ರಾಯಚೂರು: ‘ಅಟೊ ಚಾಲಕರು ಹಾಗೂ ಮಾಲೀಕರು ಕಾನೂನು ಬದ್ಧವಾಗಿ ವಾಹನಗಳ ದಾಖಲೆ ಹೊಂದಿರಬೇಕು. ಅಚ್ಚುಕಟ್ಟಾಗಿ ದಾಖಲೆಗಳನ್ನು ಇಟ್ಟುಕೊಂಡರೆ ದಂಡದಿಂದಲೂ ತಪ್ಪಿಸಿಕೊಳ್ಳಬಹುದಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಹೇಳಿದರು.
ಇಲ್ಲಿಯ ನಗರ ಸಂಚಾರ ಪೊಲೀಸ್ ಠಾಣೆ ಆವರಣದಲ್ಲಿ ಶನಿವಾರ ದಾಖಲಾತಿ ಹೊಂದಿರುವ ಪ್ರಯಾಣಿಕರ ಆಟೊ ರಿಕ್ಷಾಗಳಿಗೆ ಕ್ರಮ ಸಂಖ್ಯೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಕಾನೂನುಗಳು ಇರುವುದೇ ಚಾಲಕರ ಹಾಗೂ ಪ್ರಯಾಣಿಕರ ಹಿತಕ್ಕಾಗಿ. ಪ್ರತಿಯೊಬ್ಬರೂ ಸಂಚಾರ ನಿಮಯಗಳನ್ನು ಅಚ್ಚುಕಟ್ಟಾಗಿ ಪಾಲನೆ ಮಾಡಬೇಕು’ ಎಂದು ತಿಳಿಸಿದರು.
‘ನಗರದಲ್ಲಿ ಅನೇಕ ಆಟೊರಿಕ್ಷಾ ಚಾಲಕರ ಬಳಿ ಪರ್ಮಿಟ್, ವಾಹನ ಚಾಲನಾ ಲೈಸನ್ಸ್ ಇನ್ನಿತರ ದಾಖಲೆಗಳು ಇರಲಿಲ್ಲ. ಪೊಲೀಸ್ ಇಲಾಖೆ ಮುತುವರ್ಜಿ ವಹಿಸಿ ದಾಖಲೆಗಳನ್ನು ಮಾಡಿಸಿಕೊಟ್ಟಿದೆ. ಇದರ ಶ್ರೇಯಸ್ಸು ಸಂಚಾರ ಠಾಣೆಯ ಪಿಎಸ್‌ಐ ಸಣ್ಣ ಈರೇಶ ಅವರಿಗೆ ಸಲ್ಲುತ್ತದೆ’ ಎಂದು ಹೇಳಿದರು.
‘ಆಟೊ ಚಾಲಕರು ಪ್ರಯಾಣಿಕರ ವಿಶ್ವಾಸ ಉಳಿಸಿಕೊಳ್ಳಬೇಕು. ದೂರದ ಊರುಗಳಿಂದ ರಾತ್ರಿ ವೇಳೆ ರಾಯಚೂರಿಗೆ ಬರುವ ಪ್ರಯಾಣಿಕರಿಂದ ಬೇಕಾಬಿಟ್ಟಿ ದರ ವಸೂಲಿ ಮಾಡಬಾರದು. ಸಾಮಾನ್ಯವಾಗಿ ಗೊತ್ತುಪಡಿಸಲಾದ ದರವನ್ನೇ ಪಡೆದುಕೊಳ್ಳಬೇಕು’ ಎಂದು ಸೂಚಿಸಿದರು.
‘ಬೇರೆ ಊರಿನಿಂದ ಬಂದಾಗ ಹಾಗೂ ಕೆಲಸದ ನಿಮಿತ್ತ ಕಚೇರಿಯಿಂದ ಮನೆಗೆ ಹೊರಡಲು ವಿಳಂಬವಾದಾಗ ರಾತ್ರಿ ವೇಳೆಯಲ್ಲಿ ಮಹಿಳೆಯ ಸುರಕ್ಷತೆಯ ಬಗ್ಗೆ ಹೆಚ್ಚು ಒತ್ತುಕೊಡಬೇಕು. ಪ್ರಯಾಣಿಕರು ಆಟೊಗಳಲ್ಲಿ ಅಮೂಲ್ಯ ವಸ್ತುಗಳನ್ನು ಬಿಟ್ಟು ಹೋದಾಗ ಅದನ್ನು ಪ್ರಾಮಾಣಿಕವಾಗಿ ಮರಳಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಪಿಎಸ್‌ಐ ಸಣ್ಣ ಈರೇಶ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಪೊಲೀಸ್ ಇಲಾಖೆಯಿಂದಲೇ ಆಟೊ ಚಾಲಕರು ಹಾಗೂ ಮಾಲೀಕರ ಮಾಹಿತಿ ಇರುವ ಗುರುತಿನ ಚೀಟಿ ಕೊಡಲಾಗಿದೆ. ಅದರಲ್ಲಿ ಟಿಪಿಆರ್ ನಂಬರ್ ನಮೂದಿಸಲಾಗಿದೆ. ಅದರಲ್ಲಿ ಡಿಎಲ್ ಸಂಖ್ಯೆ, ವಿಳಾಸ, ಆರ್‌ಟಿಒ ಅವಧಿ, ಇನ್ಸುರೆನ್ಸ್, ಪರ್ಮಿಟ್ ಅವಧಿ ನಮೂದಾಗಿದೆ. ಇದು ಅಟೊ ಚಾಲಕರಿಗೆ ಹೆಚ್ಚು ಉಪಯುಕ್ತವಾಗಿದೆ’ ಎಂದು ತಿಳಿಸಿದರು.
‘ನಗರದಲ್ಲಿ ಆಟೊಗಳ ಪರಿಶೀಲನೆ ನಡೆಸಿದಾಗ ಅನೇಕ ಚಾಲಕರ ಬಳಿ ಲೈಸನ್ಸ್ ಇಲ್ಲದಿರುವುದು ಕಂಡು ಬಂದಿತ್ತು. ಹೀಗಾಗಿ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಅವರಿಗೆ ಲೈಸನ್ಸ್‌ಗಳನ್ನು ಮಾಡಿಕೊಡುವ ವ್ಯವಸ್ಥೆ ಮಾಡಲಾಯಿತು. ಇದರಿಂದಾಗಿ ಚಾಲಕರು ಕಾನೂನು ಬದ್ಧವಾಗಿ ಆಟೊಗಳನ್ನು ಓಡಿಸಲು ಅನುಕೂಲವಾಗಿದೆ’ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಅವರು ಸಾಂಕೇತಿಕವಾಗಿ ಐವರಿಗೆ ಗುರುತಿನ ಚೀಟಿ ವಿತರಿಸಿದರು.
ಒಟ್ಟು 200 ಚಾಲಕರ ದಾಖಲೆ ಸಿದ್ಧವಾಗಿದ್ದು, ಅವರಿಗೂ ಗುರುತಿನ ಚೀಟಿ ವಿತರಿಸಲಾಯಿತು.
ಡಿವೈಎಸ್‌ಪಿ ಶಾಂತವೀರ, ಪಶ್ಚಿಮ ವೃತ್ತದ ಸಿಪಿಐ ನಾಗರಾಜ ಉಪಸ್ಥಿತರಿದ್ದರು.
ರಾಯಚೂರು ನಗರದಲ್ಲಿ ಸಂಚಾರ ನಿಯಮಗಳ ಜಾಗೃತಿ ಕಾರ್ಯಕ್ರಮ ತೀವ್ರಗೊಳಿಸಲಾಗಿದ್ದು ಅಪರಾಧ ಪ್ರಕರಣ ತಗ್ಗಿಸುವುದೇ ಇದರ ಉದ್ದೇಶವಾಗಿದೆ.– ಸಣ್ಣ ಈರೇಶ, ಸಂಚಾರ ಠಾಣೆ ಪಿಎಸ್‌ಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.