ADVERTISEMENT

ಇಕ್ಕಿಟ್ಟಿನಲ್ಲಿ ಬಿಕ್ಕಟ್ಟು ಸೃಷ್ಟಿಸಿದ ಲಾರಿಗಳ ಸಂಚಾರ!

ರಾಯಚೂರಿನ ಬಾಬು ಜಗಜೀವನರರಾಂ ವೃತ್ತದಲ್ಲಿ ಸದಾ ವಾಹನದಟ್ಟಣೆ

ನಾಗರಾಜ ಚಿನಗುಂಡಿ
Published 12 ಜುಲೈ 2019, 19:30 IST
Last Updated 12 ಜುಲೈ 2019, 19:30 IST
ರಾಯಚೂರು ನಗರದಲ್ಲಿ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿರುವ ರೈಲ್ವೆ ನಿಲ್ದಾಣದ ಮುಂಭಾಗದ ಇಕ್ಕಟ್ಟಿನ ಎರಡೂ ಮಾರ್ಗಗಳಲ್ಲಿ ಲಾರಿಗಳು ಸಂಚರಿಸುತ್ತಿರುವುದು ಶುಕ್ರವಾರ ಕಂಡುಬಂತು
ರಾಯಚೂರು ನಗರದಲ್ಲಿ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿರುವ ರೈಲ್ವೆ ನಿಲ್ದಾಣದ ಮುಂಭಾಗದ ಇಕ್ಕಟ್ಟಿನ ಎರಡೂ ಮಾರ್ಗಗಳಲ್ಲಿ ಲಾರಿಗಳು ಸಂಚರಿಸುತ್ತಿರುವುದು ಶುಕ್ರವಾರ ಕಂಡುಬಂತು   

ರಾಯಚೂರು: ನಗರದ ರೈಲ್ವೆ ನಿಲ್ದಾಣದ ಮುಂಭಾಗ ಬಾಬು ಜಗಜೀವನರಾಂ ವೃತ್ತದಲ್ಲಿ ನನೆಗುದಿಗೆ ಬಿದ್ದಿದ್ದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಈಚೆಗೆ ಆರಂಭಿಸಲಾಗಿದ್ದು, ವಾಹನಗಳು ಸುಗಮವಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ.

ಕಟ್ಟಡಗಳ ತೆರವು ಬಾಕಿ ಇರುವ ಕಾರಣದಿಂದ ಹೆದ್ದಾರಿ ವೃತ್ತದಲ್ಲಿರುವ ತಿರುವು ಮಾತ್ರ ನಿರ್ಮಾಣ ಮಾಡುವುದು ವಿಳಂಬವಾಗಿತ್ತು. ಹೆದ್ದಾರಿ ಅಂಚಿನಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸುವ ಪ್ರಯತ್ನವನ್ನು ನಗರಸಭೆಯಿಂದ ಮಾಡಲಾಗಿತ್ತಾದ್ದರೂ ಸಾಧ್ಯವಾಗಿಲ್ಲ. ಕಿರಿದಾದ ಮಾರ್ಗದಲ್ಲಿಯೇ ವಿಭಜಕವನ್ನು ಅಳವಡಿಸಿ ಹೆದ್ದಾರಿ ಕಾಮಗಾರಿ ಆರಂಭಿಸಲಾಗಿದೆ. ಹೀಗಾಗಿ ದ್ವಿಪಥ ಮಾರ್ಗದಲ್ಲಿ ಒಂದು ವಾಹನ ಮಾತ್ರ ಸಂಚರಿಸುವುದಕ್ಕೆ ಸಾಧ್ಯವಾಗುವಷ್ಟು ಜಾಗವಿದೆ.

ಸರ್ಕಾರಿ ಬಸ್‌ಗಳು, ಬೈಕ್‌, ಕಾರುಗಳು ಹಾಗೂ ಇತರೆ ವಾಹನಗಳು ವೃತ್ತದ ಮೂಲಕ ಸಂಚರಿಸಲು ಪರದಾಡುವ ಪರಿಸ್ಥಿತಿ ಇದೆ. ಇಂಥ ಸ್ಥಿತಿಯಿದ್ದರೂ ಹಗಲು ಹೊತ್ತಿನಲ್ಲೂ ಭಾರಿ ಪ್ರಮಾಣದ ಲಾರಿಗಳು ಸಂಚರಿಸುವುದಕ್ಕೆ ಅವಕಾಶ ನೀಡಲಾಗಿದೆ. ಏಕಕಾಲಕಕ್ಕೆ ಎರಡು ಮಾರ್ಗಗಳಿಂದ ಲಾರಿಗಳು ನುಗ್ಗಿ ಬರುವುದರಿಂದ ವಾಹನಗಳ ದಟ್ಟಣೆ ಸಮಸ್ಯೆ ವಿಪರೀತವಾಗುತ್ತಿದೆ.

ADVERTISEMENT

ಸ್ಥಳದಲ್ಲಿಇಬ್ಬರು ಸಂಚಾರಿ ಪೊಲೀಸರನ್ನು ನಿಯೋಜನೆ ಮಾಡಿದ್ದರೂ ಸಂಚಾರ ದಟ್ಟಣೆ ನಿರ್ವಹಿಸುವುದು ದುಸ್ತರವಾಗಿದೆ. ಪೊಲೀಸರ ಕಣ್ಣು ತಪ್ಪಿಸಿ ರಸ್ತೆ ಬದಿಯಲ್ಲಿ ಬೈಕ್‌ಗಳನ್ನು ನಿಲುಗಡೆ ಮಾಡುವುದು, ಬೀದಿ ವ್ಯಾಪಾರಿಗಳು ರಸ್ತೆ ಅತಿಕ್ರಮಿಸಿ ನಿಲ್ಲುತ್ತಿರುವುದರಿಂದ ಸಂಚಾರ ಸಂಕಷ್ಟವಾಗಿ ಪರಿಣಮಿಸುತ್ತಿದೆ.

‘ಸಾಧ್ಯವಾದಷ್ಟು ವಾಹನಗಳನ್ನು ನಿಯಂತ್ರಣ ಮಾಡಲಾಗುತ್ತಿದೆ. ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಏಕಕಾಲಕ್ಕೆ ಲಾರಿಗಳು ಬರುವುದನ್ನು ತಪ್ಪಿಸಲಾಗಿದೆ. ರೈಲ್ವೆ ಗುಡ್‌ಶೆಡ್‌ನಿಂದ ಅಕ್ಕಿ ಮತ್ತು ಗೊಬ್ಬರ ಸಾಗಿಸುವ ಲಾರಿಗಳನ್ನು ಒಂದೊಂದಾಗಿ ಬಿಡುವಂತೆ ಸೂಚಿಸಲಾಗಿದೆ’ ಎಂದು ಸಂಚಾರ ಠಾಣೆಯ ಪಿಎಸ್‌ಐ ಅಮರಪ್ಪ ಶಿವಬಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಹೆದ್ದಾರಿಗೆ ಹೊಂದಿಕೊಂಡು ಅತಿಕ್ರಮಣ ಎಂದು ಗುರುತಿಸಲಾಗಿದ್ದ ಕಟ್ಟಡಗಳನ್ನು ತೆರವು ಮಾಡಿಲ್ಲ. ಇದರಿಂದಾಗಿ ಸುಮಾರು 100 ಅಡಿಗಳಷ್ಟಿರುವ ಹೆದ್ದಾರಿ ಕೆಲಸ ಪೂರ್ಣಗೊಳಿಸುವುದು ವಿಳಂಬವಾಗಿತ್ತು. ಹೆದ್ದಾರಿಗೆ ಹೊಂದಿಕೊಂಡು ಚರಂಡಿ ನಿರ್ಮಾಣ ಮತ್ತು ಪಾದಚಾರಿ ಮಾರ್ಗಗಳನ್ನು ನಿರ್ಮಾಣ ಮಾಡಬೇಕಿದೆ. ಸದ್ಯಕ್ಕೆ ನಿಯಮಾನುಸಾರ ಹೆದ್ದಾರಿ ನಿರ್ಮಾಣ ಕಷ್ಟ ಎನ್ನುವ ಸ್ಥಿತಿ ಕಂಡು ಬರುತ್ತಿದೆ.

‘ಹೆದ್ದಾರಿ ಕಾಮಗಾರಿಯನ್ನು ನಿಯಮಾನುಸಾರ ಮಾಡಬೇಕು. ಅಧಿಕಾರಿಗಳು ಯಾವುದೇ ಪ್ರಭಾವಕ್ಕೆ ಒಳಗಾಗದೆ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ಕಾನೂನು ಪ್ರಕಾರ ಮಾಡಬೇಕು. ಸಾಕಷ್ಟು ವಿಸ್ತೀರ್ಣ ಇರುವ ಹೆದ್ದಾರಿಯು ತಿರುವಿನಲ್ಲಿ ಮಾತ್ರ ಇಕಟ್ಟಾಗಿದೆ. ಇದರಿಂದ ಪ್ರತಿಯೊಬ್ಬ ವಾಹನ ಚಾಲಕರು ತೊಂದರೆ ಅನುಭವಿಸುತ್ತಿದ್ದಾರೆ. ಹಗಲು ಹೊತ್ತಿನಲ್ಲಿ ಸಾರ್ವಜನಿಕರ ಓಡಾಟ ಹೆಚ್ಚಾಗಿರುವುದರಿಂದ ನಗರದಲ್ಲಿ ಲಾರಿಗಳು ಸಂಚರಿಸಲು ಅವಕಾಶ ನೀಡಬಾರದು’ ಎನ್ನುತ್ತಾರೆ ಐಡಿಎಸ್‌ಎಂಟಿ ಬಡಾವಣೆಯ ನಿವೃತ್ತ ಶಿಕ್ಷಕ ಕಿಶನರಾವ್‌ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.