ADVERTISEMENT

ಎಫ್‌ಡಿಎ ಪ್ರಕಾಶಬಾಬು ಆತ್ಮಹತ್ಯೆ ಪ್ರಕರಣ; ಸಾವಿನ ಟಿಪ್ಪಣಿ ಪೊಲೀಸರಿಗೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 6:54 IST
Last Updated 6 ಸೆಪ್ಟೆಂಬರ್ 2021, 6:54 IST

ರಾಯಚೂರು: ಸರ್ಕಾರಿ ಹಣ ದುರುಪಯೋಗ ಆರೋಪ ಪ್ರಕರಣದ ಎಫ್‌ಡಿಎ ಪ್ರಕಾಶಬಾಬು ಅವರು ಕರ್ತವ್ಯ ನಿರ್ವಹಿಸಿದ್ದ ಕಡತಗಳನ್ನು ಪರಿಶೀಲಿಸುವಾಗ ಆಗಸ್ಟ್ 25 ರಂದು ಕಚೇರಿ ಸಿಬ್ಬಂದಿಗೆ ದೊರೆತಿದ್ದ ಒಂದು ಹಾಳೆಯಲ್ಲಿದ್ದ ಸಾವಿನ ಟಿಪ್ಪಣಿಯನ್ನು ಪಂಚರ ಸಮಕ್ಷಮದಲ್ಲಿ ಪಶ್ಚಿಮ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿದೆ. ಅಗತ್ಯ ಕಾನೂನಿನ ತನಿಖೆಗೂ ಕೋರಲಾಗಿದೆ ಎಂದು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ಶನಿವಾರ ತಿಳಿಸಿದ್ದಾರೆ.

ಪ್ರಕಾಶಬಾಬು ಅವರ ಹೆಸರಿನಲ್ಲಿದ್ದ ಮೊಬೈಲ್ ಸಿಮ್‌ನ ಮೂರು ನಂಬರ್‌ಗಳನ್ನು ಹಾಗೂ ಪ್ರಕಾಶಬಾಬು ಸಹೋದರ ಶಂಕರಬಾಬು ಅವರಿಗೆ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್‌ ಠಾಣೆಯ ಪೊಲೀಸರು ನೀಡಿದ್ದ ಇನ್ನೊಂದು ಸಿಮ್‌ ಅನ್ನು ಕೂಡಾ ಸಂಬಂಧಿಸಿದ ಪೊಲೀಸ್ ಠಾಣೆಗೆ ತನಿಖೆಗಾಗಿ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಕಾಶಬಾಬು ಆಗಸ್ಟ್ 23 ರಂದು ಎಸಿ ಕಚೇರಿಯಿಂದ ಕೊನೆಯದಾಗಿ ಹೊರಡುವ ವೇಳೆ ಕೈಯಲ್ಲಿ ತೆಗೆದುಕೊಂಡು ಹೋಗಿರುವ ಪ್ಲಾಸ್ಟಿಕ್ ಚೀಲದ ಮಾದರಿಯನ್ನು ತನಿಖೆಗೆ ಪರಿಗಣಿಸುವಂತೆಯೂ ಕೋರಲಾಗಿದೆ ಎಂದಿದ್ದಾರೆ.

ADVERTISEMENT

ಉಪ್ಪಾರಪೇಟೆ ಪೊಲೀಸ್‌ ಠಾಣೆಯ ಪೊಲೀಸರು ಮೃತದೇಹವನ್ನು ಸಂಬಂಧಿಗಳ ವಶಕ್ಕೆ ನೀಡುವಾಗ, ವಸತಿಗೃಹದಲ್ಲಿ ದೊರಕಿದ್ದ ಚೆಕ್, ಪಾಸ್ ಬುಕ್, ಎಟಿಎಂ ಕಾರ್ಡ್ ಸೇರಿ ಮತ್ತಿತರ ದಾಖಲೆಗಳನ್ನು ಕೂಡಾ ನೀಡಿದ್ದಾರೆ ಎಂಬುದಾಗಿ ಶಂಕರ ಬಾಬು ಮಾಹಿತಿ ನೀಡಿದ್ದರು. ಎಲ್ಲಾ ಆಯಾಮಗಳ ತನಿಖೆಯ ‌ಭಾಗವಾಗಿ ಸ್ಥಳದಲ್ಲಿ ಪತ್ತೆಯಾದ ಅಂಶಗಳನ್ನು ಕೂಡಾ ಪರಿಶೀಲಿಸುವಂತೆ ತನಿಖಾ ಧಿಕಾರಿಗಳನ್ನು ಕೋರಲಾಗಿದೆ ಎಂದು ಉಪವಿಭಾಗಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.