ಹಟ್ಟಿ ಚಿನ್ನದ ಗಣಿ: ಸ್ಧಳೀಯ ಹಟ್ಟಿ ಚಿನ್ನದ ಗಣಿ ಕಾರ್ಮಿಕ ಸಂಘದ ಚುನಾವಣೆ ಜೂ.21ಕ್ಕೆ ನಿಗದಿಯಾಗಿದ್ದು, ಈ ಚುನಾವಣೆಗೆ ಗಣಿ ಕಂಪನಿ ಪರವಾಗಿರುವ ಪೆನಲ್‌ಗಳೇ ನಮ್ಮ ಎದುರಾಳಿಗಳಾಗಿವೆ. ಅವುಗಳನ್ನು ಎದುರಿಸಲು ಟಿಯುಸಿಐ ಸಂಘಟನೆ ಸಂಪೂರ್ಣ ಸಜ್ಜಾಗಿದೆ’ ಎಂದು ಟಿಯುಸಿಐ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆರ್.ಮಾನಸಯ್ಯ ಹೇಳಿದರು.
ಪಟ್ಟಣದ ಪೈ ಭವನದಲ್ಲಿ ಶನಿವಾರ ಟಿಯುಸಿಐ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
‘ಗಣಿ ಆಡಳಿತ ವರ್ಗದ ಪರವಾಗಿರುವ ಪೆನಲ್‌ಗಳೇ ಚುನಾವಣೆಯ ಕಣಕ್ಕೆ ಬರಲಿವೆ. ಕಾರ್ಮಿಕರು ಅವುಗಳಿಗೆ ತಕ್ಕ ಉತ್ತರ ನೀಡಲು ತಯಾರಾಗಿದ್ದಾರೆ. ನಾವು ಭ್ರಷ್ಟರಲ್ಲ, ಜಾತಿವಾದಿಗಳಲ್ಲ, ಗುತ್ತಿಗೆದಾರರಲ್ಲ ಹೀಗಾಗಿ ಅಂಥವರಿಗೆ ನಮ್ಮಲ್ಲಿ ಜಾಗವಿಲ್ಲ’ ಎಂದರು.
‘ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಕಸರತ್ತು ನಡೆಸಿದ್ದು, ಅವರ ಆಸೆ ಆಮೀಷಗಳಿಗೆ ಕಾರ್ಮಿಕರು ಬಲಿಯಾಗಬಾರದು’ ಎಂದು ಹೇಳಿದರು.
ಟಿಯುಸಿಐ ರಾಜ್ಯ ಘಟಕದ ಅಧ್ಯಕ್ಷ ಮಹ್ಮದ ಅಮೀರ ಅಲಿ ಮಾತನಾಡಿ, ‘ನಾವು ಅಧಿಕಾರಕ್ಕೆ ಬಂದರೆ ಮೆಡಿಕಲ್ ಅನ್‌ಫಿಟ್ ಯೋಜನೆ ಜಾರಿಗೆ ತರಲು ಪ್ರಯತ್ನಿಸುತ್ತೇವೆ. ಗುತ್ತಿಗೆ ಪದ್ಧತಿಯನ್ನು ತೊಲಗಿಸಿ, ಕಾಯಂ ಸ್ವರೂಪದ ಕೆಲಸಗಳನ್ನು ಪಡೆಯಬೇಕಾದರೆ ಹೋರಾಟವೊಂದೇ ದಾರಿ’ ಎಂದು ಹೇಳಿದರು.
‘ಮಾಹಿತಿ ಹಕ್ಕಿನಲ್ಲಿ ಸಂಬಳ ಹಂಚಿಕೆ ಬಗ್ಗೆ ಅರ್ಜಿ ಹಾಕಿದರೂ ಆಡಳಿತ ವರ್ಗ ಇದುವರೆಗೂ ಉತ್ತರ ಕೊಡದೆ ಕಾಲಹರಣ ಮಾಡುತ್ತಿದೆ. ಇವೆಲ್ಲ ವಿಷಯಗಳನ್ನು ಚುನಾವಣಾ ಬಹಿರಂಗ ಸಭೆಯಲ್ಲಿ ಮಾತನಾಡುತ್ತೇವೆ’ ಎಂದು ಹೇಳಿದರು.
ರಾಜ್ಯ ಕಾರ್ಯದರ್ಶಿ ಚಿನ್ನಪ್ಪ ಕೊಟ್ರಿಕಿ, ಸ್ಥಳೀಯ ಘಟಕದ ಅಧ್ಯಕ್ಷ ರೇವಣಸಿದ್ದಪ್ಪ, ಕಾರ್ಯದರ್ಶಿ ಡಿ.ಕೆ. ಲಿಂಗಸುಗೂರು ಉಪಸ್ಧಿತರಿದ್ದರು. ನಾಗಭೂಷಣ ಪಾಟೀಲ, ಮಹಿಬೂಬ್ ಬೈಚ್‌ಬಾಳ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.