ಸಿಂಧನೂರು: ವಿಧಾನ ಪರಿಷತ್ ನೂತನ ಸದಸ್ಯ ಬಸನಗೌಡ ಬಾದರ್ಲಿ ಅವರಿಗೆ ಸ್ವಾಗತ ಕೋರಲು ನಗರದ ಮಹಾತ್ಮ ಗಾಂಧಿ ಸರ್ಕಲ್‍ನಲ್ಲಿ ಹಾಕಿದ್ದ ಕಬ್ಬಿಣದ ಸರಳಿನ ಸ್ವಾಗತ ಕಮಾನು ಸೋಮವಾರ ಗಾಳಿಗೆ ನೆಲಕ್ಕುರುಳಿ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಎರಡು ದಿನಗಳ ಹಿಂದೆ ಕಮಾನು ಹಾಕಲಾಗಿತ್ತು. ಕಬ್ಬಿಣದ ಪೈಪ್‍ಗಳಿಗೆ ನಟ್–ಬೋಲ್ಟ್ ಹಾಕಿರಲಿಲ್ಲ. ಸಿಗ್ನಲ್ ಕಂಬಕ್ಕೆ ಬೆಂಡಿಂಗ್ ವೈರ್‌ನಿಂದ ಬಿಗಿಯಲಾಗಿತ್ತು. ಸೋಮವಾರ ಮಧಾಹ್ನ ಗಾಳಿಯ ರಭಸಕ್ಕೆ ಏಕಾಏಕಿ ಸಿಗ್ನಿಲ್ ಕಂಬ ಸಹಿತ ಕಮಾನು ನೆಲಕ್ಕುರುಳಿದೆ.
ಈ ಸಮಯದಲ್ಲಿಯೇ ಗ್ರೀನ್ ಸಿಗ್ನಲ್ ಬಿದ್ದಿದ್ದರಿಂದ ಈ ಕಮಾನಿನ ಅಡಿ ನಿಂತಿದ್ದ ವಾಹನ ಸವಾರರು ಮುಂದೆ ಸಾಗಿದ್ದರಿಂದ ಪ್ರಾಣಾಪಾಯದಿಂದ ಅನೇಕರು ಪಾರಾಗಿದ್ದಾರೆ.
ಮಸ್ಕಿ ತಾಲ್ಲೂಕಿನ ವೀರಾಪುರ ಗ್ರಾಮದ ಅಂಬಮ್ಮ ಮತ್ತು ಅವರ ಪತಿ ಯಮನಪ್ಪ ಬ್ಯಾಂಕ್ ಕೆಲಸಕ್ಕೆಂದು ಸಿಂಧನೂರಿಗೆ ಬಂದು ಪುನಃ ಸ್ವಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಕಮಾನು ಅವರ ಮೇಲೆ ಬಿದ್ದಿದೆ. ನ್ಯಾಯಾಲಯದ ಗೇಟ್ ಬಳಿ ಮಗನ ಬೈಕ್ ಹತ್ತಿ ಹೊರಟಿದ್ದ ಚಿಟ್ಟಿಬಾಬು ಬೂದಿಹಾಳ ಕ್ಯಾಂಪ್ ಅವರ ಕಾಲಿನ ಮೇಲೂ ಕಮಾನು ಬಿದ್ದಿದೆ. ಅವರ ಬೈಕ್ ಜಖಂಗೊಂಡಿದೆ.
ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಬಸವರಾಜ ಬಡಿಗೇರ್ ಅವರ ಕಾರಿನ ಮೇಲೆ ಬಿದಿದ್ದರಿಂದ ಕಾರಿನ ಎರಡು ಹೆಡ್‍ಲೈಟ್, ಬಾನಟ್ ಒಡೆದಿದ್ದು, ಎಂಜಿನ್ ಡ್ಯಾಮೇಜ್ ಆಗಿದೆ. ಇದರಿಂದ ಒಂದು ಗಂಟೆ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು.
ಸ್ಥಳಕ್ಕೆ ಬಂದ ಸಂಚಾರ ಮತ್ತು ಶಹರ ಪೊಲೀಸ್ ಠಾಣೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಾಯದಿಂದ ಮೇಲಕ್ಕೆ ಎತ್ತಿ ಗಾಯಾಳುಗಳನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು.
ನಂತರ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಶಾಂತಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಂಬಮ್ಮ ವೀರಾಪುರ (36) ಅವರಿಗೆ ಬಲಗಾಲಿನ ತೊಡೆ ಭಾಗದಲ್ಲಿ ಎಲುಬು ಮುರಿದಿದೆ. ಯಮನಪ್ಪ (40) ಅವರಿಗೆ ಎಡಭುಜದ ಎಲುಬು ಮುರಿದಿದ್ದು, ನಡುವಿಗೂ ತೀವ್ರ ಪೆಟ್ಟಾಗಿದೆ. ಚಿಟ್ಟಿಬಾಬು ಬೂದಿಹಾಳ ಕ್ಯಾಂಪ್ (54) ಅವರಿಗೆ ಬಲಗಾಲಿನ ಪಾದದ ಮೇಲ್ಭಾಗದಲ್ಲಿ ಒಳಪೆಟ್ಟಾಗಿ ಬಾವು ಬಂದಿದೆ ಎಂದು ಖಾಸಗಿ ವೈದ್ಯರು ತಿಳಿಸಿದರು.
ಆಸ್ಪತ್ರೆಯಲ್ಲಿ ವಾಗ್ವಾದ: ಮೂವರು ಗಾಯಾಳುಗಳನ್ನು ಶಾಂತಿ ಆಸ್ಪತ್ರೆಗೆ ದಾಖಲಿಸಿದಾಗ ಜಿಲ್ಲಾ ಪಂಚಾಯಿತಿ ಸದಸ್ಯ ಬಾಬುಗೌಡ ಬಾದರ್ಲಿ ಭೇಟಿ ನೀಡಿ ಸಾಂತ್ವನ ಹೇಳಿ ತೆರಳಿದರು. ಈ ವೇಳೆ ಬಾಲಸ್ವಾಮಿ ವಕೀಲ ಹಾಗೂ ಶಹರ ಪೊಲೀಸ್ ಠಾಣೆ ಸಿಬ್ಬಂದಿ ಎಂಎಲ್‍ಸಿ ಮಾಡಿಕೊಳ್ಳಲು ಗಾಯಾಳುಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಆಗ ಬಂದ ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ,‘ನಾವು ಗಾಯಾಳುಗಳಿಗೆ ತೋರಿಸುತ್ತೇವೆ. ಅದರ ಖರ್ಚು ಭರಿಸುತ್ತೇವೆ ಎಂದು ಹೇಳಿದಾಗ್ಯೂ ಕೇಸ್ ಮಾಡುತ್ತೀರೇನು. ಇದರಲ್ಲಿ ರಾಜಕೀಯ ಮಾಡಬೇಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ವಕೀಲರು, ದಲಿತ ಮುಖಂಡರು ಹಾಗೂ ಸೋಮನಗೌಡರ ನಡುವೆ ವಾಗ್ವಾದ ನಡೆಯಿತು.
ಜೀವ ಬೆದರಿಕೆ: ನಗರಸಭೆಯಿಂದ ಅನುಮತಿ ಪಡೆಯದೆ ದೊಡ್ಡ ಕಮಾನು ಹಾಕಿರುವುದು ಕಾನೂನು ಬಾಹಿರ. ಗಾಂಧಿ ವೃತ್ತದಲ್ಲಿ ಯಾವುದೇ ಸುರಕ್ಷತೆ ಕ್ರಮ ಕೈಗೊಂಡಿಲ್ಲ. ಕಮಾನು ಬಿದ್ದು ಮೂವರು ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರ ಸಹೋದರ ಸೋಮನಗೌಡ ಆಸ್ಪತ್ರೆಗೆ ಬಂದು ದೌರ್ಜನ್ಯದಿಂದ ವರ್ತಿಸಿ, ಕೇಸ್ ಮಾಡ್ರಿ ನೋಡಿಕೊಳ್ಳುತ್ತೀವಿ ಅಂತ ಜೀವ ಬೆದರಿಕೆ ಹಾಕಿದ್ದಾರೆ ಎಂದು ಬಾಲಸ್ವಾಮಿ ವಕೀಲ ಆರೋಪಿಸಿದರು.
ಅನುಮತಿ ಪಡೆದಿಲ್ಲ: ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರಿಗೆ ಸ್ವಾಗತ ಕೋರುವ ಬ್ಯಾನರ್‌ಗಳು, ಫ್ಲೆಕ್ಸ್, ಬಂಟ್ಟಿಂಗ್ಸ್ ಹಾಗೂ ಗಾಂಧಿ ವೃತ್ತದಲ್ಲಿ ಬೃಹತ್ ಗಾತ್ರದ ಸ್ವಾಗತ ಕಮಾನು ಹಾಕಲು ಅವರ ಬೆಂಬಲಿಗರು ಕೇವಲ ಅರ್ಜಿ ಸಲ್ಲಿಸಿದ್ದಾರೆ. ಆದರೆ ಶುಲ್ಕ ಪಾವತಿಸಿ ಅನುಮತಿ ಪತ್ರ ಪಡೆದುಕೊಂಡಿಲ್ಲ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.