ADVERTISEMENT

ನ್ಯಾಯಮೂರ್ತಿ ಮೇಲೆ ಶೂ ಎಸೆಯಲು ಯತ್ನ: ವಕೀಲ ರಾಕೇಶ್ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 6:04 IST
Last Updated 9 ಅಕ್ಟೋಬರ್ 2025, 6:04 IST
ರಾಯಚೂರು ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿ ವಕೀಲರು ಜಿಲ್ಲಾಧಿಕಾರಿ ನಿತೀಶ್ ಅವರಿಗೆ ಮನವಿ ಸಲ್ಲಿಸಿದರು
ರಾಯಚೂರು ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿ ವಕೀಲರು ಜಿಲ್ಲಾಧಿಕಾರಿ ನಿತೀಶ್ ಅವರಿಗೆ ಮನವಿ ಸಲ್ಲಿಸಿದರು   

ರಾಯಚೂರು: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮೇಲೆ ವಕೀಲರೊಬ್ಬರು ಶೂ ಎಸೆಯಲು ಯತ್ನಿಸಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಜಿಲ್ಲೆಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದವು.

ರಾಯಚೂರು ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಇಂಥ ಕೃತ್ಯವು ರಾಷ್ಟ್ರದ ಅತ್ಯುನ್ನತ ನ್ಯಾಯಾಂಗ ಸಂಸ್ಥೆಗೆ ತೋರಿದ ಅಗೌರವವಾಗಿದೆ. ಸಂವಿಧಾನ ಪ್ರಾಧಿಕಾರವನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನವೂ ಖಂಡನೀಯ ಎಂದು ಹೇಳಿದರು.

ಸಂಘದ ವಕೀಲರು ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದು ಆಕ್ರೋಶ ಹೊರ ಹಾಕಿದರು.

ADVERTISEMENT

ನವದೆಹಲಿಯ ಸುಪ್ರೀಂ ಕೋರ್ಟ್‌ನಲ್ಲಿ ವಕೀಲ ವೃತ್ತಿ ಮಾಡುತ್ತಿರುವ ವಕೀಲ ರಾಕೇಶ್ ಕಿಶೋರ್ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಅವರು ಜಿಲ್ಲಾಧಿಕಾರಿ ನಿತೀಶ್‌ ಅವರಿಗೆ ಮನವಿಪತ್ರ ಸಲ್ಲಿಸಿದರು.

ಸಂಘದ ಕಾರ್ಯದರ್ಶಿ ಲಕ್ಷ್ಮಪ್ಪ ಭಂಡಾರಿ, ಉಪಾಧ್ಯಕ್ಷ ನಜೀರ್ ಅಹ್ಮದ್ ಶೇರ್‌ಅಲಿ, ಹಿರಿಯ ವಕೀಲರಾದ ಶ್ರೀಕಾಂತ, ಮಸ್ಕಿ ನಾಗರಾಜ, ರಾಜ ಪಾಂಡುರಂಗ ನಾಯಕ, ಜಗದೀಶ, ಎನ್. ಶಿವಶಂಕರ, ಅಂಬಾಪತಿ ಪಾಟೀಲ, ಮೊಹಮ್ಮದ್ ಸುಲ್ತಾನ್, ವೀರಭದ್ರ, ಕರುಣಾಕರ ಕಟ್ಟಿಮನಿ, ಸೈಯದ್ ನವಾಜ್ ಪಾಷಾ, ಮುನ್ನ ಕುಮಾರ, ಎಸ್.ಜಿ.ಮಠ, ರಾಮನಗೌಡ, ಜಿ.ಟಿ.ರೆಡ್ಡಿ ಹಾಗೂ ಪ್ರಭಾಕರ ಹಾಜರಿದ್ದರು.

ಮುಸ್ಲಿಮೀನ್ ಯುವ ಘಟಕ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮೇಲೆ ವಕೀಲರೊಬ್ಬರು ಶೂ ಎಸೆಯಲು ಯತ್ನಿಸಿರುವುದನ್ನು ಖಂಡಿಸಿ ಹಾಗೂ ವಕೀಲನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆಲ್‌ ಇಂಡಿಯಾ ಮಜ್ಲಿಸ್‌–ಎ–ಇತ್ತೆಹಾದುಲ್‌ ಮುಸ್ಲಿಮೀನ್ ಯುವ ಘಟಕದ ಅಧ್ಯಕ್ಷ ಶೇಖಶೈಲಾಜ್‌ ಖಾನ್‌ ನೇತೃತ್ವದಲ್ಲಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಕೃತ್ಯ ಎಸಗಿರುವ ಆರೋಪಿಗೆ ಶಿಕ್ಷೆ ವಿಧಿಸದಿದ್ದರೆ ಸಮಾಜ ವಿರೋಧಿ ಚಟುವಟಿಕೆಗಳು ಗರಿ ಬಿಚ್ಚಿಕೊಳ್ಳಲಿವೆ. ಪ್ರಜಾಪ್ರಭುತ್ವ ಹಾಗೂ ಧರ್ಮನಿರಪೇಕ್ಷದ ಅಡಿಪಾಯವನ್ನು ಅಲುಗಾಡಿಸಲಿದೆ ಎಂದು ಎಚ್ಚರಿಸಿದರು.

ಮಹಮ್ಮದ್ ಮನ್ಸೂರ್‌ ಅಲಿ, ಶಬ್ಬೀರ್‌ ಅಹಮ್ಮದ್‌ ಹೌದಡಿ, ತಬರೇಜ್‌ ಬೇಗ್, ಅಲ್ತಾಫ್ ಹುಸೇನ್, ಸಲ್ಮಾನ್‌, ಅಲ್ಥಾಫ್ ಉಪಸ್ಥಿತರಿದ್ದರು.

ರಾಯಚೂರಿನ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ದಲಿತಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು

ದಲಿತ ಸಂಘಟನೆಗಳ ಪ್ರತಿಭಟನೆ

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆಯಲು ಪ್ರಯತ್ನಿಸಿದ ವಕೀಲನ ವಿರುದ್ದ ದೇಶದ್ರೋಹ ಹಾಗೂ ಕೊಲೆಯತ್ನ ಪ್ರಕರಣ ದಾಖಲಿಸಬೇಕು. ಆರೋಪಿಯನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ದಲಿತ ಸಂಘಟನೆಗಳು ಮಹಿಳಾ ಸಂಘಟನೆಯ ಹೋರಾಟಗಾರರು ಹಾಗೂ ರಾಜ್ಯ ಛಲವಾದಿ ಮಹಾಸಭಾದ ಸದಸ್ಯರು ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿರೂಪಾಕ್ಷಿ ರವೀಂದ್ರನಾಥ ಪಟ್ಟಿ ಎಂ.ಆರ್.ಭೇರಿ ರವಿಕುಮಾರ ರಾಂಪೂರು ವಿಜಯರಾಣಿ ವಕೀಲ ತಮ್ಮಣ್ಣ ಹಾಗೂ ಹೇಮರಾಜ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.