ಸಿಂಧನೂರು: ‘ಅಂಬಾಮಠದ ಅಂಬಾದೇವಿ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಜಿಲ್ಲಾಡಳಿತ, ತಾಲ್ಲೂಕಾಡಳಿತ ಹಾಗೂ ಪೊಲೀಸ್ ಇಲಾಖೆ ಪ್ರಾಣಿಬಲಿ ತಡೆಗೆ ಮುಂದಾಗಬೇಕು’ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಪಶು ಪ್ರಾಣಿಬಲಿ ನಿರ್ಮೂಲನಾ ಜಾಗೃತಿ ಮಹಾಸಂಘದ ಅಧ್ಯಕ್ಷ ದಯಾನಂದ ಸ್ವಾಮೀಜಿ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು,‘ರಾಜ್ಯದ 36 ಸಾವಿರ ದೇವಾಲಯಗಳು ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿವೆ. ಅಂಬಾಮಠದ ಅಂಬಾದೇವಿ ದೇವಸ್ಥಾನವೂ ಅದರಲ್ಲಿ ಒಂದಾಗಿದೆ. 1959ರಲ್ಲಿಯೇ ರಾಜ್ಯವನ್ನು ಪ್ರಾಣಿಬಲಿ ಮುಕ್ತ ರಾಜ್ಯವೆಂದು ಘೋಷಣೆ ಮಾಡಲಾಗಿದೆ. ಅದಾಗಿ ಇಂದಿಗೆ 65 ವರ್ಷಗಳಾಗಿವೆ. ಸರ್ಕಾರದ ವ್ಯಾಪ್ತಿಯ ದೇವಸ್ಥಾನಗಳಲ್ಲಿಯೇ ಪ್ರಾಣಿಬಲಿ ನಡೆದು ರಕ್ತದ ಕಾಲುವೆ ಹರಿಯುತ್ತಿರುವುದು ದುರಂತದ ಸಂಗತಿ’ ಎಂದರು.
ಸರ್ಕಾರದ ವ್ಯಾಪ್ತಿಯ 36 ಸಾವಿರ ಹಾಗೂ 2 ಲಕ್ಷ ಖಾಸಗಿ ದೇವಸ್ಥಾನಗಳಲ್ಲಿ ಪ್ರತಿವರ್ಷ 1.5 ಕೋಟಿ ಕುರಿ, ಕೋಳಿ, ಆಕಳು, ಕೋಣ, ಹಂದಿ ಮತ್ತಿತರ ಪ್ರಾಣಿ, ಪಕ್ಷಿಗಳ ಮಾರಣಹೋಮ ನಡೆಯುತ್ತಿದೆ. ದೇವಸ್ಥಾನಗಳ ಪಾವಿತ್ರ್ಯತೆ ಹಾಳಾಗಿದೆ. ಜೊತೆಗೆ ಸಾರ್ವಜನಿಕರಿಗೆ ಸೋಂಕು ತಗಲುತ್ತಿದೆ ಎಂದು ಹೇಳಿದರು.
ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯಿಂದ ರಾಜ್ಯದಲಿ 4 ಕೋಟಿ ಪ್ರಾಣಿ ಬಲಿಯನ್ನು ತಡೆ ಹಿಡಿಯಲಾಗಿದೆ. ಕರ್ನಾಟಕ ಅಷ್ಟೇ ಅಲ್ಲದೆ ಆಂಧ್ರಪ್ರದೇಶ, ತೆಲಂಗಾಣ, ಅಸ್ಸಾಂ, ನಾಗಾಲ್ಯಾಂಡ್, ನೇಪಾಳದಲ್ಲೂ ಪ್ರಾಣಿಬಲಿ ತಡೆ ಕುರಿತು ಜಾಗೃತಿ ಮೂಡಿಸಲಾಗಿದೆ. ಅದರಂತೆ ತಾವು ಅಂಬಾಮಠಕ್ಕೆ ಹೋಗಿ ಸರ್ವೆ ನಡೆಸಿ, ಜಿಲ್ಲಾಧಿಕಾರಿ, ತಹಶೀಲ್ದಾರ್, ಪೊಲೀಸ್ ವರಿಷ್ಠಾಧಿಕಾರಿ, ಸರ್ಕಲ್ ಇನ್‌ಸ್ಪೆಕ್ಟರ್ ಅವರೊಂದಿಗೆ ಚರ್ಚಿಸಿದ್ದೇನೆ. ಕೂಡಲೇ ಜಾಗೃತರಾಗಿ ಅಂಬಾಮಠದ ಅಂಬಾದೇವಿ ಜಾತ್ರೆಯಲ್ಲಿ ಪ್ರಾಣಿಬಲಿಯನ್ನು ತಡೆ ಹಿಡಿಯಲು ಕ್ರಮ ವಹಿಸಬೇಕು. ಇಲ್ಲದಿದ್ದರೆ ಅಧಿಕಾರಿಗಳನ್ನೇ ಹೊಣೆ ಮಾಡಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.