ADVERTISEMENT

ರಾಯಚೂರು | ಹೊಸ ಕೃಷಿ ಕಾಲೇಜು, ಕೆವಿಕೆ ಸ್ಥಾಪಿಸುವ ಗುರಿ: ಡಾ.ಎಂ.ಹನುಮಂತಪ್ಪ

ರಾಯಚೂರು ಕೃಷಿ ವಿಜ್ಞಾನಗಳ ವಿವಿ ನೂತನ ಕುಲಪತಿ ಡಾ.ಎಂ.ಹನುಮಂತಪ್ಪ

ನಾಗರಾಜ ಚಿನಗುಂಡಿ
Published 3 ಡಿಸೆಂಬರ್ 2022, 8:39 IST
Last Updated 3 ಡಿಸೆಂಬರ್ 2022, 8:39 IST
ಡಾ.ಹನುಮಂತಪ್ಪ
ಡಾ.ಹನುಮಂತಪ್ಪ   

ರಾಯಚೂರು: ‘ದೇಶದಲ್ಲಿರುವ 77 ಕೃಷಿ ವಿಶ್ವವಿದ್ಯಾಲಯಗಳಿಗೆ ಹೋಲಿಸಿದರೆ ನಮ್ಮ ವಿಶ್ವವಿದ್ಯಾಲಯದ ರ‍್ಯಾಂಕಿಂಗ್‌ 25ನೇ ಸ್ಥಾನದಲ್ಲಿದೆ. ರ‍್ಯಾಂಕಿಂಗ್‌ನಲ್ಲಿ ಮತ್ತಷ್ಟು ಉನ್ನತ ಸ್ಥಾನಕ್ಕೆರಲು ಪ್ರಯತ್ನಿಸಲಾಗುವುದು. ಬೀದರ್‌ ಅಥವಾ ಚಿಂಚೋಳಿಯಲ್ಲಿ ನೂತನ ಅರಣ್ಯ ಕಾಲೇಜು ಹಾಗೂ ಹೊಸ ಜಿಲ್ಲೆ ವಿಜಯನಗರದಲ್ಲಿ ಕೃಷಿ ವಿಜ್ಞಾನ ಕೇಂದ್ರ ಸ್ಥಾಪಿಸುವುದು ನನ್ನ ಮುಂದಿರುವ ಗುರಿಗಳಾಗಿವೆ‘ ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ನೂತನ ಕುಲಪತಿ ಡಾ.ಎಂ.ಹನುಮಂತಪ್ಪ ತಿಳಿಸಿದರು.

ನೂತನವಾಗಿ ಜವಾಬ್ದಾರಿ ವಹಿಸಿಕೊಂಡ ಅವರ ಅನುಭವ ಕೇಳುವುದಕ್ಕೆ ‘ಪ್ರಜಾವಾಣಿ’ ಭೇಟಿ ಮಾಡಿದಾಗ ವಿವರ ನೀಡಿದರು.

‘ಮೂಲ ಕಲ್ಯಾಣ ಕರ್ನಾಟಕ ಭಾಗದವನಾದರೂ ಬೆಳಗಾವಿ, ಧಾರವಾಡ ಸೇರಿದಂತೆ ಮಧ್ಯ ಹಾಗೂ ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ನಿವೃತ್ತಿಯ ಕೊನೆಯ ವರ್ಷಗಳಲ್ಲಿ ರಾಯಚೂರಿನಲ್ಲಿ ಕುಲಪತಿಯಾಗಿ ಕಾರ್ಯನಿರ್ವಹಿಸುವ ಯೋಗ ಕೂಡಿಬಂದಿದೆ’ ಎಂದರು.

ADVERTISEMENT

‘ಬೇಸಾಯಶಾಸ್ತ್ರದಲ್ಲಿ ಅಧ್ಯಯನ ಮಾಡಿದ್ದು, ತೆಂಗು, ಅಡಿಕೆ, ಎಳ್ಳು, ರಾಗಿ, ಹೆಸರು ಹೆಚ್ಚಿನ ಅಧ್ಯಯನ,

ತೆಂಗಿನಲ್ಲಿ ಅಂತರಬೆಳೆ ಬೆಳೆಯುವ ಕುರಿತು ಸಂಶೋಧನೆ ಹಾಗೂ ಹವಾಮಾನ ಬಲಾವಣೆ, ಹನಿನೀರಾವರಿ ಕುರಿತು ಅಧ್ಯಯನವಾಗಿದೆ. ರಾಯಚೂರಿನಲ್ಲಿ ನಾಲ್ಕು ವರ್ಷ ಪೂರ್ಣಾವಧಿ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತೇನೆ’ ಎಂದು ತಿಳಿಸಿದರು.

‘ಹಗರಿ ಹಾಗೂ ಗಂಗಾವತಿಗಳಲ್ಲಿ ಹೊಸ ಕೃಷಿ ಕಾಲೇಜುಗಳನ್ನು ತೆರೆಯಲಾಗಿದ್ದು, ಅವುಗಳನ್ನು ಸದೃಢಗೊಳಿಸಲು ಆದ್ಯತೆ ನೀಡುತ್ತೇನೆ. ಕೆಲವು ಸಂಶೋಧನಾ ಕೇಂದ್ರಗಳನ್ನು ಬಲಪಡಿಸಬೇಕಿದೆ. ಕೆಲವೊಂದು ಈಗಾಗಲೇ ಚೆನ್ನಾಗಿ ಕಾರ್ಯನಿರ್ವಹಿಸುತ್ತಿವೆ. ಲಭ್ಯವಿರುವ ಮಾನವಸಂಪನ್ಮೂಲ ಸಾಕಾಗುತ್ತಿಲ್ಲ. ನೇಮಕಾತಿ ಪ್ರಕ್ರಿಯೆ ನಡೆಸುವುದು ಸದ್ಯಕ್ಕೆ ಕಷ್ಟಸಾಧ್ಯ. ಲಭ್ಯವಿರುವ ಮಾನವ ಸಂಪನ್ಮೂಲದಲ್ಲೇ ಸುಧಾರಣೆಗಳನ್ನು ಜಾರಿಗೊಳಿಸಬೇಕಿದೆ’

‘ರಾಯಚೂರಿನಲ್ಲಿ ಉತ್ತಮವಾದ ಕೃಷಿ ಎಂಜಿನಿಯರಿಂಗ್‌ ಕಾಲೇಜು ಕೂಡಾ ಇದೆ. ಪ್ರಯೋಗಾಲಯ ಕೂಡಾ ದೇಶದಲ್ಲೇ ಅತ್ಯುತ್ತಮವಾದುಗಳಲ್ಲಿ ಒಂದಾಗಿದೆ. ಸಾಕಷ್ಟು ನಮೂನೆಗಗಳು ಬರುತ್ತಿವೆ. ಮುಂದಿನ ಕೆಲವು ತಿಂಗಳುಗಳಲ್ಲಿ ಆಹಾರ ನಮೂನೆಗಳ ಪ್ರಯೋಗಾಲಯ ಕೂಡಾ ಪ್ರಾರಂಭವಾಗಲಿದೆ. ಜೈವಿಕ ಕೀಟನಾಶಕ ಪ್ರಯೋಗಾಲಯ ಇನ್ನಷ್ಟು ಸದೃಢಗೊಳಿಸಲಾಗುವುದು. ಈ ಪ್ರಯೋಗಾಲಯದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೂಕ್ಷ್ಮಾಣು ಜೀವಿಗಳನ್ನು ಅಭಿವೃದ್ಧಿಗೊಳಿಸಲಾಗುವುದು‘ ಎಂದರು.

‘ಆಂತರಿತ ಸಂಪನ್ಮೂಲಗಳನ್ನು ಆಧರಿಸಿ ಆದಾಯ ಹೆಚ್ಚಿಸುವ ಸವಾಲು ಇದೆ. ರೈತರ ಸೇವೆ ವಿಸ್ತರಿಸುತ್ತಾ ಹೋದಂತೆ ವಿಶ್ವವಿದ್ಯಾಲಯಕ್ಕೂ ಅನುಕೂಲವಾಗುತ್ತದೆ. ಬೀಜಗಳ ಉತ್ಪಾದನೆ ಹೆಚ್ಚಿಸಲಾಗುವುದು. ಜೈವಿಕ ಕೀಟನಾಶಕ ಲಭ್ಯತೆ ವೃದ್ಧಿಸಲಾಗುವುದು‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.