ADVERTISEMENT

ದೇವರ ಮೂರ್ತಿಗೆ ವಿಶೇಷ ಅಲಂಕಾರ: ಸರಳ ಸೂಗೂರೇಶ್ವರ ಜೋಡು ರಥೋತ್ಸವ

ಕಳಸ, ಛತ್ರಿ ಅರೋಹಣ, ಮೊಳಗಿದ ಜಯಘೋಷ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 3:35 IST
Last Updated 21 ಡಿಸೆಂಬರ್ 2020, 3:35 IST
ಶಕ್ತಿನಗರದ ದೇವಸೂಗೂರು ಸೂಗೂರೇಶ್ವರ ಸ್ವಾಮಿಯ ದೇವಸ್ಥಾನದ ಜೋಡು ರಥೋತ್ಸವ ಭಾನುವಾರ ನಡೆಯಿತು
ಶಕ್ತಿನಗರದ ದೇವಸೂಗೂರು ಸೂಗೂರೇಶ್ವರ ಸ್ವಾಮಿಯ ದೇವಸ್ಥಾನದ ಜೋಡು ರಥೋತ್ಸವ ಭಾನುವಾರ ನಡೆಯಿತು   

ಶಕ್ತಿನಗರ: ಕೋವಿಡ್‌–19 ತಡೆಯುವ ನಿಟ್ಟಿನಲ್ಲಿ ದೇವಸೂಗೂರು ಗ್ರಾಮದ ಆರಾಧ್ಯದೈವ ಸೂಗೂರೇಶ್ವರ ಸ್ವಾಮಿಯ ದೇವಸ್ಥಾನದ ಜಾತ್ರಾ ಮಹೋತ್ಸವ ಪ್ರಯುಕ್ತ ಭಾನುವಾರ ಬೆಳಿಗ್ಗೆ ಜೋಡು ರಥೋತ್ಸವ ಸರಳವಾಗಿ ನಡೆಯಿತು.

ಪ್ರತಿ ವರ್ಷ ಸಂಜೆ ನಡೆಯುತ್ತಿದ್ದ ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಿದ್ದರು. ಈ ವರ್ಷ ಸಾರ್ವಜನಿಕರ ಹಾಗೂ ಭಕ್ತಾಧಿಗಳ ಹಿತದೃಷ್ಟಿಯಿಂದ ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಸೂಗೂರೇಶ್ವರ ಸ್ವಾಮಿಯ ರಥೋತ್ಸವ ರದ್ದುಗೊಳಿಸಲಾಗಿದೆ ಎಂದು ಜಿಲ್ಲಾಡಳಿತ ವತಿಯಿಂದ ಎಲ್ಲೆಡೆ ಬ್ಯಾನರ್‌ಗಳನ್ನು ಹಾಕಲಾಗಿತ್ತು.

ದೇವಸ್ಥಾನದ ಆವರಣದಲ್ಲಿ 10 ರಿಂದ 15 ಅಡಿ ಜಾಗದಲ್ಲಿ ಜೋಡು ರಥೋತ್ಸವ ಎಳೆಯಲು ಅನುವು ಮಾಡಲಾಗಿತ್ತು.
ಅದರ ಸುತ್ತಮುತ್ತ ಯಾರು ಹೋಗದಂತೆ ಕಟ್ಟಿಗೆಗಳು ಕಟ್ಟಲಾಗಿತ್ತು. ಆ ಜಾಗದೊಳಗೆ ಪ್ರತಿ ವರ್ಷ ನಡೆಯುವ ಸಂಪ್ರದಾಯದಂತೆ ಜೋಡು ರಥೋತ್ಸವ ನಡೆದಿದೆ ಎಂದು ಉಪವಿಭಾಗಧಿಕಾರಿ ಸಂತೋಷ ಕಾಮನಗೌಡ ಅವರು ಹೇಳಿದರು.

ADVERTISEMENT

ಛಟ್ಟಿ ಅಮಾವಾಸ್ಯೆಯಿಂದಲೇ ಜಾತ್ರಾ ಮಹೋತ್ಸವನ್ನು ಆರಂಭಗೊಂಡಿತು.

ಸಂಪ್ರದಾಯದಂತೆ ವಿಶೇಷ ಪೂಜಾ ಕೈಂಕರ್ಯಗಳನ್ನು ಸರಳವಾಗಿ ನಡೆಸಲಾಯಿತು. ಭಾನುವಾರ ಜೋಡು ರಥೋತ್ಸವ ನಿಮಿತ್ಯ ಬೆಳಿಗ್ಗೆ ದೇವಸ್ಥಾನದ ಗರ್ಭಗುಡಿಯಲ್ಲಿ ದೇವರ ಮೂರ್ತಿಗೆ ಹೂವಿನ ಅಲಂಕಾರ ಮಾಡಲಾಗಿತ್ತು. ಸ್ಥಳೀಯ ಗ್ರಾಮದ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ನೈವೇದ್ಯ, ಕಾಯಿ ಕರ್ಪೂರಗಳನ್ನು ನೀಡಿ ದೇವರ ದರ್ಶನ ಪಡೆದರು.

ಬೆಳಿಗ್ಗೆ 6 ಗಂಟೆಗೆ ಸೂಗೂರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಜೋಡು ರಥಗಳಿಗೆ ಪೂಜೆ ಸಲ್ಲಿಸಲಾಯಿತು.

ರಥಕ್ಕೆ ವೈವಿಧ್ಯಮಯ ಹೂಗಳು ಹಾಗೂ ತಳಿರು ತೋರಣದಿಂದ ಅಲಂಕಾರ ಮಾಡಲಾಗಿತ್ತು. ಕಳಸ ಮತ್ತು ಛತ್ರಿ ಅರೋಹಣ ಮಾಡಲಾಯಿತು. ಸೂಗೂರೇಶ್ವರ ಸ್ವಾಮಿಯ ಮೂರ್ತಿಯೊಂದಿಗೆ ಅರ್ಚಕರು ರಥದಲ್ಲಿ ಅಸೀನರಾಗುತ್ತಿದ್ದಂತೆ, ನೆರೆದಿದ್ದ ಭಕ್ತರು ದೇವರ ಜಯಘೋಷಣೆಗಳ ಸಮೇತ ರಥವನ್ನು ಸೀಮಿತವಾದ ಜಾಗದೊಳಗೆ ಎಳೆದು ಭಕ್ತಿ ಭಾವ ಮೆರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.