ADVERTISEMENT

ರಾಯಚೂರು: 20 ವರ್ಷಗಳ ದಾಖಲೆಯತ್ತ ಬಿಸಿಲು! ರಾಸುಗಳ ರಕ್ಷಣೆಗೆ ಬಟ್ಟೆ ಹೊದಿಕೆ

ಹಗಲಿನಲ್ಲಿ ಸೂರ್ಯನಿಂದ ನೇರ ಶಾಖ, 44 ಡಿಗ್ರಿ ಸೆಲ್ಸಿಯಸ್‌ನತ್ತ ತಾಪಮಾನ ರಾತ್ರಿಯಾದರೆ ಪರೋಕ್ಷ...

ನಾಗರಾಜ ಚಿನಗುಂಡಿ
Published 19 ಏಪ್ರಿಲ್ 2019, 10:04 IST
Last Updated 19 ಏಪ್ರಿಲ್ 2019, 10:04 IST
ರಾಯಚೂರಿನಲ್ಲಿ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಗೋವಿನ ಮೈಮೇಲೆ ಬಟ್ಟೆ ಕಟ್ಟಿರುವುದು ಗಮನ ಸೆಳೆಯಿತು
ರಾಯಚೂರಿನಲ್ಲಿ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಗೋವಿನ ಮೈಮೇಲೆ ಬಟ್ಟೆ ಕಟ್ಟಿರುವುದು ಗಮನ ಸೆಳೆಯಿತು   

ರಾಯಚೂರು: ದಿನದಿಂದ ದಿನಕ್ಕೆ ಬಿಸಿಲು ಬೇಗೆ ಹೆಚ್ಚಾಗುತ್ತಿದ್ದು, ಗರಿಷ್ಠ 44 ಡಿಗ್ರಿ ಸೆಲ್ಸಿಯಸ್‌ ತಾಪಮಾನದತ್ತ ಸಾಗಿದೆ. 20 ವರ್ಷಗಳ ಹಿಂದೆ ಏಪ್ರಿಲ್‌ನಲ್ಲಿ ಆಗಿದ್ದ ದಾಖಲೆ ಈ ವರ್ಷ ಮತ್ತೆ ಪುನಾವರ್ತನೆಯಾಗುವ ಸಾಧ್ಯತೆ ಇದೆ. ಇನ್ನುಬಿಸಿಲಿನಿಂದ ರಕ್ಷಿಸಲುಗೋವಿನ ಮೈಮೇಲೆ ಬಟ್ಟೆ ಕಟ್ಟಿರುವುದು ಗಮನ ಸೆಳೆಯಿತು.

ಕಳೆದ ವರ್ಷ ಏಪ್ರಿಲ್‌ನಲ್ಲಿ ಗರಿಷ್ಠ ತಾಪಮಾನವು 42.3 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಈ ಸಲ 42 ಡಿಗ್ರಿ ಸೆಲ್ಸಿಯಸ್‌ ಮಟ್ಟಕ್ಕೆ ಈಗಾಗಲೇ ತಲುಪಿದ್ದು, ಇನ್ನೊಂದು ವಾರದಲ್ಲಿ 43 ಡಿಗ್ರಿ ಸೆಲ್ಸಿಯಸ್‌ಗೆ ತಾಪಮಾನ ತಲುಪಲಿದೆ ಎನ್ನುವುದು ಹವಾಮಾನ ಇಲಾಖೆಯ ಮುನ್ಸೂಚನೆಯಲ್ಲಿದೆ.

ಬಿಸಿಲು ಬಾಧೆಯಿಂದ ಪಾರಾಗಲು ಜನರು ಹಾಗೂ ಜಾನುವಾರು ಈಗಾಗಲೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರು ಸಾಕಾಗುತ್ತಿಲ್ಲ. ಸಂಗ್ರಹಿಸಿಕೊಂಡಿರುವ ನೀರು ವೇಗವಾಗಿ ಖಾಲಿಯಾಗುತ್ತಿದ್ದು, ಮುಂದಿನ ತಿಂಗಳು ಬಿಸಿಲಿನ ಬವಣೆ ಇನ್ನಷ್ಟು ಬಾಧಿಸಲಿದೆ.

ADVERTISEMENT

ಹಗಲು ಸೂರ್ಯನ ಶಾಖದಿಂದ ಬಿಸಿ ಹಿಡಿದಿಟ್ಟುಕೊಳ್ಳುವ ಸಿಮೆಂಟ್‌ ಕಟ್ಟಡಗಳು, ರಾತ್ರಿ ಹೊತ್ತು ಬಿಸಿಯನ್ನು ಹೊರ ಬಿಡುತ್ತವೆ. ಇದರಿಂದ ಜನವಸತಿಗಳಲ್ಲಿ ರಾತ್ರಿ ಕೂಡಾ ಸೂರ್ಯನಿಂದ ಪರೋಕ್ಷ ತಾಪಮಾನ ಉಂಟಾಗಿ ನರಳುವಂತಾಗಿದೆ. ಸಾಕಷ್ಟು ಮರಗಳು ಇಲ್ಲದೆ ಇರುವುದರಿಂದ ಗುಡ್ಡದ ಬಂಡೆಗಲ್ಲುಗಳು ಕೂಡಾ ಸೂರ್ಯ ಶಾಖಕ್ಕೆ ಬಿಸಿಯಾಗಿ, ರಾತ್ರಿ ಬಿಸಿಯನ್ನು ಹೊರ ಸೂಸುತ್ತವೆ. ಬಿಸಿಲಿನ ಸ್ಪರ್ಶವು ಸಾಮಾನ್ಯ ಜೀವನವನ್ನು ಸ್ವಲ್ಪ ಮಟ್ಟಿಗೆ ಏರುಪೇರು ಮಾಡಿದೆ.

ಪ್ರತಿದಿನ ಜನಜಂಗುಳಿ ಇರುತ್ತಿದ್ದ ರಾಯಚೂರಿನ ಏಕ್‌ಮಿನಾರ್‌ ರಸ್ತೆಯು ಶುಕ್ರವಾರ ಮಧ್ಯಾಹ್ನ ಬಿಸಿಲಿನಿಂದಾಗಿ ಜನರಿಲ್ಲದೆ ಬಿಕೋ ಎನ್ನುತ್ತಿರುವುದು

ರಸ್ತೆಗಳು ಬಿಕೋ

ಪ್ರತಿದಿನ ಬಿಸಿಲು ಗರಿಷ್ಠ ಮಟ್ಟ ತಲುಪುತ್ತಿದ್ದಂತೆ ರಸ್ತೆಗಳ ಚಿತ್ರಣ ಬದಲಾಗುತ್ತದೆ. ಮಧ್ಯಾಹ್ನ 1 ಗಂಟೆಯಿಂದ 4 ಗಂಟೆಯವರೆಗೂ ಜನಸಂಚಾರ ಹಾಗೂ ವಾಹನಗಳ ಸಂಚಾರ ಎಂದಿನಂತೆ ಇರುವುದಿಲ್ಲ. ತೀರಾ ಅನಿವಾರ್ಯ ಕೆಲಸಗಳಿಗಾಗಿ ಮಾತ್ರ ಜನರು ಹೊರಗೆ ಬರುತ್ತಾರೆ. ತಾಪಮಾನದಿಂದ ಬಸವಳಿದು ನೀರು ಹಾಗೂ ನೆರಳು ಇರುವಲ್ಲಿ ಜನರು ವಿಶ್ರಾಂತಿ ತೆಗೆದುಕೊಳ್ಳುತ್ತಾರೆ.

ವ್ಯಾಪಾರಿಗಳು ಹೈರಾಣ

ಜೀವನೋಪಾಯಕ್ಕಾಗಿ ಬೀದಿ ವ್ಯಾಪಾರ ಮಾಡುವವರು ಬಿಸಿಲಿನಿಂದ ಬಸವಳಿಯುಂತಾಗಿದೆ. ಸ್ಟೇಷನ್‌ ವೃತ್ತ, ಆಶಾಪುರ ಮಾರ್ಗ, ಸೂಪರ್‌ ಮಾರ್ಕೆಟ್‌, ಸರಾಫ್‌ ಬಜಾರ್‌, ಚಂದ್ರಮೌಳೇಶ್ವರ ವೃತ್ತ ಹಾಗೂ ಎಪಿಎಂಸಿ ಸುತ್ತಮುತ್ತ ಬೀದಿ ವ್ಯಾಪಾರಿಗಳು ಗ್ರಾಹಕರಿಗಾಗಿ ಬಿಸಿಲಿನಲ್ಲಿ ಕಾದು ಕುಳಿತುಕೊಳ್ಳುತ್ತಾರೆ. ಬಿಸಿಲಿನ ಬಾಧೆಗೆ ತರಕಾರಿ ವ್ಯಾಪಾರಿಗಳು ನಷ್ಟಕ್ಕೀಡಾಗುತ್ತಿದ್ದಾರೆ. ಬೇಗ ಮಾರಾಟವಾದರೆ ಮಾತ್ರ ಹಾಕಿದ ದುಡ್ಡು ವಾಪಸ್‌ ಬರುತ್ತದೆ. ಇಲ್ಲದಿದ್ದರೆ ತರಕಾರಿ ಜೀವ ಕಳೆದುಕೊಳ್ಳುತ್ತವೆ. ನೀರು ಸಂಪಡಿಸಿದರೂ ಎರಡು ದಿನ ಮಾತ್ರ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

‘ಹೊಟ್ಟೆ ಪಾಡಿಗಾಗಿ ತರಕಾರಿ ವ್ಯಾಪಾರ ಮಾಡುತ್ತಿದ್ದೇವೆ. ಬಿಸಿಲು ಬಹಳ ಇದೆ. ಅದಕ್ಕಾಗಿ ತಲೆ ಸುತ್ತು ಬರುವಂತಾಗಿದೆ’ ಎಂದು ಸ್ಟೇಷನ್‌ ವೃತ್ತದಲ್ಲಿ ತರಕಾರಿ ಮಾರಾಟ ಮಾಡುವ ಜಾಗದಲ್ಲೆ ನಿದ್ರೆಗೆ ಜಾರಿದ್ದ ನರಸಮ್ಮ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.