ಸಿಂಧನೂರು: ಕಾರ್ಪೋರೇಟ್, ಕೋಮುವಾದಿ, ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಸಮರಶೀಲ ಹೋರಾಟ ನಡೆಸುವ ಉದ್ದೇಶದಿಂದ ದೇಶದ ಮೂರು ಕ್ರಾಂತಿಕಾರಿ ಪಕ್ಷಗಳನ್ನು ವಿಲೀನಗೊಳಿಸಲಾಗಿದೆ ಎಂದು ಸಿಪಿಐಎಂಎಲ್ ಕ್ರಾಂತಿಕಾರಿ ಇನ್ಸೇಟಿವ್ ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ಡಿ.ಎಚ್. ಪೂಜಾರ ತಿಳಿಸಿದ್ದಾರೆ.
ಕೊಲ್ಕತಾದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾರತೀಯ ಕ್ರಾಂತಿಗೆ ಸಂಬಂಧಿಸಿದ ಸೈದ್ಧಾಂತಿಕ, ರಾಜಕೀಯ ಮತ್ತು ಸಾಂಸ್ಥಿಕ ತತ್ವಗಳ ಆಧಾರದ ಹಿನ್ನೆಲೆಯಲ್ಲಿ ಪಿಸಿಸಿ, ಸಿಪಿಐ(ಎಂ.ಎಲ್), ಸಿಪಿಐ(ಎಂ.ಎಲ್) ಪ್ರಜಾಪಂಥ ಮತ್ತು ಸಿಪಿಎಂಎಲ್ ಕ್ರಾಂತಿಕಾರಿ ಇನ್ಸೇಟಿವ್ ಪಕ್ಷಗಳು ಪರಸ್ಪರ ಒಪ್ಪಂದ ಮಾಡಿಕೊಂಡು ವಿಲೀನವಾಗಿವೆ ಎಂದು ತಿಳಿಸಿದ್ದಾರೆ.
ಮೂರೂ ಪಕ್ಷಗಳ ನಡುವೆ ಹಲವು ಭಿನ್ನಾಭಿಪ್ರಾಯಗಳಿದ್ದರೂ ‘ಐಕ್ಯತೆ ತತ್ವದೊಂದಿಗೆ ಒಂದೇ ಅಖಿಲ ಭಾರತ ಕಮ್ಯುನಿಸ್ಟ್ ಪಕ್ಷವನ್ನು ರಚಿಸಲು ತೀರ್ಮಾನಕ್ಕೆ ಬರಲಾಗಿದೆ. ಈ ವಿಲೀನದಿಂದ ಎಲ್ಲ ಕಮ್ಯುನಿಸ್ಟ್ ಕ್ರಾಂತಿಕಾರಿ ಶಕ್ತಿಗಳನ್ನು ಒಂದುಗೂಡಿಸುವ ಮತ್ತು ಕ್ರಾಂತಿಗಾಗಿ ಸಜ್ಜುಗೊಳಿಸುವ, ಪ್ರತಿಫಲಿಸುವ ಮೊದಲ ಹೆಜ್ಜೆಯಾಗಿದೆ ಎಂದಿದ್ದಾರೆ.
ಅಖಿಲ ಭಾರತ ಐಕ್ಯತಾ ಸಮ್ಮೇಳನವು 2024ರ ಮಾರ್ಚ್ 3, 4 ಮತ್ತು 5ರಂದು ತೆಲಂಗಾಣದ ಕಮ್ಮಮ್ ಜಿಲ್ಲೆಯಲ್ಲಿ ನಡೆಯಲಿದೆ. ಮಾರ್ಚ್ 3ರಂದು ಬೃಹತ್ ಮೆರವಣಿಗೆ, ಬಹಿರಂಗ ಸಭೆ ನಡೆಯಲಿದೆ. ವಿಲೀನಗೊಂಡಿರುವ ಮೂರೂ ಪಕ್ಷಗಳ ಮುಖಂಡರು ಮಾತನಾಡಲಿದ್ದಾರೆ. ಮಾರ್ಚ್ 4 ಮತ್ತು 5ರಂದು ಪಕ್ಷದ ಕಾರ್ಯಕ್ರಮ, ಸಂವಿಧಾನ ಹಾಗೂ ರಾಜಕೀಯ ನಿರ್ಣಯದ ಕರಡುನ್ನು ಅಂತಿಮಗೊಳಿಸಲಾಗುತ್ತಿದೆ. ಭಾರತದ 22 ರಾಜ್ಯಗಳಿಂದ 300 ಪ್ರತಿನಿಧಿಗಳು ಸಂಧಾನದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.