
ರಾಯಚೂರು: ವೆನೆಜುವೆಲಾ ಮೇಲಿನ ಅಮೆರಿಕದ ಮಿಲಿಟರಿ ದಾಳಿ ಖಂಡಿಸಿ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಕಾರ್ಯಕರ್ತರು ನಗರದ ಅಂಬೇಡ್ಕರ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.
ಪಕ್ಷದ ಕೇಂದ್ರ ಸಮಿತಿ ದೇಶದಾದ್ಯಂತ ಜನವರಿ 12 ರವರೆಗೆ ಪ್ರತಿಭಟನೆ ನಡೆಸಲು ಕರೆ ನೀಡಿದ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪಕ್ಷದ ಜಿಲ್ಲಾ ಘಟಕದ ಮುಖಂಡ ಚಂದ್ರಗಿರೀಶ, ವೀರೇಶ ಎನ್.ಎಸ್, ಚನ್ನಬಸವ ಜಾನೇಕಲ್ ಮಾತನಾಡಿ,‘ಈ ದಾಳಿ ಕೇವಲ ವೆನೆಜುವೆಲಾದ ಮೇಲಷ್ಟೇ ಅಲ್ಲ. ಬದಲಾಗಿ ಇಡೀ ಲ್ಯಾಟಿನ್ ಅಮೆರಿಕದ ಮೇಲೆ ನಡೆದ ದಾಳಿಯಾಗಿದೆ. ಅಲ್ಲಿನ ಎಲ್ಲಾ ದೇಶಗಳನ್ನು ಬಂದೂಕಿನ ನಳಿಕೆಯ ಅಡಿಯಲ್ಲಿ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವುದು ಈ ದಾಳಿಯ ಹಿಂದಿನ ಉದ್ದೇಶವಾಗಿದೆ’ ಎಂದರು.
‘ಒಂದು ಸಾರ್ವಭೌಮ ರಾಷ್ಟ್ರದ ಒಳಗೆ ನುಗ್ಗುವುದು, ಸಾಂವಿಧಾನಿಕವಾಗಿ ಆಯ್ಕೆಯಾದ ನಾಯಕರನ್ನು ಅಪಹರಣ ಮಾಡುವುದು ಸಾಮಾನ್ಯವಾಗಿ ಬಿಟ್ಟರೆ ಜಗತ್ತಿನ ಯಾವುದೇ ಸಾರ್ವಭೌಮ ರಾಷ್ಟ್ರಗಳಿಗೂ ಭದ್ರತೆ ಇಲ್ಲದಂತಾಗುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಭಾರತ ಸರ್ಕಾರವೂ ಈ ದಾಳಿಯನ್ನು ಖಂಡಿಸಬೇಕು. ಭಾರತ ಸರ್ಕಾರ ಅಮೆರಿಕದ ದಾಳಿಯನ್ನು ಖಂಡಿಸದೆ ಅದರ ಪರವಾಗಿ ಮೃದು ಧೋರಣೆ ತಳೆದಿರುವುದು ಖಂಡನೀಯ’ ಎಂದರು.
‘ವೆನೆಜುವೆಲಾ ದಾಳಿಯ ವಿರುದ್ಧ ಎಲ್ಲಾ ಸಾಮ್ರಾಜ್ಯಶಾಹಿ ವಿರೋಧಿ, ಯುದ್ಧ ವಿರೋಧಿ ಮತ್ತು ಶಾಂತಿಪ್ರಿಯ ಜನರು ತಕ್ಷಣವೇ ಪ್ರತಿಭಟನೆಗೆ ಎದ್ದು ನಿಲ್ಲಬೇಕು. ದಾಳಿಗೊಳಗಾದ ವೆನೆಜುವೆಲಾದ ಜನರ ಪರವಾಗಿ ನಿಲ್ಲಬೇಕು’ ಎಂದು ಒತ್ತಾಯಿಸಿದರು.
ಪಕ್ಷದ ಸದಸ್ಯರಾದ ಅಣ್ಣಪ್ಪ, ಪ್ರಮೋದ, ಮಲ್ಲನಗೌಡ, ಹಯ್ಯಾಳಪ್ಪ, ಬಸವರಾಜ, ರೆಹಾನ್, ವೆಂಕಯ್ಯ, ವೀರಭದ್ರಯ್ಯ ಸ್ವಾಮಿ, ನರಸಪ್ಪ, ಮಹೇಂದ್ರ ಸಿಂಗ್, ವೀರಪ್ಪ ಪಾಟೀಲ, ಮಹಾಂತೇಶ ಹಾಗೂ ಗೌಸ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.