಾನಸೌಧ ಕಚೇರಿ ಮುಂದೆ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಮಂಗಳವಾರ ಮಿನಿವಿಧಾನಸೌಧ ಕಚೇರಿ ಮುಂದೆ ಪ್ರತಿಭಟಿಸಿ ಶಿರಸ್ತೇದಾರ್ ಅಂಬಾದಾಸ್ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಸಿಂಧನೂರು: ಸರಿಯಾಗಿ ತರಗತಿ ನಡೆಸುವಂತೆ ಒತ್ತಾಯಿಸಿ ನಗರದ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಮಂಗಳವಾರ ಸ್ಥಳೀಯ ಮಿನಿವಿಧಾನಸೌಧ ಕಚೇರಿಯ ಮುಂದೆ ಪ್ರತಿಭಟಿಸಿ ಶಿರಸ್ತೇದಾರ್ ಅಂಬಾದಾಸ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಉದ್ಯೋಗ ಭದ್ರತೆ, ವೇತನ ಹೆಚ್ಚಳ ಸೇರಿದಂತೆ ವಿವಿಧ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿ ಡಿ.10 ರಿಂದ ಧರಣಿ ನಡೆಸುತ್ತಿದ್ದಾರೆ.

ಹೀಗಾಗಿ ಇಲ್ಲಿಯವರೆಗೆ ತರಗತಿಗಳೇ ನಡೆದಿಲ್ಲ, ಪಾಠಗಳೇ ಆಗಿಲ್ಲ. ಈ ಬಗ್ಗೆ ಪಾಂಶುಪಾಲರ ಗಮನಕ್ಕೆ ತಂದರೆ ಸಕರಾತ್ಮಕವಾಗಿ ಸ್ಪಂದನೆ ನೀಡುತ್ತಿಲ್ಲ. ಕಾಲೇಜು ಮುಂದೆ ಪ್ರತಿಭಟಿಸಿದರೆ ನಿಮ್ಮ ಪಾಲಕರಿಗೆ ಹೇಳುತ್ತೇನೆಂದು ಹೆದರಿಕೆ ಹಾಕುತ್ತಿದ್ದಾರೆ ಎಂದು ವಿದ್ಯಾರ್ಥಿನಿಯರು ಆಪಾದಿಸಿದರು.

ADVERTISEMENT

ಇದುವರೆಗೆ ಒಂದೂ ಪಾಠನೂ ಸರಿಯಾಗಿ ಆಗಿಲ್ಲ. ಈಗ ಅತಿಥಿ ಉಪನ್ಯಾಸಕರು ಹೋರಾಟಕ್ಕೆ ಹೋಗಿದ್ದು ತರಗತಿಗಳೇ ನಡೆಯುತ್ತಿಲ್ಲ. ಹೀಗಾದರೆ ಮುಂದಿನ ತಿಂಗಳು ನಡೆಯುವ ಪರೀಕ್ಷೆಗಳಲ್ಲಿ ಏನು ಬರೆಯಬೇಕು. ತಕ್ಷಣವೇ ತರಗತಿಗಳನ್ನು ಸಮರ್ಪಕವಾಗಿ ನಡೆಸದಿದ್ದರೆ ಪರೀಕ್ಷೆಯನ್ನು ಬಹಿಷ್ಕಾರ ಮಾಡಿ ಕಾಲೇಜು ಮುಂದೆಯೇ ಧರಣಿ ಕೂರುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

‘ನಾವು ಪದವಿ ಪ್ರಥಮ ವರ್ಷವಿದ್ದಾಗ ಸರ್ಕಾರದಿಂದ ಬಂದ ಲ್ಯಾಪ್‍ಟಾಪ್ ಕೊಡಬೇಕಾಗಿತ್ತು. ಆದರೀಗ ನಾವು ಅಂತಿಮ ವರ್ಷದಲ್ಲಿದ್ದೇವೆ. ಈಗಲೂ ಲ್ಯಾಪ್‍ಟಾಪ್ ಕೊಟ್ಟಿಲ್ಲ. ಲ್ಯಾಪ್‍ಟಾಪ್ ಕುರಿತು ಪ್ರಾಂಶುಪಾಲರಿಗೆ ಕೇಳಿದರೆ ಮಸ್ಕಿಯಲ್ಲಿ ಬಂದಿವೆ ಅಂದರು, ಮತ್ತೊಮ್ಮೆ ಕೇಳಿದರೆ ಮಸ್ಕಿಯಲ್ಲಿ ಅರ್ಧ ಬಂದಿದೆ, ಮತ್ತೆ ಬಂದಾಗ ನೋಡೋಣ ಅಂದ್ರು, ಈಗ ಕೇಳಿದರೆ ಲ್ಯಾಪ್‍ಟಾಪ್ ವಿಷಯ ಮರೆತುಬಿಡಿ ಎಂದು ಹೇಳುತ್ತಿದ್ದಾರೆ’ ಎಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡರು.

‘ಸರಿಯಾಗಿ ಪಾಠ ಆಗದಿರುವುದು ಒಂದೆಡೆಯಾದರೆ, ಪರೀಕ್ಷಾ ಶುಲ್ಕ ರೂ.2 ಸಾವಿರ ಮಾಡಿರುವುದು ಮತ್ತೊಂದೆಡೆ ಚಿಂತೆಯಾಗಿದೆ. ನಾವು ಬಡವರ ಮಕ್ಕಳು, ಪರೀಕ್ಷಾ ಶುಲ್ಕ ಜಾಸ್ತಿ ಇದ್ದು, ಕಡಿಮೆ ಮಾಡಿಸಿ ಅಂತ ಪ್ರಾಚಾರ್ಯರಿಗೆ ಹೇಳಿದರೆ ಉಪನಿರ್ದೇಶಕರಿಗೆ ಮಾತನಾಡಿ ಅಂತ ಹೇಳುತ್ತಿದ್ದಾರೆ.

ಉಪನ್ಯಾಸಕರ ಕುರಿತು ಮಾತನಾಡಿದರೆ ಶಾಸಕರಿಗೆ ಮಾತನಾಡಿದ್ದೇನೆ ಮೂರ್ನಾಲ್ಕು ದಿನದಲ್ಲಿ ಬರುತ್ತಾರೆ ಅಂತ ಹೇಳುತ್ತಿದ್ದಾರೆ. ಮನೆಯಲ್ಲಿ ನೋಡಿದರೆ ಕಾಲೇಜು ಇಲ್ಲ. ಹೊಲ-ಮನೆ ಕೆಲಸ ಮಾಡು ಅಂತ ಹೇಳುತ್ತಿದ್ದಾರೆ. ಹೀಗಾದರೆ ನಮ್ಮ ಭವಿಷ್ಯದ ಪರಿಸ್ಥಿತಿ ಏನು’ ಎಂದು ಪ್ರಶ್ನಿಸಿರುವ ವಿದ್ಯಾರ್ಥಿನಿಯರು ‘ನಾಳೆ ನಮ್ಮ ಶಿಕ್ಷಣ ಮೊಟಕುಗೊಂಡಿದರೆ ಅದಕ್ಕೆ ಪ್ರಾಂಶುಪಾಲರೇ ಹೊಣೆ’ ಎಂದು ದೂರಿದರು.

ವಿದ್ಯಾರ್ಥಿನಿಯರಾದ ಝಕಿಯಾ, ಬಸಲಿಂಗಮ್ಮ, ಭಾರತಿ ಹೂಗಾರ, ಹರ್ಷಿಯಾ, ಸಂಗೀತಾ, ಚೆನ್ನಮ್ಮ, ಶಿವಲೀಲಾ, ಚೈತ್ರಾ, ಮಲ್ಲಮ್ಮ, ಜ್ಯೋತಿ, ಕಾವ್ಯ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.