ಹಟ್ಟಿಚಿನ್ನದಗಣಿ: ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಎಂ.ಡಿ.ಸಮ್ದಾನಿ, ಉಪಾಧ್ಯಕ್ಷರಾಗಿ ಜೆಡಿಎಸ್‌ನ ನಾಗರತ್ನ ಶರಣಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಎಂ.ಡಿ.ಸಂಮ್ದಾನಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಹಾಗೂ ಎಸ್ಟಿ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಯಾರು ಸದಸ್ಯರಿಲ್ಲದಿದ್ದರಿಂದ ಜೆಡಿಎಸ್ ಪಕ್ಷದ ನಾಗರತ್ನ ಶರಣಗೌಡ ಗುರಿಕಾರ ಅವರೂ ಅವಿರೋಧವಾಗಿ ಆಯ್ಕೆಯಾದರು. ಎಂ.ಡಿ.ಸಂಮ್ದಾನಿ ಅವರು ಪಕ್ಷೇತರರಾಗಿ ಜಯಗಳಿಸಿ ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.
ಒಟ್ಟು 13 ಜನ ಸದಸ್ಯರಲ್ಲಿ ಇಬ್ಬರು ಮೃತಪಟ್ಟಿದ್ದರಿಂದ ಸದ್ಯ 11 ಸದಸ್ಯರಿದ್ದಾರೆ. ಇದರಲ್ಲಿ 8 ಜನ ಸದಸ್ಯರು ಸಭೆಗೆ ಹಾಜರಾಗಿದ್ದರು. ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಶಂಶಾಲಂ ಕಾರ್ಯನಿರ್ವಹಿಸಿದರು.
ಪ.ಪಂ.ಕಾಂಗ್ರೆಸ್ ವಶ: ಎಂ.ಡಿ.ಸಂಮ್ದಾನಿ ಪಕ್ಷೇತರರಾಗಿ ಸದಸ್ಯರಾಗಿ ಆಯ್ಕೆಯಾಗಿದ್ದರೂ ನಂತರ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರಿಂದ ಪ.ಪಂ.ಆಡಳಿತ ಕಾಂಗ್ರೆಸ್ ವಶವಾಗಿದೆ ಎಂದು ತಾಲ್ಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ ಹೇಳಿದರು.
’ಸಂಮ್ದಾನಿಯವರ ತಾಯಿ ಕಾಂಗ್ರೆಸ್ ಪಕ್ಷದಿಂದಲೇ ಜಿ.ಪಂ.ಸದಸ್ಯರಾಗಿದ್ದರು. ಇವರ ಹಿರಿಯ ಪುತ್ರ ಅಮ್ಜದ್ ಹುಸೇನ್ ಸೇಠ್ ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದಾರೆ. ಹೀಗಾಗಿ ಪ.ಪಂ.ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಕ್ಷದಾಗಿದೆ. ಈ ಗೆಲವು ಮಾಜಿ ಶಾಸಕ ಡಿ.ಎಸ್.ಹೂಲಗೇರಿಯವರ ಬಣದ ಗೆಲುವಾಗಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ತಾ.ಪಂ.ಮಾಜಿ ಸದಸ್ಯ ಎಂ.ಲಿಂಗರಾಜ್, ಮುಖಂಡರಾದ ಶಿವಣ್ಣ ನಾಯಕ ಕೋಠಾ, ಅಮ್ಜದ್ ಹುಸೇನ್ ಸೇಠ್, ಬಾಬು ನಾಯಿಕೊಡಿ, ಶಂಶುದ್ದೀನ್ ಮೌಲಾಸಾಬ, ಸೈಯದ್ ಟೈಲರ್, ರಂಗನಾಥ ಮುಂಡರಿಗಿ, ಶೇಖರ ಮಾಸ್ಟರ್, ಬುಜ್ಜಾ ನಾಯಕ, ಇಸ್ಮಾಹಿಲ್ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.